ರಸ್ತೆ ಕಾಮಗಾರಿ, ಕುಡಿಯುವ ನೀರು ಸಮಸ್ಯೆ ಚರ್ಚೆ
ಮಾಲೂರು: ಪುರಸಭೆಯ ನೂತನ ಸದಸ್ಯರ ಮೊದಲನೆಯ ಸಭೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ ಅವರ ನೇತೃತ್ವದಲ್ಲಿ ಬುಧವಾರ ನಡೆಯಿತು.
ಸಭೆ ಆರಂಭವಾಗುತ್ತಿದ್ದಂತೆ ಹಿರಿಯ ಸದಸ್ಯರಾದ ಸಿ.ಪಿ.ನಾಗರಾಜ್ ಹಾಗೂ ಎಂ.ಪಿ.ವಿಜಯ ಕುಮಾರ್ ರವರು, ಅಜೆಂಡಾವುಳ್ಳ ನೋಟಿಸ್ ಏಳು ದಿನಗಳಕ್ಕಿಂತ ಮುಂಜೆ ನೀಡದೆ ಸಭೆ ಕರೆದಿರುವುದು ಸರಿಯಲ್ಲ ಎಂದು ತಿಳಿಸಿದರು. ಇನ್ನೂ ಮುಂದೆ ಸಭೆಯಲ್ಲಿ ಚರ್ಚಿತವಾಗುವ ವಿಷಯಗಳು ಹಾಗೂ ಜಮಾ-ಖರ್ಚುಗಳ ಮಾಹಿತಿ ನೀಡಿ, ನಂತರ ಸಭೆ ನಡೆಸಬೇಕು ಎಂದರು.ಇದಕ್ಕೆ ಎಲ್ಲ ಸದಸ್ಯರುಗಳು ಸಹಮತ ವ್ಯಕ್ತಪಡಿಸಿದರು.
2 ತಿಂಗಳಿಂದ ಪಟ್ಟಣದಲ್ಲಿ 5 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳ ವಿಳಂಬದಿಂದ ಸಂಚಾರ ದುಸ್ತರವಾಗಿದೆ. ಜಲ್ಲಿ ಹಾಕಿ ಬಿಟ್ಟ ರಸ್ತಗಳಲ್ಲಿ ಮತ್ತೆ ಜಲ್ಲಿ ಚದುರಿ ರಸ್ತೆ ಹಾಳಾಗುತ್ತಿದೆ ಎಂದು ಸದಸ್ಯ ಹನುಮಂತರೆಡ್ಡಿ, ಮುರುಳಿ, ವೇಮನ್ ಆರೋಪಿಸಿದರು.
ಸಭೆಯಲ್ಲಿ ಅನುಮೋದನೆ ಇಲ್ಲದೆ ಪ್ರಥಮ ಹಂತದ ಬಿಲ್‌ಗಳ ಮೊತ್ತವನ್ನು ನೀಡಲು ಸಾಧ್ಯವಿಲ್ಲ ಎಂದು ಮುಖ್ಯಾಧಿಕಾರಿ ಸಭೆ ತಿಳಿಸಿದರು. ಈ ಸಭೆಯಲ್ಲಿ ಅನುಮೋದನೆ ಸಿಕ್ಕದ ತಕ್ಷಣ ಕಾಮಗಾರಿ ಪ್ರಾರಂಭಿಸುವುದಾಗಿ ಗುತ್ತಿಗೆದಾರ ತಿಳಿಸಿದ್ದು, ಗುರುವಾರದಿಂದಲೇ ರಸ್ತೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸದಸ್ಯರಿಗೆ ತಿಳಿಸಿದರು.
ಇತ್ತೀಚೆಗೆ ನಡೆದ ಟಾಸ್ಕ್‌ಪೋರ್ಸ್ ಸಭೆಯಲ್ಲಿ ನಿರ್ಧಾರವಾಗಿರುವಂತೆ ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಆಗುತ್ತಿಲ್ಲ. ಕೇವಲ 2 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಸದಸ್ಯರು ಆರೋಪಿಸಿದರು. ಇದಕ್ಕೆ ದನಿಗೊಡಿಸಿದ ಸದಸ್ಯ ರಾಮಮೂರ್ತಿ, ವಾರ್ಡ್‌ಗೆ ಬರುತ್ತಿರುವ ಟ್ಯಾಂಕರ್‌ಗಳು 5 ಸಾವಿರ ಲೀ.ಗೆ ಬದಲಾಗಿ ಕೇವಲ 4 ಸಾವಿರ ಲೀ. ಸಾಮರ್ಥ್ಯ ಹೊಂದಿವೆ. ಈ ಟ್ಯಾಂಕರ್‌ಗಳನ್ನು ಕೂಡಲೇ ಬದಲಾಯಿಸಬೇಕು. 9ನೇ ವಾರ್ಡ್ ತುಂಬಾ ದೊಡ್ಡದಿದ್ದು, ಹೆಚ್ಚಿನ ಸವಲತ್ತು ನೀಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಮುಖ್ಯಾಧಿಕಾರಿ ರೇಣುಕಾ, ಈ ಹಿಂದೆ ನಡೆದ ಟಾಸ್ಕ್ ಫೋರ್ಸ್‌ಸಭೆಯಲ್ಲಿ ಸದಸ್ಯರ ಅಭಿಪ್ರಾಯದಂತೆ, ದಿನ ಪ್ರತಿ 116 ಟ್ಯಾಂಕರ್ ನೀರು ಎಲ್ಲ ವಾರ್ಡ್‌ಗಳಿಗೆ ವಿತರಣೆ ಯಾಗಬೇಕಾಗಿದೆ. ಆದರೆ ನೀರು ವಿತರಿಸುವ ಟ್ಯಾಂಕರ್‌ಗಳು ಮುಂದೆ ಬಾರದ ಕಾರಣ ಹಾಲಿ 68 ಟ್ಯಾಂಕರ್‌ಗಳನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ.
ಈ ಬಗ್ಗೆ ಸದಸ್ಯರು ಜವಾಬ್ದಾರಿ ತೆಗೆದುಕೊಂಡು ಟ್ಯಾಂಕರ್‌ಗಳನ್ನು ಒದಗಿಸಿಕೊಟ್ಟರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಪೂರೈಸಲಾಗುವುದು ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಹುತೇಕ ಸದಸ್ಯರು, ಟ್ಯಾಂಕರ್ ಮಾಲೀಕರನ್ನು ಕರೆತರುವುದಾಗಿ ಭರವಸೆ ನೀಡಿದರು.ನಂತರ ಪಟ್ಟಣದ 1, 6 ಹಾಗೂ 9ನೇ ವಾರ್ಡ್‌ಗಳಲ್ಲಿ ಭೂಗತ ತೊಟ್ಟಿ ನಿರ್ಮಿಸಲು ಸಭೆ ಒಪ್ಪಿಗೆ ನೀಡಿತು.ಸಭೆಯಲ್ಲಿ ಸದಸ್ಯರಾದ ಸೋಮಣ್ಣ, ರೇಖಾ ಸುಬ್ರಮಣ್ಯ, ಗುಲಾಬ್ ಜಾನ್,ಪಚ್ಚಪ್ಪ, ಮಾಲಾದ್ರಿ, ಲಿಂಗೇಶ್, ಸುಲೋಚನಾ, ವಿಜಯಲಕ್ಷ್ಮಿ, ಜಾಕೀರ್‌ಖಾನ್, ಗೀತಾ ವೆಂಕಟೇಶ್ ಸೇರಿದಂತೆ ಎಲ್ಲ ಸದಸ್ಯರು, ಅಧಿಕಾರಿ ವರ್ಗದವರು ಇದ್ದರು.
ಪ್ರಮಾಣ ವಚನ ಸ್ವೀಕರಿಸಿದ ಪುರಸಭೆ ಸದಸ್ಯರು
ಮಾಲೂರು: ಇಲ್ಲಿನ ಪುರಸಭೆ ಸದಸ್ಯರಿಗೆ ಬುಧವಾರ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಪ್ರಮಾಣ ವಚನ ಬೋಧಿಸಲಾಯಿತು. ಚುನಾವಣೆಯಲ್ಲಿ ಗೆದ್ದು 14 ತಿಂಗಳಾದರೂ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಮೀಸಲು ಹಾಗೂ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಿಳಂಬವಾಗಿತ್ತು. ಪುರಸಭೆ ಮುಖ್ಯಾಧಿಕಾರಿ ರೇಣುಕಾ ಅವರು ಮೊದಲಿಗೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ ಹಾಗೂ ಉಪಾಧ್ಯಕ್ಷ ಶ್ರೀವಲ್ಲಿ ರಮೇಶ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಪಟ್ಟಣ ವಾರ್ಡ್ ಅನುಗುಣವಾಗಿ ಸದಸ್ಯರಿಗೆ ಬೋಧಿಸಲಾಯಿತು. ಒಬ್ಬ ಸದಸ್ಯೆ ಗೈರು ಹಾಜರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

