ಜಯರಾಂ, ಸಿದ್ದರಾಜು ಮಾಡಿದ್ದೇನು?
ಮಂಡ್ಯ: ದಿ. ಎಸ್.ಡಿ. ಜಯರಾಂ ಮತ್ತು ದಿ. ಎಂ.ಎಸ್. ಸಿದ್ದರಾಜು ಜಿಲ್ಲೆಗೆ ಹಾಗೂ ತಮ್ಮ, ತಮ್ಮ ಕ್ಷೇತ್ರಗಳಿಗೆ ನೀಡಿರುವ ಕೊಡುಗೆಗಳು ಏನು ಎಂಬ ಪ್ರಶ್ನೆಗಳಿಗೆ ಉತ್ತರದ ಹುಡುಕಾಟ ಮತ್ತು ಈ ವಿಷಯದ ಚರ್ಚೆ ಜೆಡಿಎಸ್ನ ಆಂತರಿಕ ವಲಯದಲ್ಲಿ ಸಾಕಷ್ಟು ಕಿಡಿ ಹೊತ್ತಿಸಿದೆ.
ಇದು ಆತ್ಮ ವಿಮರ್ಶೆ ಮಾಡಿಕೊಳ್ಳುವ ಕಾಲವೂ ಹೌದು. ಅಷ್ಟೇ ಪ್ರಮಾಣದಲ್ಲಿ ಈ ಪ್ರಶ್ನೆಯೂ ಸಮಯೋಚಿತವಾಗಿದೆ ಎಂದು ಅಂದುಕೊಂಡ ದಳದ ನಾಯಕರು ತಡವಾಗಿಯಾದರೂ ಚರ್ಚೆಗೆ ಹರಿ ಬಿಟ್ಟಿರುವ ವಿಷಯ ಮಾತ್ರ ತುಂಬಾ ಗಂಭೀರವೂ ಆಗಿದೆ.
ಹೆಗಲು ಕೊಟ್ಟವರು: ಮಾಜಿ ಪ್ರಧಾನಿ ದೇವೇಗೌಡರು, ಮತ್ತವರ ಕುಟುಂಬ ಮಂಡ್ಯದ ದಿ. ಎಸ್.ಡಿ. ಜಯರಾಂ ಅಥವಾ ಮದ್ದೂರಿನ ಎಂ.ಎಸ್. ಸಿದ್ದರಾಜು ಅವರಿಗೆ ರಾಜಕಾರಣದ ನೆಲೆ ಕಲ್ಪಿಸಿದ್ದವು ಎಂಬುದನ್ನು ನೆನಪಿಸಿಕೊಳ್ಳಬೇಕು. ದೇವೇಗೌಡರು ರಾಜಕೀಯ ಸಂಕಷ್ಟದಲ್ಲಿದ್ದಾಗ ಜಯರಾಂ ಮತ್ತು ಸಿದ್ದರಾಜು ಇಬ್ಬರೇ ಹೆಗಲು ಕೊಟ್ಟು ನಿಂತವರು. ಈ ಕಾಣರಕ್ಕಾಗಿಯೇ ಗೌಡರು ಕೂಡ ಇಬ್ಬರು ನಾಯಕರಿಗೆ ಆದ್ಯತೆ, ನೀಡಿ ಚೆನ್ನಾಗಿ ಬೆಳೆಸಿದರು.
ವಿಭಿನ್ನ ನಡೆಯ ನಾಯಕರು: ಎಸ್.ಡಿ. ಜಯರಾಂ ರೈತ ಸಂಘದ ಹೋರಾಟದ ಮೂಲಕ ರಾಜಕೀಯ ರಂಗಪ್ರವೇಶ ಮಾಡಿದರು. ಸಂಘಟನೆಯಲ್ಲಿ ಎತ್ತಿದ ಕೈ. ಬಡವರ ಬಗೆಗಿನ ಕಾಳಜಿಗೂ ಜಯರಾಂ ಸ್ಫೂರ್ತಿಯಾಗಿದ್ದರು. ತಮ್ಮದೇ ಆದ ಪಕ್ಷ ಅಧಿಕಾರದಲ್ಲಿ ಇದ್ದಾಗ ಅಥವಾ ತಾವೇ ಮಂತ್ರಿಗಳಾಗಿದ್ದಾಗ ಮಂಡ್ಯಕ್ಕೆ ಸಾಕಷ್ಟು ಕೆಲಸ ಆಗಲಿಲ್ಲ.
ದಿ. ಎಂ.ಎಸ್. ಸಿದ್ದರಾಜುಗೆ ಸಂಘಟನೆ, ಹೋರಾಟ ಎಂಬುದು ಬಲು ಪ್ರಿಯವಾದ ವಿಷಯವಾಗಿದ್ದವು. ಸಮರ್ಥವಾಗಿ ಎಲ್ಲವನ್ನೂ ನಿಭಾಯಿಸಿಕೊಂಡು ನಾಯಕರಿಂದ ಶಹಭಾಷ್ ಎನಿಸಿಕೊಂಡಿದ್ದ ಸಿದ್ದರಾಜು, ಜೆಡಿಎಸ್ ನಾಯಕರೊಂದಿಗೆ ಮುನಿಸಿಕೊಂಡು ಒಂದು ಸಾರಿ ಕಾಂಗ್ರೆಸ್ಗೆ ಜಿಗಿದು ಹೋಗಿದ್ದರು. ಕೆಲವು ತಿಂಗಳ ನಂತರ ಕಾಂಗ್ರೆಸ್ಗೆ ಸೆಲ್ಯೂಟ್ ಹೊಡೆದು, ಮದ್ದೂರಿನಲ್ಲಿ ಸ್ವಾಭಿಮಾನಿ ಪಡೆ ಕಟ್ಟಿ, ಅದೇ ಕಾಂಗ್ರೆಸ್ಗೆ ಸಡ್ಡು ಹೊಡೆದರು. ನಂತರ ಸಮಾಜವಾದಿ ಪಾರ್ಟಿಗೆ ಬಂದರು. ಎಲ್ಲಿಯೂ ಸರಿ ಹೋಗಲಿಲ್ಲ. ಮತ್ತೆ ತವರು ಮನೆ ಜೆಡಿಎಸ್ಗೆ ಆಗಮಿಸಿ ಮದ್ದೂರು ಶಾಸಕರಾಗಿ ಆಗಿ ಆಯ್ಕೆಯಾದರು.
ನಾಯಕರು ಸಾಗಿ ಬಂದ ದಾರಿ: ಇಬ್ಬರು ನಾಯಕರು ನಿಧನದ ನಂತರ ಜೆಡಿಎಸ್ನಲ್ಲಿ ಎರಡೂ ಕುಟುಂಬದವರಿಗೆ ಸಾಕಷ್ಟು ಬೆಲೆ, ನೆಲೆ ಕಲ್ಪಿಸಲಾಗಿತ್ತು. ಮಂಡ್ಯದಲ್ಲಿ ಹಿಂದೆ ಪ್ರಭಾವತಿ ಜಯರಾಂ ಶಾಸಕಿಯಾಗಿ ಕೆಲಸ ಮಾಡಿದರು. ಮದ್ದೂರಿನಲ್ಲಿ ಈಗ ಕಲ್ಪನಾ ಸಿದ್ದರಾಜು ಶಾಸಕರಾಗಿದ್ದಾರೆ. ಈಗ ಮುಂದಿನ ಪ್ರಶ್ನೆ ಎಂದರೆ ಭವಿಷ್ಯದ ದಿನಗಳಲ್ಲೂ ಈ ಎರಡೂ ಕುಟುಂಬಗಳನ್ನು ದೇವೇಗೌಡರು, ಕುಮಾರಸ್ವಾಮಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಆತಂಕ ಎದುರಾಗಿದೆ. ಜಯರಾಂ ಮತ್ತು ಸಿದ್ದರಾಜು ಬೆಂಬಲಿಗರನ್ನು ಕೂಡ ಇದೇ ಆತಂಕ, ನಿರಾಶೆ ಎಡಬಿಡದೇ ಕಾಡುತ್ತಿದೆ ಎಂದು ಹೇಳಲಾಗಿದೆ.
ಶ್ರೀರಂಗಪಟ್ಟಣದ ವಿಜಯಲಕ್ಷ್ಮಮ್ಮ ಬಂಡಿಸಿದ್ದೇಗೌಡರನ್ನು ಹೊರತುಪಡಿಸಿದರೆ ಪತಿ ನಿಧನದ ನಂತರ ಎರಡನೇ ಬಾರಿಗೆ ಯಾವ ನಾಯಕರ ಪತ್ನಿಯರೂ ಶಾಸಕರಾಗಿ ಆಯ್ಕೆಯಾಗಿಲ್ಲ. ಜಯವಾಣಿ ಮಂಚೇಗೌಡರು, ಪ್ರಭಾವತಿ ಜಯರಾಂ ಕೂಡ ಒಂದೇ ಬಾರಿ ಸಿಂಪಥಿ ಗೆಲವು ಸಾಧಿಸಿದರು. ಅದೇ ರೀತಿಯಲ್ಲಿ ಮಹಿಳಾ ರಾಜಕಾರಣಿಗಳಿಗೆ ಎರಡನೇ ಬಾರಿ ಅವಕಾಶ ಸಿಕ್ಕಿರುವುದು, ಗೆಲವು ಸಾಧಿಸಿರುವ ಉದಾಹರಣೆಗಳೇ ಇಲ್ಲ. ಆ ಪಟ್ಟಿಯಲ್ಲಿ ಶ್ರೀರಂಗಪಟ್ಟಣದವರೇ ಆದ ದಮಯಂತಿ ಬೋರೇಗೌಡರು, ಪಾರ್ವತಮ್ಮ ಶ್ರೀಕಂಠಯ್ಯ, ಮಳವಳ್ಳಿಯ ಮಲ್ಲಾಜಮ್ಮ ಅವರು ಸೋಲಿನ ಕಹಿ ಕಂಡಿದ್ದಾರೆ.
ಜೆಡಿಎಸ್ನಲ್ಲಿ ಆಂತರಿಕವಾಗಿ ಇದ್ದ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡಿವೆ. ಇತ್ತೀಚೆಗೆ ಮಾರಗೌಡನಹಳ್ಳಿಯಲ್ಲಿ ಅಶೋಕ್ ಜಯರಾಂ ವಿರುದ್ಧ ವೇದಿಕೆಯಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಕೆಂಡಾಮಂಡಲವಾಗಿ ಗುಡುಗಿದರು. ಅಷ್ಟಾಗಿ ಸುದ್ದಿಯಾಗಲಿಲ್ಲ. ಆದರೆ, ತರಾಟೆಗೆ ತೆಗೆದುಕೊಂಡ ಘಟನೆ ಇನ್ನೂ ಮಾಸಿಲ್ಲ. ಆ ಎಚ್ಚರಿಕೆಯ ಮಾತುಗಳ ನಂತರ ಅಶೋಕ್ ಜಯರಾಂ ಬದಲಾಗಿದ್ದಾರೆ ಎಂದು ಭಾವಿಸಬಹುದು.
ವಿರೋಧ ಏಕೆ?: ಈಗ ಮದ್ದೂರಿನಲ್ಲಿ ಮಾಜಿ ಶಾಸಕ ತಮ್ಮಣ್ಣನವರ ಜೆಡಿಎಸ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸುವ ಸಿದ್ದರಾಜು ಅಭಿಮಾನಿಗಳು, ಜೆಡಿಎಸ್ ನಿಷ್ಟಾವಂತ ಕಾರ್ಯಕರ್ತರ ಹೆಸರಿನಲ್ಲಿ ಪಕ್ಷದ ನಾಯಕರ ವಿರುದ್ಧವೇ ಸಡ್ಡು ಹೊಡೆದು ನಿಂತಿದ್ದಾರೆ. ಜೆಡಿಎಸ್ಗೆ ಯಾರನ್ನೂ ಸೇರಿಸಿಕೊಳ್ಳುವಂತಿಲ್ಲ. ಸೇರಿಸಿಕೊಂಡರೂ ಟಿಕೆಟ್ ನೀಡುವಂತಿಲ್ಲ. ನಾವು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಟಸ್ಥರಾಗಿರುತ್ತೇವೆ ಎಂಬ ಎಚ್ಚರಿಕೆ ಮಾತುಗಳನ್ನು ಸಿದ್ದರಾಜು ಅಭಿಮಾನಿಗಳು ಘಂಟಾಘೋಷವಾಗಿ ಹೇಳಿದ್ದಾರೆ. ಅಭಿಮಾನಿಗಳ ಈ ಮಾತುಗಳಿಗೆ ಶಾಸಕಿ ಕಲ್ಪನಾ ಸಿದ್ದರಾಜು ಬೆಂಬಲ ಇದೆ. ಇಲ್ಲ ಎನ್ನುವುದು ಬೇರೆ ಪ್ರಶ್ನೆ. ಈ ಮಾತುಗಳ ಸಾಧಕ- ಬಾಧಕಗಳು, ಪರಿಣಾಮಗಳ ಬಗ್ಗೆ ಚಿಂತನೆ ಮಾಡುವ ಅಗತ್ಯವಿದೆ.
ಈ ಹಿಂದೆ ಸಿದ್ದರಾಜು ಕಾಂಗ್ರೆಸ್ಗೆ ಹೋಗಿರಲಿಲ್ಲವೇ? ಅಲ್ಲಿ ವಿಧಾನಪರಿಷತ್ ಸದಸ್ಯರಾಗಲಿಲ್ಲವೇ? ಮತ್ತೆ ಕಾಂಗ್ರೆಸ್ ತೊರೆದು, ಜೆಡಿಎಸ್ಗೆ ಬರಲಿಲ್ಲವೇ? ಆಗ ಇಂತಹ ಎಲ್ಲಾ ಬದಲಾವಣೆಗಳನ್ನು ಒಪ್ಪಿಕೊಂಡ ಅಭಿಮಾನಿಗಳ ಬಳಗ, ತಮ್ಮಣ್ಣ ಸೇರಿದಂತೆ ಬೇರೆ ಯಾರೇ ಆದರೂ ಜೆಡಿಎಸ್ಗೆ ಬಂದರೆ ತಪ್ಪೇನು? ಎಂದು ವಿರೋಧಿಗಳೇ ಕೇಳುತ್ತಿದ್ದಾರೆ.
ಒಟ್ಟಿನಲ್ಲಿ ಚುನಾವಣೆ ಪರ್ವ ಆರಂಭವಾಗಿರುವ ಇಂದಿನ ದಿನಗಳಲ್ಲಿ ಪಕ್ಷನಿಷ್ಠೆ ಮತ್ತು ವ್ಯಕ್ತಿನಿಷ್ಠೆಗಳ ಬಗ್ಗೆ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಆತ್ಮಾವಲೋಕನ ಆಗಬೇಕಿದೆ. ಆ ಮೂಲಕ ಅಭಿವೃದ್ಧಿಗೆ ಮುಂದಡಿ ಇಡಬೇಕಿದೆ ಎಂಬ ಮಾತು ನಾಗರಿಕರದ್ದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

