ನೀರಿನ ಸಮಸ್ಯೆ ನಿವಾರಣೆಗೆ ನಗರಸಭಾಧ್ಯಕ್ಷರ ಪರದಾಟ
ಕೋಲಾರ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಜನರ ಕಷ್ಟ ನಿವಾರಿಸಲು ನಗರಸಭೆ ಅಧ್ಯಕ್ಷರು ಪರದಾಡುವಂತಾಗಿದೆ.
ನಗರಸಭೆಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದು ಟ್ಯಾಂಕರ್ ಮಾಲೀಕರು ಸಮರ್ಪಕವಾಗಿ ವಾರ್ಡುಗಳಲ್ಲಿ ನೀರು ಸರಬರಾಜು ಮಾಡದಿರುವುದರಿಂದ ಜನತೆ ಸಿಟ್ಟಾಗಿದ್ದಾರೆ.
35 ವಾರ್ಡ್‌ಗಳಲ್ಲಿ ಬಹುತೇಕ ನೀರಿನ ಸಮಸ್ಯೆ ಕಾಡುತ್ತಿದೆ. ಒಂದೆರಡು ವಾರ್ಡ್‌ಗಳಲ್ಲಿ ಮಾತ್ರ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡುವುದನ್ನು ಬಿಟ್ಟರೆ ಉಳಿದಂತೆ ಎಲ್ಲ ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ನಗರದಲ್ಲಿ ಪ್ರತಿ ದಿನ 54 ಟ್ಯಾಂಕರ್‌ಗಳಿಂದ 320 ಟ್ರಿಪ್‌ಗಳಂತೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಇದು ಜನರಿಗೆ ಸರಿಯಾಗಿ ಸೇರುತ್ತಿಲ್ಲವೆಂಬ ಆರೋಪ ಕೇಳಿ ಬಂದಿದೆ. ಟ್ಯಾಂಕರ್ ಮಾಲೀಕರು ಒಂದು ದಿನಕ್ಕೆ 5 ರಿಂದ 6 ಟ್ರಿಪ್ ಲೆಕ್ಕವನ್ನು ನಗರಸಭೆಗೆ ನೀಡುತ್ತಿದ್ದಾರೆ. ಆದರೆ ನಗರದಲ್ಲಿ ದಿನಕ್ಕೆ ಕನಿಷ್ಠ 6 ಗಂಟೆ ವಿದ್ಯುತ್ ಇರುವುದೇ ಕಷ್ಟ. ಹೀಗಿರುವಾಗ ಟ್ಯಾಂಕರ್ ಮಾಲೀಕರು ಪ್ರತಿ ದಿನ 6 ಟ್ರಿಪ್ ಕೊಡಲು ಹೇಗೆ ಸಾಧ್ಯವೆಂಬುದು ಜನತೆಯ ಅನುಮಾನಕ್ಕೆ ಕಾರಣವಾಗಿದೆ.
ನಗರಸಭೆಯಲ್ಲಿ ಪ್ರತಿ ತಿಂಗಳು ಟ್ಯಾಂಕರ್ ಬಿಲ್ ಸುಮಾರು 33 ಲಕ್ಷವಾಗುತ್ತಿದೆ. ಸರ್ಕಾರ ಯಾವುದೇ ಮೂಲದಿಂದಾದರೂ ಸರಿ ಜನರಿಗೆ ನೀರು ಕೊಡಬೇಕೆಂಬ ಆದೇಶವನ್ನು ಹೊರಡಿಸಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಟ್ಯಾಂಕರ್ ಮಾಲೀಕರು ದಿನಕ್ಕೆ 2 ರಿಂದ 3 ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡಿ 5 ರಿಂದ 6 ಟ್ರಿಪ್‌ಗಳ ಲೆಕ್ಕವನ್ನು ಬರೆಸುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.
ಜಿಲ್ಲಾಧಿಕಾರಿ ಡಿ.ಕೆ.ರವಿ ಅವರು ನಗರದ 35 ವಾರ್ಡ್‌ಗಳಲ್ಲಿ ಇದ್ದಂತಹ ಸಮಸ್ಯೆ ಮತ್ತು ಟ್ಯಾಂಕರ್ ಮಾಫಿಯಾ ತಪ್ಪಿಸಲು ಎಲ್ಲ ವಾರ್ಡ್‌ಗಳಲ್ಲಿ ಸಂಪು ನಿರ್ಮಿಸಿ ಅಲ್ಲಿಗೆ ನೀರನ್ನು ತುಂಬಿಸುವ ಮೂಲಕ ಜನರಿಗೆ ನೀರು ಕೊಡಲು ನಿರ್ಧರಿಸಿದ್ದರು.
ಟ್ಯಾಂಕರ್ ಮಾಲೀಕರು ನೀಡುತ್ತಿದ್ದ ತಪ್ಪು ಲೆಕ್ಕ ತಪ್ಪಿಸಲು ಸಿಸಿ ಕ್ಯಾಮೆರಾಗಳನ್ನು ಪ್ರಯೋಗಿಕವಾಗಿ ಅಮ್ಮೇರಹಳ್ಳಿ, ತೊಟ್ಟಿಬಾವಿಗಳ ಬಳಿ ಅಳವಡಿಸಲಾಗಿತ್ತು. ಆದರೆ ದುಷ್ಕರ್ಮಿಗಳು ಸಿಸಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿ ಚಾಪೆ ಕೆಳಗೆ ನುಸುಳಲು ಯತ್ನಿಸುತ್ತಿದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿದಿರುವ ನಗರಸಭೆ ಅಧ್ಯಕ್ಷ ಬಿ.ಎಂ. ಮುಬಾರಕ್ ನೀರಿನ ಸಮಸ್ಯೆ ನಿವಾರಣೆ ಮಾಡಲು ಪ್ರಯತ್ನಿಸುದ್ದಾರೆ ಆದರೂ ಅಧಿಕಾರಿಗಳ ಅಸಹಕಾರ ಮತ್ತು ಟ್ಯಾಂಕರ್ ಮಾಲೀಕರಿಗೆ ಕೆಲ ಸದಸ್ಯರು ಕುಮ್ಮಕ್ಕು ನೀಡುತ್ತಿರುವುದು ಕಗ್ಗಂಟಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

