ತಾರತಮ್ಯವಿಲ್ಲದೆ ರೋಗಿಗಳ ಸೇವೆ ಮಾಡಿ: ಡಾ. ನಾಗಪ್ಪ
ಕೆಜಿಎಫ್: ನರ್ಸಿಂಗ್ ವಿದ್ಯಾರ್ಥಿಗಳು ಯಾವುದೇ ಭೇದ ಭಾವವಿಲ್ಲದೆ ರೋಗಿಗಳ ಹಾಗೂ ಸಾರ್ವಜನಿಕರ ಸೇವೆಯಲ್ಲಿ ನಿರತರಾಗಿ, ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದು ಡಾ.ನಾಗಪ್ಪ ಹೇಳಿದರು.
ಆಂಡ್ರಸನ್ಪೇಟೆ ವ್ಯಾಪ್ತಿಯಲ್ಲಿರುವ ನೂರಿ ನರ್ಸಿಂಗ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳ ಸಮಾವೇಶದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಡಿವೈಎಸ್ಪಿ ಎ.ಕೆ.ವಿವೇಕಾನಂದ ಅವರು ಮಾತನಾಡಿ, ಕಾಯಿಲೆ ಬಿದ್ದ ರೋಗಿಗಳಿಗೆ ಹಗಲು ರಾತ್ರಿ ಎನ್ನದೆ ಔಪಚಾರವನ್ನು ಮಾಡಿದ ನೈಟಿಂಗೇಲ್ ಅವರ ಸೇವೆಯನ್ನು ವಿದ್ಯಾರ್ಥಿಗಳು ಪಾಲಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಿಪಿಐ ಲಕ್ಷ್ಮೀನಾರಾಯಣ, ಬೆಮೆಲ್ ಮೆಡಿಕಲ್ ಸೂಪರಿಟೆಂಡೆಂಟ್ ಸೂಸನ್, ಪಿಎಸ್ಐ ಎಲ್.ಆಂಜಪ್ಪ, ನೂರಿ ನರ್ಸಿಂಗ್ ಕಾಲೇಜಿನ ಮುಖ್ಯಸ್ಥ ನೂರಿ ಶಾಜ್ಜಾದಾ, ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಫಾಯಿ ಕರ್ಮಚಾರಿಗಳನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲು ಆಗ್ರಹ
ಕೆಜಿಎಫ್: ಇಲ್ಲಿನ ನಗರಸಭೆಯಲ್ಲಿ ದಿನಗೂಲಿ ನೌಕರರಾಗಿ ದುಡಿಯುತ್ತಿದ್ದ 60 ಸಫಾಯಿ ಕರ್ಮಚಾರಿಗಳನ್ನು ದಿಢೀರ್ನೇ ಕೆಲಸದಿಂದ ತೆಗೆದು ಹಾಕಲಾಗಿದೆ. ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಅನೇಕ ಹೋರಾಟಗಳನ್ನು ಮಾಡಿದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಹೋರಾಟ ಸಮಿತಿಯ ಸದಸ್ಯ ಬಾಬು ಹಾಗೂ ಬಾಲಮಧು ಆರೋಪಿಸಿದ್ದಾರೆ.
ನಗರದ ಕೇನಡೀಸ್ ತೆಲುಗು ಲೈನ್ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 60 ಸಫಾಯಿ ಕರ್ಮಚಾರಿಗಳು ನಾಲ್ಕು ತಿಂಗಳಿಂದ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕರಾಗಲಿ ಇಲ್ಲವೇ ನಗರಸಭೆಯ ಪೌರಾಯುಕ್ತರಾಗಲಿ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು ದೂರಿದರು. ಹೀಗೆಯೇ ನಿರ್ಲಕ್ಷ್ಯ ಮುಂದುವರಿದರೆ ನಗರಸಭೆ ಮುಂಭಾಗ ಧರಣಿ ಸತ್ಯಾಗ್ರಹ ಮಾಡಲಾಗುವುದು. ಅಲ್ಲದೇ, ಮತ್ತೆ ಮಲ ಹೊರುವ ಕೆಲಸಕ್ಕೆ ಮುಂದಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಫಾಯಿ ಕರ್ಮಚಾರಿ ಹೋರಾಟ ಸಮಿತಿಯ ಸದಸ್ಯರಾದ ಹಿಜ್ರರ್, ರಾಜೇಂದ್ರ, ಸುಬ್ರಮಣಿ, ದಿನಕರನ್ ಸೇರಿದಂತೆ ಇತರೆ ಮುಖಂಡರು ಹಾಗೂ ಸದಸ್ಯರು ಹಾಜರಿದ್ದರು.
ರಾಜೇನಹಳ್ಳಿ ಗ್ರಾಪಂ ಅಧ್ಯಕ್ಷರ ಆಯ್ಕೆ
ಟೇಕಲ್: ರಾಜೇನಹಳ್ಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ಯಶೋಧಮ್ಮ ತಿಮ್ಮರಾಯಪ್ಪ, ಉಪಾಧ್ಯಕ್ಷರಾಗಿ ನಾಗಮ್ಮ ಗುಂಡಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮುಗಿದು ರಾಜಿನಾಮೆ ಸಲ್ಲಿಸಿದ್ದು, ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. 15 ಮಂದಿ ಸದಸ್ಯರಿರುವ ಗ್ರಾಪಂನಲ್ಲಿ ಇಬ್ಬರು ಸದಸ್ಯರು ಗೈರು ಹಾಜರಾಗಿ ಅಧ್ಯಕ್ಷ ಸ್ಥಾನಕ್ಕೆ ಯಶೋಧಮ್ಮ ತಿಮ್ಮರಾಯಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ನಾಗಮ್ಮ ಗುಂಡಪ್ಪ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬಿ.ಸಿ. ಆನಂದ್ ಇವರ ಆಯ್ಕೆ ಘೋಷಿಸಿದರು. ನೂತನ ಅಧ್ಯಕ್ಷೆ ಯಶೋಧಮ್ಮ ತಿಮ್ಮರಾಯಪ್ಪ ಮಾತನಾಡಿ, ಗ್ರಾಮಗಳ ಸ್ವಚ್ಛತೆ, ರಸ್ತೆ, ಕುಡಿಯುವ ನೀರನ್ನು ಸಮಾನತೆಯಿಂದ ನೀಡುವುದಾಗಿ ತಿಳಿಸಿದರು. ಗ್ರಾಪಂ ಸದಸ್ಯರು ಇದ್ದರು.
ಪುರಸಭೆ ಅಧಿಕಾರಿ ಮೇಲೆ ಹಲ್ಲೆ ಯತ್ನ
ಮುಳಬಾಗಲು: ಎನ್ಒಸಿ ನೀಡಲು ಸಮಗ್ರ ದಾಖಲೆ ಒದಗಿಸುವಂತೆ ಕೇಳಿದ್ದಕ್ಕೆ ಪುರಸಭೆ ಮಾಜಿ ಸದಸ್ಯ ಜಿ. ಎಂ. ಬಾಲಕೃಷ್ಣ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಪುರಸಭೆ ಮುಖ್ಯಾಧಿಕಾರಿ ಅಶೋಕ್ ಕುಮಾರ್ ಮುಳಬಾಗಲು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಬೇರೊಬ್ಬರ ಅರ್ಜಿ ತಂದು ಎನ್ಒಸಿ ನೀಡಲು ಬಾಲಕೃಷ್ಣ ಒತ್ತಾಯಿಸಿದರು. ನಿಯಮಾನುಸಾರ ದಾಖಲೆ ಒದಗಿಸದ ಕಾರಣ ಅರ್ಜಿ ನಿರಾಕರಿಸಲಾಯಿತು. ಇದೇ ಕಾರಣಕ್ಕಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾರ್ವಜನಿಕರ ಮುಂದೆ ಹಲ್ಲೆಗೆ ಯತ್ನಿಸಿದ್ದಾರೆ. ಈ ಬಗ್ಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೋಲಾರಮ್ಮ ಕೆರೆಯಲ್ಲಿ ಶವ ಪತ್ತೆ
ಕೋಲಾರ: ನಗರದ ಕೋಲಾರಮ್ಮ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಇಲ್ಲಿನ ಗಾಂಧಿನಗರದ ಸೇತುವೆ ಸಮೀಪದ ಕೋಲಾರಮ್ಮ ಕೆರೆಯಂಗಳದಲ್ಲಿ ಪತ್ತೆಯಾಗಿರುವ ಸುಮಾರು 45 ವರ್ಷದ ಅಪರಚಿತ ಪುರುಷನ ಶವ ಸುಮಾರು ಮೂರ್ನಾಲ್ಕು ದಿನಗಳ ಹಿಂದೆ ನೀರಿನಲ್ಲಿ ಬಿದ್ದಿರುವುದರಿಂದ ಶವ ಕೊಳೆತ ಸ್ಥಿತಿಯಲ್ಲಿದ್ದು ಪ್ರಾಣಿಗಳು ಶವವನ್ನು ತಿಂದು ಹಾಕಿರುವುದರಿಂದ ಗುರುತು ಪತ್ತೆ ಮಾಡಲು ಕಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದನ ಮೇಯಿಸುವವರ ಕಣ್ಣಿಗೆ ಶವ ಕಂಡುಬಂದಿದ್ದು ಸ್ಥಳಕ್ಕೆ ಆಗಮಿಸಿದ ಗಲ್ಪೇಟೆ ಪೊಲೀಸರು ಶವವನ್ನು ನೀರಿನಿಂದ ಹೊರ ತೆಗೆದು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.
ರೈತರ ಪರದಾಟ
ಟೇಕಲ್: ಟೇಕಲ್ ನಾಡಕಚೇರಿಯಲ್ಲಿ ಸಾರ್ವಜನಿಕರಿಗೆ ಕಂದಾಯ ಇಲಾಖೆಯ ಪಹಣಿಗಳು, ವೃದ್ಯಾಪ್ಯ ವೇತನ ಸೇರಿದಂತೆ ಇತರೆ ವೇತನಗಳು ಸರಿಯಾದ ಸಮಯಕ್ಕೆ ಸಿಗದೆ ರೈತರು ಪರದಾಡುವ ಸ್ಥಿತಿ ಬಂದಿದ್ದು, ಈ ಬಗ್ಗೆ ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು ಉಡಾಪೆ ಉತ್ತರ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಳೆದ ಒಂದು ವಾರದಿಂದ ಟೇಕಲ್ ಕಂದಾಯ ವ್ಯಾಪ್ತಿಯ 6 ಗ್ರಾಪಂನ 84ಕ್ಕೂ ಹೆಚ್ಚು ಗ್ರಾಮಗಳಿಂದ ಬಂದ ರೈತರಿಗೆ ಪ್ರತಿದಿನ ಸಮಸ್ಯೆ ತಲೆದೋರಿದೆ. ಬಿಎಸ್ಎನ್ಎಲ್ ಇಂಟರ್ನೆಟ್ ಸೌಲಭ್ಯ ಸಿಗುತ್ತಿಲ್ಲವೆಂಬ ಉತ್ತರ ಬರುತ್ತಿದೆ ಎಂದು ಆರೋಪಿಸಿದ್ದಾರೆ. ಟೇಕಲ್ ನಾಡಕಚೇರಿಯಲ್ಲಿ ಅಧಿಕಾರಿಗಳು ಸಿಗದೆ ಪರದಾಡುತ್ತಿದ್ದು, ಈ ಬಗ್ಗೆ ತಹಸೀಲ್ದಾರರು ಸಮಸ್ಯೆ ಬಗೆಹರಿಸಿಕೊಡಬೇಕೆಂದು ಜನತೆ ಕೋರಿದ್ದಾರೆ.
ಹುತ್ತನೂರು ರಾಜಮ್ಮ ಪ್ರಶಸ್ತಿ
ಟೇಕಲ್: ದಿವಂಗತ ಲೇಖಕಿ ಹುತ್ತನೂರು ರಾಜಮ್ಮ ಜಯಂತಿ ಅಂಗವಾಗಿ ಜೂ.12 ರಂದು ಅವರ ಸಮಗ್ರ ಪುಸ್ತಕಗಳ ಬಿಡುಗಡೆ ಹಾಗೂ ಎನ್. ಜಗನ್ನಾಥ್ ಪ್ರಕಾಶ್ ಅವರಿಗೆ ಹುತ್ತನೂರು ರಾಜಮ್ಮ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಮೊದಲ ಪ್ರಶಸ್ತಿಗೆ ಆಯ್ಕೆಯಾಗಿರುವ ಲೇಖಕ ಎನ್. ಜಗನ್ನಾಥ್ ಪ್ರಕಾಶ್ ಅವರಿಗೆ ಟೇಕಲ್ ಪತ್ರಕರ್ತರ ವೇದಿಕೆ ಅಭಿನಂದಿಸಿದೆ.
ಜನಸ್ಪಂದನ ಕಾರ್ಯಕ್ರಮ ಇಂದು
ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಮೇ 31 ರಂದು ಬೆಳಗ್ಗೆ 11 ಗಂಟೆಗೆ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಸಕ ಡಾ.ಕೆ. ಸುಧಾಕರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಹಸೀಲ್ದಾರ್ ಜಗದೀಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ.2ಕ್ಕೆ ತಾಪಂ ಸಾಮಾನ್ಯ ಸಭೆ
ಚಿಕ್ಕಬಳ್ಳಾಪುರ: ನಗರದಲ್ಲಿರುವ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಜೂ.2 ರಂದು ಬೆಳಗ್ಗೆ 11 ಗಂಟೆಗೆ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕು ಪಂಚಾಯ್ತಿ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಮಹಿಳಾ ಕರಗ ಮಹೋತ್ಸವ ಇಂದು
ಚಿಕ್ಕಬಳ್ಳಾಪುರ: ನಗರದಲ್ಲಿ 53 ನೇ ವರ್ಷದ ಅರುಂಧತಿ ದೇವಿ ಮಹಿಳಾ ಕರಗ ಮಹೋತ್ಸವವನ್ನು ಶನಿವಾರ ರಾತ್ರಿ 10.30 ಕ್ಕೆ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿಯೇ ಮಹಿಳೆ ಇಲ್ಲಿ ಕರಗವನ್ನು ಹೊರುವುದು ವಿಶೇಷವಾಗಿದೆ. ಬಾಪೂಜಿ ನಗರದಲ್ಲಿರುವ ಅರುಂಧತಿ ಹರಿಜನ ಅಭಿವೃದ್ಧಿ ಸಂಘ, ಮಹೇಶ್ವರಿ ದೇವಾಲಯ ಅಭಿವೃದ್ಧಿ ಸಮಿತಿ, ಮಹೇಶ್ವರಿ ಮಹಿಳಾ ಮಂಡಳಿ ಆಶ್ರಯದಲ್ಲಿ 53 ನೇ ವರ್ಷದ ಅರುಂಧತಿ ದೇವಿ ಮಹಿಳಾ ಕರಗ ಮಹೋತ್ಸವ ನಡೆಯಲಿದ್ದು ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಶನಿವಾರ ರಾತ್ರಿ 10.30 ಕ್ಕೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಡಾ. ಎಂ. ವೀರಪ್ಪ ಮೊಯ್ಲಿ, ಶಾಸಕ ಕೆ. ಸುಧಾಕರ್, ಕಾರ್ಯಕ್ರಮದ ಸಂಘಟಕರಾದ ಎಂ. ಶಿವಾನಂದ್ , ಸಂದೀಪ್ ಚಕ್ರವರ್ತಿ ಮತ್ತಿತರರು ಭಾಗವಹಿಸಲಿದ್ದಾರೆ. ಕರಗ ಉತ್ಸವದ ಪ್ರಯುಕ್ತ ರಾಜ್ಯ ಮತ್ತು ಹೊರ ರಾಜ್ಯಗಳ ವಿಶೇಷ ಜಾನಪದ ಕಲಾ ತಂಡಗಳ ಪ್ರದರ್ಶನ, ವಾದ್ಯಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಮಾಜಿ ಶಾಸಕ ದಿವಂಗತ ಎ. ಮುನಿಯಪ್ಪ ಅರುಂಧತಿ ಕರಗ ಮಹೋತ್ಸವವನ್ನು 1926 ರಲ್ಲಿ ಪ್ರಾರಂಭಿಸಿದರು. ಆ ನಂತರ ಕೆಲ ಕಾರಣಗಳಿಂದ ನಿಂತು ಹೋದರೂ ಸಹ ಅವರ ಮಗ ಶಿವಾನಂದ್ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಮರಳು ಸಾಗಿಸಿದರೆ ಕ್ರಿಮಿನಲ್ ಕೇಸ್
ಮುಳಬಾಗಲು: ತಾಲೂಕಿನಾದ್ಯಂತ ಮರಳು ಆಕ್ರಮ ಫಿಲ್ಟರ್, ಮರಳು ಗಣೆಗಾರಿಕೆ ಕೇಂದ್ರಗಳ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶುಕ್ರವಾರ ನಿರ್ಧರಿಸಲಾಯಿತು. ಮರಳು ಅಕ್ರಮ ಸಾಗಣೆ ಲಾರಿಗಳನ್ನು ವಶಪಡಿಸಿಕೊಂಡು ಆರೋಪಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಖಾಸಗಿ ಭೂಮಿಯನ್ನು ಫೀಲ್ಟರಿಂಗ್ಗೆ ಉಪಯೋಗಿಸುತ್ತಿದ್ದಲ್ಲಿ ಸರ್ಕಾರ ವಶಪಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

