1000 ಕೋಟಿ ಮೀಸಲಿಗೆ ಪರ-ವಿರೋಧ ಒಲವು
ಮಂಡ್ಯ: ನಿರ್ಭಯಳ ಹೆಸರಿನಲ್ಲಿ ಮಹಿಳೆಯರಿಗೆ ಅಭಯ ನೀಡಿರುವ ಕೇಂದ್ರ ಸರ್ಕಾರ, 2013-14 ನೇ ಸಾಲಿನ ಬಜೆಟ್ನಲ್ಲಿ ಅತ್ಯಾಚಾರಕ್ಕೆ ಒಳಗಾದ ಮಹಿಳೆಯರ ಸಬಲೀಕರಣಕ್ಕಾಗಿ 1000 ಕೋಟಿ ಮೀಸಲಿಟ್ಟಿರುವ ನಿರ್ಧಾರಕ್ಕೆ ಸ್ವಾಗತ ಮತ್ತು ಟೀಕೆ ವ್ಯಕ್ತವಾಗಿದೆ.
ಕಳೆದ ಡಿ.16 ರಂದು ದೆಹಲಿಯಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ನಂತರ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಮಹಿಳೆಯರ ಸಬಲೀಕರಕ್ಕೆ ಸಾಕಷ್ಟು ಹೆಣಗಾಟ ನಡೆಸಿದೆ. ಇಷ್ಟಾದರೂ ಈ ಪ್ರಕರಣದ ನಂತರ ದೇಶದಲ್ಲಿ ಸಾಮೂಹಿಕ ಅತ್ಯಾಚಾರಗಳ ಸಂಖ್ಯೆ ಹೆಚ್ಚಾಗಿದೆ. ಪುಟ್ಟ ಬಾಲಕಿಯರಿಂದ ಹಿಡಿದು ವೃದ್ಧೆಯರೂ ಈ ಅತ್ಯಾಚಾರದ ಕೃತ್ಯಕ್ಕೆ ಒಳಗಾಗಿದ್ದಾರೆ. ಹೀಗಾಗಿ, ಮಹಿಳೆಯರಿಗೆ ರಕ್ಷಣೆ ಅಗತ್ಯವಿದೆ. ನಿರ್ಭೀತಿಯಿಂದ ಬದುಕುವ ವಾತಾವರಣ ಕಲ್ಪಿಸುವ ಅಗತ್ಯವಿದೆ. ಅದೇ ರೀತಿ ತಪ್ಪು ಮಾಡಿದ ವ್ಯಕ್ತಿಗಳಿಗೆ ಕೂಡಲೇ ಕಠಿಣ ಶಿಕ್ಷೆ ನೀಡಿದಾಗ ಮಾತ್ರ ಇಂತಹ ಪ್ರಕರಣಗಳ ಸಂಖ್ಯೆ ತಗ್ಗಿಸಲು ಸಾಧ್ಯ ಎಂಬ ಮಹಿಳಾ ಸಂಘಟನೆಗಳ ವಾದ ಮಾತ್ರ ಅರಣ್ಯರೋದನ. ಅತ್ಯಾಚಾರಕ್ಕೆ ಒಳಗಾದ ಮಹಿಳೆಯರಿಗೆ ಹಣದ ನೆರವಿಗಿಂತಲೂ ಹೆಚ್ಚಾಗಿ ಸಮಾಜದಲ್ಲಿ ಸ್ಥಾನ, ಮಾನ ನೀಡಿ ಗೌರವಿಸಿ, ಸಾಂತ್ವನ ಹೇಳುವ ಮನಸ್ಸುಗಳು ಬೇಕು. ಅಂತಹ ದೌರ್ಜನ್ಯಕ್ಕೆ ಒಳಗಾದವರನ್ನು ನೋಡುವ ದೃಷ್ಟಿಕೋನವೇ ಬೇರೆಯಾಗಿರುತ್ತದೆ. ತಂದೆ-ತಾಯಿಯಿಂದ ಹಿಡಿದು ನೆರೆ, ಹೊರೆಯವರು ಕೂಡ ಅಮಾಯಕ ಮಹಿಳೆಯನ್ನು ಬಲಿಪಶುಗಳ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ. ಒಂದು ಹೆಣ್ಣು ಯಾವುದೇ ತಪ್ಪು ಮಾಡದೇ ಹೋದರೂ ಆಕೆಯ ಅಸಹಾಯಕತೆ ದುರಪಯೋಗಪಡಿಸಿಕೊಂಡು ಬದುಕು ಹಾಳುವ ಮಾಡುವ ಜನರ ನಡುವೆ ಮಹಿಳೆಯರು ಬದುಕು ಅನಿವಾರ್ಯ ಸ್ಥಿತಿ ಎದುರಾಗಿದೆ ಎನ್ನುತ್ತಾರೆ ಮಹಿಳಾ ಸಂಘಟನೆಯ ನಾಯಕಿ ನಾಗರೇವಕ್ಕ.
1000 ಕೋಟಿ ನೆರವು: ಈ ಬಾರಿಯ ಬಜೆಟ್ನಲ್ಲಿ ನಿರ್ಭಯ ಎಂಬ ಹೆಸರಿನಲ್ಲಿ ಅತ್ಯಾಚಾರಕ್ಕೆ ಒಳಗಾದ ಮಹಿಳೆಯರ ಸಬಲೀಕರಣಕ್ಕಾಗಿ 1000 ಕೋಟಿ ತೆಗೆದಿರಿಸಿರುವುದು ಸ್ವಾಗತಾರ್ಹ. ಆದರೆ, ಈ ಹಣದ ನೆರವು ಅಮಾಯಕರ ಕೈಗೆ ಸಿಗುವ ಹೊತ್ತಿಗೆ ಅನೇಕ ತೊಂದರೆ, ಸಮಸ್ಯೆ ಎದುರಿಸುವ ಅನಿವಾರ್ಯತೆ ಇರುತ್ತದೆ. ಇಂತಹ ಹಣ ಪಡೆಯುವುದಕ್ಕೆ ನೊಂದವರಿಗಾಗಿ ಸರಳೀಕರಣ ಮಾರ್ಗದರ್ಶಿ ಸೂತ್ರ ರೂಪಿಸಬೇಕು ಎನ್ನುವ ಸಲಹೆ ಮಹಿಳಾಮಣಿಗಳದ್ದು.
ಅಮಾಯಕ ಮಹಿಳೆಯರಿಗೆ ಇಂತಹ ನೆರವಿನ ಅಗತ್ಯವಿದೆ. ಆದರೆ, ಅದಕ್ಕಿಂತಲೂ ಹೆಚ್ಚಾಗಿ ಮಹಿಳೆಯರು ಯಾವುದೇ ತಪ್ಪು ಮಾಡದೇ ಹೋದರೂ ಕಾಮುಕರಿಗೆ ಬಲಿಯಾಗುತ್ತಾರೆ. ಇಂತಹ ಕೃತ್ಯ ನಡೆಸಿದ ಆರೋಪಿಗಳಿಗೆ ಶೀಘ್ರದಲ್ಲಿ ಕಠಿಣ ಶಿಕ್ಷೆಯಾದರೆ ಅದಕ್ಕಿಂತ ತೃಪ್ತಿ ಮಹಿಳೆಯರಿಗೆ ಮತ್ತೊಂದಿಲ್ಲ. ಇದರ ಜೊತೆಗೆ ತನಗೆ ಆದ ರೀತಿಯ ನೋವು, ಅನ್ಯಾಯ ಮತ್ತೊಂದು ಹೆಣ್ಣಿಗೆ ಆಗುವುದನ್ನು ಆಕೆ ಸಹಿಸುವುದಿಲ್ಲ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅತ್ಯಾಚಾರಿಗಳಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆಯಾಗುವಂತೆ ಮಾಡುವ ಹೊಣೆ ಹೊರಬೇಕಿದೆ ಎನ್ನುವುದು ಮಹಿಳಾ ಸಂಘಟನೆ ನಾಯಕಿಯರ ವಾದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

