ಕೋಲಾರ

ಕೃಷಿಯಲ್ಲಿ ರೇಷ್ಮೆ ಇಲಾಖೆ ವಿಲೀನಕ್ಕೆ ವಿರೋಧ

Published On :

ಚಿಕ್ಕಬಳ್ಳಾಪುರ: ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸಲು ಸರ್ಕಾರ ಸಿದ್ಧತೆಗಳನ್ನು ಕೈಗೊಳ್ಳುತ್ತಿರುವುದಕ್ಕೆ ರೇಷ್ಮೆ ಕೃಷಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಹೊರ ವಲಯದ ಚದಲಪುರ ಬಳಿ ಇರುವ ರೇಷ್ಮೆ ಬಿತ್ತನೆಕೋಠಿಯ ಸಭಾಂಗಣದಲ್ಲಿ ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಸಭೆ ಸೇರಿ ಸರ್ಕಾರದ ನಿರ್ಧಾರವನ್ನು ಖಂಡಿಸಿದರು. ರೇಷ್ಮೆ ಇಲಾಖೆ ಅತ್ಯಂತ ಹಳೆ ಇಲಾಖೆಯಾಗಿದ್ದು, ಮೈಸೂರು ಮಹಾರಾಜರು ಮತ್ತು ಟಿಪ್ಪುಸುಲ್ತಾನ್  ಕಾಲದಿಂದಲೂ ಲಕ್ಷಾಂತರ ರೈತರಿಗೆ ಜೀವನಾಡಿಯಾಗಿರುವ ಇಲಾಖೆ ಮುಚ್ಚಲು ಹೊರಟಿರುವ ಸರ್ಕಾರದ ಧೋರಣೆ  ಸರಿಯಲ್ಲ. ಕೂಡಲೇ ಸರ್ಕಾರ ಈ ರೈತವಿರೋಧಿ ಚಿಂತನೆಯನ್ನು ವಾಪಸು ಪಡೆಯಬೇಕೆಂದು ಒತ್ತಾಯಿಸಿದರು.
ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ಅಧ್ಯಕ ಮಳ್ಳೂರು ಶಿವಣ್ಣ ಮಾತನಾಡಿ, 2014ನೇ ಇಸವಿಯಲ್ಲಿ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ರೇಷ್ಮೆ ಇಲಾಖೆಯನ್ನು ಮುಚ್ಚಿ, ಕೃಷಿ ಇಲಾಖೆಯೊಂದಿಗೆ ಸಂಯೋಜನೆಗೊಳಿಸಲು ಸರ್ಕಾರ ಸಿದ್ಧತೆ ಕೈಗೊಳ್ಳುತ್ತಿದೆ. ಈ ಬಗ್ಗೆ ಮೇ 17 ರಂದು ಆದೇಶವನ್ನು ಹೊರಡಿಸಿ, ಅಂತಿಮವಾಗಿ ತೀರ್ಮಾನ ಕೈಗೊಳ್ಳಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ 8 ಜನರ ಸಮಿತಿಯನ್ನು ನೇಮಕ ಮಾಡಿದೆ ಎಂದು ಆರೋಪಿಸಿದರು. ಸಂಚಾಲಕ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, ಚೈನಾ ರೇಷ್ಮೆಗೆ ಸ್ಪರ್ಧೆಯನ್ನು ಕೊಡುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿಯಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಿದ್ದ ಸರ್ಕಾರ ರೇಷ್ಮೆ ಇಲಾಖೆಯನ್ನೇ ಮುಚ್ಚಲು ಹೊರಟಿರುವುದು ದುರದೃಷ್ಟಕರ. ಸುಮಾರು 8-9 ಜಿಲ್ಲೆಗಳ ರೇಷ್ಮೆ ಕೃಷಿಕರ ಬದುಕನ್ನು ಸಂಕಷ್ಟದ ಸ್ಥಿತಿಗೆ ತಳ್ಳುವ ಹುನ್ನಾರವಿದು ಎಂದರು.  ಸುಮಾರು 1 ಲಕ್ಷ 20 ಸಾವಿರ ಕುಟುಂಬಗಳು ರೇಷ್ಮೆ ಕೃಷಿಯನ್ನು ನಂಬಿ ಜೀವನ ಸಾಗಿಸುತ್ತಿದ್ದು ಹಾಗೇನಾದರೂ ರೇಷ್ಮೆ ಇಲಾಖೆಯನ್ನು ಮುಚ್ಚಿದಲ್ಲಿ ರೇಷ್ಮೆ ಕೃಷಿ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಗಳಿಗೆ ಕಪ್ಪು ಚುಕ್ಕೆಯಾಗಲಿದೆ ಎಂದರು. ಜಿ.ಪಂ. ಸದಸ್ಯ ನಾರಾಯಣಸ್ವಾಮಿ ಮಾತನಾಡಿದರು.
ರೇಷ್ಮೆ ಬೆಳೆಯುವ ಎಲ್ಲಾ ಜಿಲ್ಲೆಗಳ 10 ಪ್ರತಿನಿಧಿಗಳನ್ನೊಳಗೊಂಡ ನಿಯೋಗ ಮೇ 30 ರಂದು ಆಯುಕ್ತರನ್ನು ಭೇಟಿ ಮಾಡಿ, ರೇಷ್ಮೆ ಕೃಷಿಕರ ನಿಲುವನ್ನು ಸರ್ಕಾರಕ್ಕೆ ತಿಳಿಸಲು ನಿರ್ಧಾರ ಕೈಗೊಳ್ಳಲಾಯಿತು.
ಈ ವೇಳೆ ಡಿ.ಕೆ. ಶ್ರೀರಾಮ್, ಆಂಜಿನಪ್ಪ, ಭೈರೇಗೌಡ, ಹರೀಶ್, ಮಲ್ಲಿಕಾರ್ಜುನರೆಡ್ಡಿ, ಸುರೇಶ್, ವಾಸುದೇವ್, ಶ್ರೀನಿವಾಸ್, ವಿಶ್ವನಾಥ್, ಮುನಿರಾಜು, ಆನಂದ್,  ವಾಸು, ಆಂಜನೇಯ ರೆಡ್ಡಿ, ದೇವರಾಜ್ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.