ಮೈವಿವಿಗೆ ಸೃಜನಶೀಲ ಗರಿ ನನ್ನ ಕನಸು
ಮೈಸೂರು: ಮೈಸೂರು ವಿಶ್ವವಿದ್ಯಾಲಯಕ್ಕೆ ಸೃಜನಶೀಲ ವಿಶ್ವವಿದ್ಯಾಲಯ (ಇನೋವೇಟಿವ್ ವಿವಿ) ಸ್ಥಾನಮಾನ ಪಡೆಯಲು ಯತ್ನಿಸುವುದಾಗಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಹೇಳಿದರು.
ಮೈಸೂರು ವಿವಿಯ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಪ್ರಥಮ ಬಾರಿಗೆ ಮಂಗಳವಾರ ಕುಲಸಚಿವ ಪ್ರೊ. ಪಿ.ಎಸ್. ನಾಯಕ್, ಪರೀಕ್ಷಾಂಗ ಕುಲಸಚಿವ ಬಿ.ರಾಮು, ಹಣಕಾಸು ಅಧಿಕಾರಿ ಪ್ರೊ. ಎಂ. ಚಂದ್ರಕುಮಾರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಟಿ ನಡೆಸಿದ ಅವರು, ತಮ್ಮ ಕನಸುಗಳನ್ನು ಹಂಚಿಕೊಂಡರು.
1976 ರಿಂದಲೂ ಮೈಸೂರು ವಿವಿಯಲ್ಲಿಯೇ ಇರುವ ತಮಗೆ ನಾನು ಓದಿದ, ಪ್ರಾಧ್ಯಾಪಕ ಹಾಗೂ ಕುಲಪತಿ ಹುದ್ದೆಗೆ ಪಡೆಯಲು ಕಾರಣವಾದ ವಿವಿ ಕೆಂಬ್ರಿಡ್ಜ್, ಆಕ್ಸ್ಫರ್ಡ್ ವಿವಿ ಮಟ್ಟಕ್ಕೆ ಬೆಳೆಯಬೇಕು ಎಂಬ ಆಸೆ ಇದೆ. ನಾನು ಇಲ್ಲೇ ಬದುಕಬೇಕು. ಇಲ್ಲೇ ಸಾಯಬೇಕು. ಯಾವುದೇ ಸ್ವಾರ್ಥ ಇಟ್ಟುಕೊಂಡು ಈ ಸ್ಥಾನಕ್ಕೆ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನ್ಯಾಕ್ ಸಂಸ್ಥೆ ಮೊದಲ ಪಂಚತಾರ, 2ನೇ ಬಾರಿಗೆ 'ಎ' ಡಬಲ್ ಪ್ಲಸ್, 3ನೇ ಬಾರಿಗೆ 'ಎ' ಗ್ರೇಡ್ ಮಾನ್ಯತೆ ನೀಡಿದೆ. ಈ ಭದ್ರಬುನಾದಿಯ ಮೇಲೆ ನಾನು ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ವಿವಿಗೆ ಇನೋವೇಟಿವ್ ವಿವಿ ಸ್ಥಾನಮಾನ ಪಡೆಯಲು ಯತ್ನಿಸುತ್ತಿದೆ. ಈ ಸ್ಥಾನಮಾನ ದೊರೆತಲ್ಲಿ ವಿವಿಗೆ 100 ಕೋಟಿಯಿಂದ 300 ಕೋಟಿ ಆರ್ಥಿಕ ನೆರವು ಸಿಗಲಿದೆ ಎಂದರು.
ರಾಜ್ಯ ಸರ್ಕಾರದಿಂದ 25 ಕೋಟಿ ಅನುದಾನ: ಮೈಸೂರು ವಿವಿಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಸರ್ಕಾರ ನೀಡಿದ್ದ 69 ಕೋಟಿ ಅನುದಾನ ವೇತನ ಮತ್ತು ಪಿಂಚಣಿಗೆ ಹೋಗಿದೆ. ನಮಗೆ ಈ ಬಾಬ್ತಿಗೆ 110 ಕೋಟಿ ಬೇಕಾಗಿದೆ. ಇನ್ನೂ 40 ಕೋಟಿ ಕೊರತೆ ಇದೆ. ಹೀಗಾಗಿ, ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜೊತೆ ಸಮಾಲೋಚಿಸಿ, 25 ಕೋಟಿ ಹೆಚ್ಚುವರಿ ಅನುದಾನ ತಂದಿದ್ದೇನೆ ಎಂದರು.
ವಿವಿ ಸ್ವಂತ ಸಂಪನ್ಮೂಲ ಕ್ರೋಡೀಕರಿಸಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ. ಹೀಗಾಗಿ ನಾನು ಇನ್ಫೋಸಿಸ್, ವಿಪ್ರೋ ಮೊದಲಾದ ಸಂಸ್ಥೆಗಳಿಂದ ಆರ್ಥಿಕ ಸಂಪನ್ಮೂಲ ಪಡೆಯುವ ಉದ್ದೇಶವಿದೆ. ಈ ಸಂಬಂಧ ನಾನು ಕಾರ್ಯಕ್ರಮಗಳನ್ನು ರೂಪಿಸಲಿದ್ದು, ಇದಕ್ಕೆ ಯಾವುದೇ ಅಡಚಣೆ ಮಾಡದಂತೆ ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದರು.
ಅನುದಾನ ವಿಸ್ತರಣೆಗೆ ಮನವಿ: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯವು ಮೈಸೂರು ವಿವಿಗೆ 100 ಕೋಟಿ ನೆರವು ನೀಡಿತ್ತು. ಇದನ್ನು ವಿಸ್ತರಿಸಲು ಅವಕಾಶವಿದ್ದು, ಕೇಂದ್ರಕ್ಕೆ ಮತ್ತೆ ಮನವಿ ಮಾಡುವಂತೆ ಕುಲಾಧಿಪತಿಗಳೂ ಆದ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಸಲಹೆ ಮಾಡಿದ್ದರು. ಅದರಂತೆ ಮನವಿ ಮಾಡಲಿದ್ದೇನೆ ಎಂದು ಅವರು ಹೇಳಿದರು.
ಸಂಶೋಧನೆಗೆ ಒತ್ತು, ಪ್ರೋತ್ಸಾಹ: ಶೈಕ್ಷಣಿಕ ಪರಿಶೋಧನಾ ವರದಿಯ ಪ್ರಕಾರ, ಬೋಧನೆ ಇರುವ ಕಡೆ ಸಂಶೋಧನೆ ಇರಲೇಬೇಕು. ಇದಕ್ಕೆ ಸಹಕರಿಸುವಂತೆ ಬೋಧಕರನ್ನು ಕೋರಿದ್ದಾರೆ. ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಉತ್ತಮವಾಗಿ ಸಂಶೋಧನೆ ಮಾಡುವವರಿಗೆ ಪ್ರೋತ್ಸಾಹ ನೀಡುವ ಉದ್ದೇಶ ಇದೆ. ಇಲ್ಲದಿದ್ದಲ್ಲಿ ಸೌಕರ್ಯ ನಿಲ್ಲಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಈಗ ವಿದ್ಯಾರ್ಥಿಗಳಿಂದ ಉಪನ್ಯಾಸಕರನ್ನು 3 ವರ್ಷಕ್ಕೊಮ್ಮೆ ಮೌಲ್ಯಮಾಪನ ಮಾಡಲಾಗುತ್ತಿದೆ. ಇನ್ನು ಮುಂದೆ ಪ್ರತಿವರ್ಷ ಮೌಲ್ಯಮಾಪನ ಮಾಡಿಸಲಾಗುವುದು. ವಿವಿಯ ವರ್ಚಸ್ಸು ಹೆಚ್ಚಿಸಲು ಎಫ್ಆರ್ಎಸ್, ಎಫ್ಎನ್ಎ ಮೊದಲಾದ ಫೆಲೋಶಿಪ್ ಹೊಂದಿರುವ ಪ್ರೊ. ರಾಮಕೃಷ್ಣ, ಪ್ರೊ. ಸಿ.ಎನ್.ಆರ್. ರಾವ್, ಪ್ರೊ. ಗೋವರ್ಧನ್ ಮೆಹ್ತಾ, ಪ್ರೊ. ಮಶಾಲ್ಕರ್ ಮೊದಲಾದವರನ್ನು ಸಂದರ್ಶಕ ಉಪನ್ಯಾಸಕರಾಗಿ ಕರೆಸಲಾಗುವುದು.
ವಿವಿಧ ವಿಷಯಗಳ ಬಗ್ಗೆ ಪ್ರತಿ ತಿಂಗಳು ಮೈಸೂರು ವಿವಿ ಉಪನ್ಯಾಸ ಮಾಲಿಕೆಯಲ್ಲಿ ಕಾರ್ಯಕ್ರಮ ನಡೆಸಲಾಗುವುದು. ವಿವಿಯಲ್ಲಿ ಇ- ಆಡಳಿತ ಜಾರಿಗೆ ತರಲಾಗುವುದು. 24್ಢ7 ಕಾಲ್ಸೆಂಟರ್ ಆರಂಭಿಸಲಾಗುವುದು. ಪರೀಕ್ಷಾ ವಿಭಾಗದ ಸುಧಾರಣೆ ಮಾಡಲಾಗುವುದು ಎಂದರು.
50 ಕೋಟಿ ಕೋರಿಕೆ: ಮೈಸೂರು ವಿವಿಗೆ ಯುಜಿಸಿ 'ಎ' ಗ್ರೇಡ್ ಮಾನ್ಯತೆ ನೀಡಿರುವುದರಿಂದ 12ನೇ ಪಂಚವಾರ್ಷಿಕ ಯೋಜನೆಯಲ್ಲಿ 50 ಕೋಟಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೇವೆ.
ಮೈಸೂರು ವಿವಿಗೆ 5 ವಿದೇಶಗಳ ಸಹಯೋಗ ಇರುವುದರಿಂದ 50 ಕೋಟಿ ವೆಚ್ಚದಲ್ಲಿ ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಕೆಮಿಕಲ್ ಬಯಾಲಜಿ ಅಂಡ್ ಡ್ರಗ್ ಡಿಸ್ಕವರಿ ಆರಂಭಿಸುವ ಉದ್ದೇಶವಿದೆ. ಇದಕ್ಕೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆರವು ಪಡೆಯಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

