ಕೋಲಾರ

ಸಾರ್ವಜನಿಕ ಹಿತಾಸಕ್ತಿಗೆ ಕೆಲಸ: ಎಲ್. ಬಾಬು

Published On :

ಕೆಜಿಎಫ್: ಸಾರ್ವಜನಿಕರ ಹಿತಾಸಕ್ತಿಗಾಗಿ ಮತ್ತು ಮಾನವ ಹಕ್ಕು ಸಂರಕ್ಷಣೆಗಾಗಿ ಸದಾ ಹೋರಾಡುವ ಮೂಲಕ ಜನತೆ ಪರ ಸೇವೆ ಸಲ್ಲಿಸುವುದಾಗಿ ಮಾನವ ಹಕ್ಕುಗಳ ಆಯೋಗದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಲ್.ಬಾಬು ಹೇಳಿದರು. ಇತ್ತೀಚೆಗೆ ಇಂಡಿಯಾ ಹ್ಯೂಮನ್ ರೈಟ್ಸ್ ಕನ್ಸೂಮರ್ ರೈಟ್ಸ್ ಪ್ರೊಟೆಕ್ಷನ್ ಆರ್ಗ್‌ನೈಜೇಷನ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಬಾಬು ಆಯ್ಕೆಯಾಗಿದ್ದಾರೆ. ಅವರು ಆಯೋಗದ ಸದಸ್ಯೆ ಮೀರಾ ಸಿ.ಸೆಕ್ಸೆನಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ. ಈ ವೇಳೆ ಆಯೋಗದ ಇತರೆ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

ಉದ್ಯಾನಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಮನವಿ
ಕೆಜಿಎಫ್: ನಗರಸಭೆ ಕಚೇರಿ ಮುಂಭಾಗದಲ್ಲಿರುವ ನೇತಾಜಿ ಸುಭಾಶ್ ಚಂದ್ರಭೋಸ್ ಉದ್ಯಾನವಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಸೇಂಟ್ ಥಾಮಸ್ ಚಾರಿಟಬಲ್ ಟ್ರಸ್ಟ್‌ನ ಕಾರ್ಯಕರ್ತರು ಪೌರಾಯುಕ್ತ ವಿ.ಬಾಲಚಂದ್ರ ಅವರಿಗೆ ಮನವಿ ಸಲ್ಲಿಸಿದರು. ಉದ್ಯಾನವನದಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ದೀಪ, ಸೇರಿದಂತೆ ಯಾವುದೇ ಸರಿಯಾದ ಸೌಲಭ್ಯಗಳಿಲ್ಲ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ರಾತ್ರಿ ವೇಳೆ ಕಾನೂನು ಬಾಹಿರ ಚಟುವಟಿಕೆಗಳು ಕೂಡಾ ನಡೆಯುತ್ತಿವೆ. ಇದೆಲ್ಲವನ್ನೂ ತಡೆಗಟ್ಟಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.  ಈ ವೇಳೆ ಸೆಂಟ್ ಥಾಮಸ್ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಎಂ.ಶಿವರಾಜನ್, ರಯಚಂದ್ರಕುಮಾರ್, ಕಿಶೋರ್‌ಕಿರನ್, ಪ್ರಭು, ವೈರಮಣಿ, ಅರುಣ್‌ವಿಜಯ್, ರಾಜೇಶ್‌ಕುಮಾರ್, ರಾಯರ್ ಮತ್ತಿತರರು ಹಾಜರಿದ್ದರು.

ಕುಡಿವ ನೀರು ಪೂರೈಕೆ, ಬೀದಿ ದೀಪ ದುರಸ್ತಿಗೆ ಪ್ರತಿಭಟನೆ
ಕೆಜಿಎಫ್: ನಗರಸಭಾ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮಗೈಳಿಗೆ ನಗರಸಭೆ ವತಿಯಿಂದ ಉಚಿತ ಕುಡಿಯುವ ನೀರನ್ನು ಪೂರೈಸಬೇಕು ಮತ್ತು ನಗರದ ಪ್ರಮುಖ ವೃತ್ತಗಳಲ್ಲಿರುವ ಹೈಮಾಸ್ಕ್ ಲೈಟ್ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿ ನವಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಸ್.ಎನ್. ರಾಜಗೋಪಾಲಗೌಡ ನೇತೃತ್ವದಲ್ಲಿ ಕಾರ್ಯಕರ್ತರು ನಗರಸಭೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಎರಡು ತಿಂಗಳಿಂದ ಕುಡಿಯುವ ನೀರಿಗಾಗಿ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಒಂದು ಬಿಂದಿಗೆ ನೀರಿಗೆ 3 ರಿಂದ 5 ಕೊಟ್ಟು ಖರೀದಿಸಬೇಕಾಗಿದೆ. ತಕ್ಷಣವೇ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಬೇಕು. ಅದೇ ರೀತಿ ನಗರದ ಹೃದಯ ಭಾಗದಲ್ಲಿರುವ ಗಾಂಧಿ ಮತ್ತು ಸೂರಜ್‌ಮುಲ್ ವೃತ್ತಗಳಲ್ಲಿ ಕಳೆದ ಮೂರು ತಿಂಗಳಿಂದ ಹೈಮಾಸ್ಕ್ ದೀಪಗಳು ದುರಸ್ತಿಯಲ್ಲಿವೆ. ಅವುಗಳನ್ನು ಕೂಡಲೇ ರಿಪೇರಿ ಮಾಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಚಿನ್ನಿ ವೆಂಕಟೇಶ್, ಕಾರ್ಯದರ್ಶಿ ಟಿ.ಪಿ.ವಿಜಯ್, ಸೋಮನಾಥ್, ವಿಜಯಲಕ್ಷ್ಮೀ, ವರಲಕ್ಷ್ಮೀ, ಶ್ರೀಕಾಂತ್, ರವಿಕುಮಾರ್, ರಾಜಾ, ಮುನಿಸ್ವಾಮಿ, ಸಂತೋಷ್ ಸೇರಿದಂತೆ ಇತರೆ ಕಾರ್ಯಕರ್ತರು ಹಾಜರಿದ್ದರು.

ತಾಲೂಕು ರೈತ ಸಂಘಕ್ಕೆ ಇಲಿಯಾಜ್ ಖಾನ್, ಮರಗಲ್ ಶ್ರೀನಿವಾಸ್ ಆಯ್ಕೆ
ಬಂಗಾರಪೇಟೆ:  ತಾಲೂಕು ರೈತ ಸಂಘದ ಅಧ್ಯಕ್ಷರಾಗಿ ಇಲಿಯಾಜ್ ಖಾನ್ ಹಾಗೂ ಹಸಿರು ಸೇನೆ ಅಧ್ಯಕ್ಷರಾಗಿ ಮರಗಲ್ ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರೈತಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ ಸಭೆಯು ಜಿಲ್ಲಾಧ್ಯಕ್ಷ ನಾರಾಯಣಗೌಡ ಅಧ್ಯಕ್ಷತೆಯಲ್ಲಿ ಪಟ್ಟಣದ  ಪ್ರವಾಸಿಮಂದಿರದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಬಂಗಾರಪೇಟೆ ತಾಲೂಕು ರೈತ ಸಂಘದ ಸಂಘಟನೆಯನ್ನು ಪ್ರಬಲಗೊಳಿಸಲು ನೂತನ ರೈತ ಸಂಘದ ಅಧ್ಯಕ್ಷರಾಗಿ ಐತಂಡಹಳ್ಳಿ ಇಲಿಯಾಡ್ ಖಾನ್ ಅವರನ್ನು ಮತ್ತು ಹಸಿರು ಸೇನೆ ಹಾಲಿ ಅಧ್ಯಕ್ಷರಾಗಿರುವ ಮರಗಲ್ ಶ್ರೀನಿವಾಸ್ ಅವರನ್ನು ಜಿಲ್ಲಾ ಸಮಿತಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಕೆ.ನಾರಾಯಣಗೌಡ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂರಂಡಹಳ್ಳಿ ಶಿವಾರೆಡ್ಡಿ ತಿಳಿಸಿದ್ದಾರೆ.

ಮಟ್ಕಾ ದಂಧೆ ನಿರಾತಂಕ!
ಚಿಂತಾಮಣಿ: ನಗರದಲ್ಲಿ ಮಟ್ಕಾ ದಂಧೆ ನಿರಾಂತಕವಾಗಿ ನಡೆಯುತ್ತಿದ್ದರೂ ಪೊಲೀಸರು ಇತ್ತ ಗಮನ ಹರಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.
ನಗರದ ಆಜಾದ್ ಚೌಕ, ಡೈಮಂಡ್ ಟಾಕೀಸ್ ರಸ್ತೆ, ಊರುಮುಂದೆ, ಗಜಾನನ ವೃತ್ತ, ನಾಗನಾಥೇಶ್ವರ ದೇವಾಲಯ ಮುಂಭಾಗದ ಸುತ್ತಮುತ್ತ, ನಕ್ಕುಂದಿಪೇಟೆ ಸೇರಿದಂತೆ ಇನ್ನೂ ಹಲವು ಪ್ರದೇಶಗಳಲ್ಲಿ ಮಟ್ಕಾ ದಂಧೆ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ಕಳೆದ ಹಲವು ದಿನಗಳಿಂದ ಚಿಂತಾಮಣಿಯಲ್ಲಿ ಈ ದಂಧೆಯು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಬಡ ಕೂಲಿ ಕಾರ್ಮಿಕರು ದುಡ್ಡಿನ ಆಸೆ ಹೆಚ್ಚಾಗಿ ಮಟ್ಕಾ ದಂಧೆಯ ಆಟದಲ್ಲಿ ತೊಡಗಿರುವುದು ಕಂಡುಬಂದಿದ್ದು, ಇಂತಹ ಕುಟುಂಬಗಳು ಬೀದಿ ಪಾಲಾಗಿವೆ.
ಇನ್ನು ಮುಂದಾದರೂ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಮಟ್ಕಾ ದಂಧೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಮಟ್ಕಾ ಆಟಕ್ಕೆ ಕುಮ್ಮಕ್ಕು ನೀಡುತ್ತಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಮಟ್ಕಾ ದಂಧೆಗೆ ಸಂಪೂರ್ಣ ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಾಹನ ಡಿಕ್ಕಿ ಹಲವರಿಗೆ ಗಾಯ
ಚಿಂತಾಮಣಿ: ಟ್ರ್ಯಾಕ್ಟರ್ ಮತ್ತು ಬೊಲೆರೊ ವಾಹನ ಮುಖಾಮುಖಿ ಡಿಕ್ಕಿಯಾಗಿ ಹಲವರು ಗಾಯಗೊಂಡಿರುವ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಂದಿಗಾನಹಳ್ಳಿ ಕ್ರಾಸ್ ಬಳಿ ಮಂಗಳವಾರ ನಡೆದಿದೆ. ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ 2 ವಾಹನಗಳು ಅತಿವೇಗ ಮತ್ತು ಅಜಾಗರೂಕತೆಯೇ ಕಾರಣ ಎನ್ನಲಾಗಿದೆ. 2 ಕಡೆಯ ಮುಖಂಡರು ನ್ಯಾಯ ಪಂಚಾಯ್ತಿ ಮೂಲಕ ಸಮಸ್ಯೆಯನ್ನು ಬಗೆಹರಿಸಿದ್ದಾರೆ ಎನ್ನಲಾಗಿದೆ.

ಸಿಡಿಲು ಬಡಿದು ಮನೆ ಭಸ್ಮ: ರು. 3 ಲಕ್ಷ ನಷ್ಟ
ತಿಪಟೂರು: ತಾಲೂಕಿನ ಕಿಬ್ಬನಹಳ್ಳಿ ಬಳ್ಳೇಕೆರೆ ಗ್ರಾಮದ ಸಿದ್ಲಿಂಗಯ್ಯ ಎಂಬುವವರ ತೋಟದ ಮನೆಗೆ ಸೋಮವಾರ ಸಂಜೆ ಸಿಡಿಲು ಬಡಿದು ಮನೆ, ಮನೆಯಲ್ಲಿದ್ದ 10ಸಾವಿರ ಕೊಬ್ಬರಿ, ದವಸ-ಧಾನ್ಯ, ಕೃಷಿ ಪರಿಕರಗಳು ಸೇರಿದಂತೆ ಒಟ್ಟು 3 ಲಕ್ಷ ರು. ಬೆಲೆ ಬಾಳುವ ವಸ್ತುಗಳು ಸುಟ್ಟು ಭಸ್ಮವಾಗಿದ್ದು ಯಾವುದೇ ಪ್ರಾಣ ಹಾನಿಯಾಗಿಲ್ಲ. ಬೆಳಿಗ್ಗೆ ಸಿದ್ಲಿಂಗಯ್ಯನವರ ತೋಟಕ್ಕೆ ತಾಲೂಕು ಬಿಜೆಪಿ ಮುಖಂಡರಾದ ಲೋಕೇಶ್ವರ ಭೇಟಿ ನೀಡಿ ಸಾಂತ್ವನ ಹೇಳಿ ಧೈರ್ಯ ತುಂಬಿದರಲ್ಲದೆ 5ಸಾವಿರ ಪರಿಹಾರ ನೀಡಿದ್ದಾರೆ.

ಕಳ್ಳರ ಪತ್ತೆಗೆ ಪಾವಗಡ ಪೊಲೀಸರು ಯಶಸ್ವಿ
ಪಾವಗಡ: ಸರಣಿಗಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶ್ವಸಿಯಾದ ಪಾವಗಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಅವರಲ್ಲಿದ್ದ 1.70 ಲಕ್ಷ ಮೌಲ್ಯದ 2 ಚಿನ್ನದ ಮಾಂಗಲ್ಯ ಸರ ಹಾಗೂ ಎರಡು ಬೈಕುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಕಳೆದ 2ತಿಂಗಳ ಹಿಂದೆ ರಾತ್ರಿ ಸುಮಾರು 8ಗಂಟೆಯ ಸಮಯದಲ್ಲಿ ಪಟ್ಟಣದ ವಾಸಿ ಮಂಜುಳ ಮನೆಗೆ ಹೋಗುತ್ತಿರುವಾಗ ಏಕಾಏಕಿ ಹಿಂಬದಿಯಿಂದ ಬಂದ ಕಳ್ಳರು ಅವರ ಕೊರಳಲಿದ್ದ ಸುಮಾರು 30 ಗ್ರಾಂನ 50 ಸಾವಿರ ಮೌಲ್ಯದ ಚನ್ನದ ಸರ ಕದ್ದು ಪರಾರಿಯಾಗಿದ್ದರು. ಅದೇ ರೀತಿ ಪಟ್ಟಣದ ವಾಸಿ ಜಯಲಕ್ಷ್ಮೀ ಎಂಬುವರು ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿರುವಾಗ ಅಡ್ಡಗಟ್ಟಿ ತಲೆಗೆ ಬಲವಾಗಿ ಹೊಡೆದು ಆಕೆ ಕೊರಳಲಿದ್ದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜಿಲ್ಲಾ ಎಸ್‌ಪಿ ರಮಣ್‌ಗುಪ್ತ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಲಕ್ಷ್ಮಣ್, ಮಧುಗಿರಿ ಡಿವೈಎಸ್‌ಪಿ  ಜಿ.ಗುರುಸ್ವಾಮಿ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದ ಸಿಪಿಐ ಭಾನುಪ್ರಕಾಶ್ ಪಿಎಸ್‌ಐ ನಟರಾಜ್, ಕ್ರೈಂ ಪೊಲೀಸ್ ಸಿಬ್ಬಂದಿ ಆರೋಪಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿ ದರೋಡೆಯಲ್ಲಿ ಭಾಗಿಯಾಗಿದ್ದ ಗುಟ್ಟಹಳ್ಳಿ ವಾಸಿ ಬಂಗಾರಪ್ಪ ಎಂಬುವರ ಪುತ್ರ ಮಹೇಶ್‌ಕುಮಾರ್ (22), ಸರ್ಕಾರಿ ನೌಕರ ರಾಮಪ್ಪ ಎಂಬುವರ ಪುತ್ರ ಡಿಪ್ಲೊಮೋ ವಿದ್ಯಾರ್ಥಿ ಹೇಮಂತ್ (22),  ಬೆಳುಳ್ಳಿ ವ್ಯಾಪಾರಿ ಕೃಷ್ಣಪ್ಪ ಎಂಬುವರ ಮಗ ಮಂಜುನಾಥ (22)ನನ್ನು ಬಂಧಿಸಿ 1.70 ಲಕ್ಷ ರು.ಗಳ 2ಮಾಂಗಲ್ಯ ಸರಗಳು,1ಹೀರೋ ಹೊಂಡಾ,ಪಲ್ಸರ್ ಸೇರಿದಂತೆ 2 ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಪಘಾತ: ಒಬ್ಬನ ಸಾವು, ಇಬ್ಬರಿಗೆ ತೀವ್ರ ಗಾಯ
ಕುಣಿಗಲ್: ಚಲಿಸುತ್ತಿದ್ದ ಕ್ಯಾಂಟರ್ ಸರಕು ವಾಹನಕ್ಕೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡಿಡ್ಡಿದ್ದಾರೆ. ಪೊಲೀಸರು ಗಾಯಾಳುಗಳನ್ನು ರಕ್ಷಿಸುವ ಜೊತೆಯಲ್ಲಿ ಹತ್ತಕ್ಕೂ ಹೆಚ್ಚು ಅಂಕದ ಕೊಳಿಗಳನ್ನು ಸಹ ರಕ್ಷಿಸಿದ್ದಾರೆ. ಮೃತನನ್ನು ತಮಿಳುನಾಡು ರಾಜ್ಯದ ಈರೋಡ್ ಜಿಲ್ಲೆಯ ಭವಾನಿ ತಾಲೂಕಿನ ಸಿತ್ತೂರ್ ಗ್ರಾಮದ ರಾಜು (30) ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು ಪಳನೀಸ್ವಾಮಿ, ಪೆರುಮಾಳ್ ಎಂದು ಗುರುತಿಸಲಾಗಿದೆ ಇವರೆಲ್ಲರೂ ಭವಾನಿ ತಾಲೂಕಿನ ಸುತ್ತಮುತ್ತಲ ಗ್ರಾಮಗಳವರಾಗಿದ್ದು, ಸ್ವಗ್ರಾಮದಿಂದ ಬೆಂಗಳೂರಿನ ಮೂಲಕ ಮಂಗಳೂರು ಕಡೆಗೆ ತೆರಳುತ್ತಿದ್ದು ಮಂಗಳವಾರ ಬೆಳಗಿನ ಜಾವ ಐದುಗಂಟೆ ಸಮಯದಲ್ಲಿ ಕಾರು ಪಟ್ಟಣದ ಹೊರವಲಯದಲ್ಲಿನ ರಾಹೆ 75ರ ಬೈಪಾಸ್ ರಸ್ತೆಯ ಅಲ್ಲಪ್ಪನಗುಡ್ಡೆ ಗ್ರಾಮದ ಬಳಿ, ಬೆಂಗಳೂರಿನಂದ  ಹಾಸನಕ್ಕೆ ಸರಕು ತುಂಬಿಕೊಂಡು ಚಾಲನೆಯಲ್ಲಿದ್ದ ಕ್ಯಾಂಟರ್ ವಾಹನಕ್ಕೆ ಹಿಂಬದಿಯಿಂದ ಕಾರು ಗುದ್ದಿದ ಪರಿಣಾಮ, ರಾಜು ಸ್ಥಳದಲ್ಲೆ ಮೃತಪಟ್ಟನು.

ವಿಧಾನಸೌಧ ಮುತ್ತಿಗೆ:  ಕೋಡಿಹಳ್ಳಿ ಎಚ್ಚರಿಕೆ
ತಿಪಟೂರು: ಕಲ್ಪತರು ನಾಡು ತಿಪಟೂರು ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ತೀವ್ರ ಬರಗಾಲ ತಾಂಡವವಾಡುತ್ತಿದ್ದು ಸಾವಿರಾರು ತೆಂಗಿನ ಮರಗಳು ಈಗಾಗಲೆ ಒಣಗಿವೆ. ಅಳಿದುಳಿದಿರುವ ತೆಂಗಿನ ಮರಗಳು ಬೀಳುವುದಕ್ಕೂ ಮೊದಲು ಯಗಚಿ ಹಿನ್ನೀರನ್ನು ತಾಲೂಕಿಗೆ ಹರಿಸಲೇಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.  ತಾಲೂಕಿನ ಕೊನೇಹಳ್ಳಿಯಲ್ಲಿ ತಾಲೂಕು ರೈತ ಸಂಘ ಯಗಚಿ ಹಿನ್ನೀರು ಯೋಜನೆ ಬಗ್ಗೆ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಯಗಚಿ ಅಣೆಕಟ್ಟು ತುಂಬಾ ಎತ್ತರದಲ್ಲಿರುವುದರಿಂದ ಕಾಲುವೆ ಮೂಲಕ ನೀರನ್ನು ಕಡಿಮೆ ಖರ್ಚಿನಲ್ಲಿ ತಿಪಟೂರಿಗೆ ಹರಿಸಬಹುದು. ತಾಲೂಕಿನ 16 ಕೆರೆಗಳು, ಬೇಲೂರು ಹಾಗೂ ಅರಸೀಕೆರೆ ಸೇರಿದಂತೆ ಒಟ್ಟು 54 ಕೆರೆಗಳಿಗೆ ನೀರು ಹರಿಸಬಹುದಾಗಿದೆ. ಈ ಯೋಜನೆಗೆ 120 ಕೋಟಿ ರು. ವೆಚ್ಚವಷ್ಟೆ ತಗುಲಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.