ಭೂ ಚೇತನ ಯೋಜನೆ ಸದ್ಬಳಕೆಗೆ ರೈತರಿಗೆ ಕರೆ
ಗುಡಿಬಂಡೆ: ಸರ್ಕಾರ ರೈತರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ಭೂ ಚೇತನ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಹಂಪಸಂದ್ರ ಗ್ರಾಪಂ ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು.
ತಾಲೂಕಿನ ಹಂಪಸಂದ್ರ ಗ್ರಾಮದ ಗ್ರಂಥಾಲಯದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಹೋಬಳಿ ಮಟ್ಟದ ಭೂ ಚೇತನ ತರಬೇತಿ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಸಾಲದ ಬಾಧೆಯಿಂದ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಕೃಷಿ ಲಾಭದಾಯಕವಾದಗ ಮಾತ್ರ ರೈತನ ಬದುಕು ಹಸನಾಗಲು ಸಾಧ್ಯ. ರೈತರ ಉದ್ಧಾರಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ಆ ಯೋಜನೆಗಳು ಗ್ರಾಮೀಣ ಭಾಗದ ಜನತೆಗೆ ತಲುಪುತ್ತಿಲ್ಲ. ಮೊದಲು ಸರ್ಕಾರದಿಂದ ರೈತರಿಗೆ ಸಿಗುವ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಸರ್ಕಾರ ಮಾಡಬೇಕಾಗಿದೆ ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್ ಮಾತನಾಡಿ, ಭೂಚೇತನ ಎಂದರೆ ಭೂಮಿಗೆ ಚೇತನ ತುಂಬುವುದು ಎಂದರ್ಥ. ರೈತರು ತಿಳಿದೋ ತಿಳಿಯದೆಯೋ ಹೆಚ್ಚಿನ ಇಳುವರಿ ಪಡೆಯಲು ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಾರೆ. ಇದರಿಂದ ಭೂಮಿಯು ಫಲವತ್ತತೆಯನ್ನು ಕಳೆದುಕೊಳ್ಳುವುದರ ಜೊತೆಗೆ ಮುಂದೊಮ್ಮೆ ಭೂಮಿ ಬರಡಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಪ್ರತಿ ರೈತ ಸಾವಯವ ಗೊಬ್ಬರಗಳನ್ನು ಬಳಸಬೇಕಾಗಿದೆ. ಆಗ ನಾವು ಭೂಮಿಗೆ ಚೇತನ ತುಂಬುವಂತಾಗುತ್ತದೆ ಎಂದರು. ತರಭೇತಿಯಲ್ಲಿ ಭೂ ಚೇತನ ಅನುವುಗಾರರಾದ ರವಿಚಂದ್ರ ಮತ್ತು ಈಶ್ವರಪ್ಪ ಬಿತ್ತನೆ ಬೀಜಗಳನ್ನು ಯಾವ ರೀತಿಯಲ್ಲಿ ಬಿತ್ತಬೇಕು, ಮಣ್ಣು ಪರೀಕ್ಷೆ ಮಾಡುವ ವಿಧಾನಗಳನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ರೇಷ್ಮೆ ಇಲಾಖೆಯ ಮ.ಗ. ಹೆಗಡೆ, ಕೃಷಿ ಅಧಿಕಾರಿ ಶಂಕರಯ್ಯ, ತೋಟಗಾರಿಕೆ ಇಲಾಖೆಯ ಪ್ರಸಾದ್, ರೈತ ಸಂಘದ ನಾರಾಯಣಸ್ವಾಮಿ, ಜಲಾನಯನ ಇಲಾಖೆಯ ರಾಮಚಂದ್ರಪ್ಪ ಹಾಗೂ ಭೂ ಚೇತನ ಅನುವುಗಾರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

