ಇಲ್ಲಿ ಮುಖ ನೋಡಿ ಮಣೆ ಹಾಕುವುದಿಲ್ಲ
ಮಂಡ್ಯ: ದೇವಲಾಪುರ, ಬೆಳ್ಳೂರು, ಕಸಬಾ, ಬಿಂಡಿಗನವಿಲೆ ಹಾಗೂ ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ಒಳಗೊಂಡು ರಚಿತವಾಗಿರುವುದೇ ನಾಗಮಂಗಲ ಕ್ಷೇತ್ರ. ಒಕ್ಕಲಿಗರ ಶಕ್ತಿಕೇಂದ್ರ ಆದಿಚುಂಚನಗಿರಿ ಮಠವನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಯಾರೇ ಗೆಲವು ಸಾಧಿಸಬೇಕಾದರೂ ಶ್ರೀ ಕಾಲಭೈರವನ ಆಶೀರ್ವಾದ ಬೇಕಿದೆ.
ಪ್ರತಿ ವಿಧಾನಸಭೆ ಚುನಾವಣೆಗಳಲ್ಲಿ ಅನಿರೀಕ್ಷಿತ ಬೆಳವಣಿಗೆಗಳ ಮೂಲಕವೇ ನಾಗಮಂಗಲ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಾ ಬಂದಿದೆ. ಮತ್ತೊಂದು ವಿಶೇಷವೆಂದರೆ, ಈ ಕ್ಷೇತ್ರದಿಂದ ಒಬ್ಬ ವ್ಯಕ್ತಿ 3ನೇ ಬಾರಿ ಶಾಸಕರಾದ ಉದಾಹರಣೆ ಇಲ್ಲ. ಅತಿರಥ ಮಹಾರಥರನ್ನು ಕ್ಷೇತ್ರದ ಮತದಾರರು ಸೋಲಿಸಿದ ಉದಾಹರಣೆಗಳು ಸಾಕಷ್ಟಿವೆ.
1952ರ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಅಸ್ತಿತ್ವದಲ್ಲಿರುವ ಕ್ಷೇತ್ರ ಇದಾಗಿದೆ. ಈವರೆಗೆ ಎರಡು ಉಪಚುನಾವಣೆಗಳು ಸೇರಿ 15 ಚುನಾವಣೆಗಳು ನಡೆದಿವೆ. ಇದರಲ್ಲಿ 6 ಬಾರಿ ಕಾಂಗ್ರೆಸ್, 5 ಬಾರಿ ಪಕ್ಷೇತರರು, 3 ಬಾರಿ ಜನತಾ ಪರಿವಾರ ಹಾಗೂ 1 ಬಾರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗೆಲವು ಸಾಧಿಸಿವೆ.
ಜಿಲ್ಲೆಯಲ್ಲಿ ಹಿಂದುಳಿದ ನಾಯಕರಾಗಿ ಗುರುತಿಸಿಕೊಂಡಿದ್ದ ಕುರುಬ ಸಮುದಾಯಕ್ಕೆ ಸೇರಿದ ಟಿ.ಮಾನಪ್ಪ ಹಾಗೂ ಚಿಗರೀಗೌಡ ಅವರನ್ನು ವಿಧಾನಸೌಧದ ಮೊಗಸಾಲೆಗೆ ಆರಿಸಿ ಕಳುಹಿಸುವ ಮೂಲಕ ವಿಶಿಷ್ಟ ಸಂದೇಶ ರವಾನಿಸಿದ ಕೀರ್ತಿಯೂ ಕ್ಷೇತ್ರಕ್ಕಿದೆ.
1952ರ ಮೊದಲ ಚುನಾವಣೆಯಲ್ಲಿಯೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶಂಕರಲಿಂಗೇಗೌಡರು, ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆ.ಸಿಂಗಾರೀಗೌಡ ಅವರನ್ನು ಮಣಿಸಿದರು. ಅನಾರೋಗ್ಯದ ಕಾರಣ ಶಂಕರಲಿಂಗೇಗೌಡರು 6 ತಿಂಗಳಲ್ಲಿ ಮರಣ ಹೊಂದಿದ್ದರಿಂದ ಎದುರಾದ ಉಪ ಚುನಾವಣೆಯಲ್ಲಿ ಕೆ.ಸಿಂಗಾರೀಗೌಡರು ಜಯಭೇರಿ ಬಾರಿಸಿದರು. ಆನಂತರ 1957ರ ಚುನಾವಣೆ ವೇಳೆಗೆ ಕಾಂಗ್ರೆಸ್ ಪಕ್ಷ ಸಿಂಗಾರಿಗೌಡ ಅವರನ್ನು ಕೈಬಿಟ್ಟು ಹಿಂದುಳಿದ ನಾಯಕರಾಗಿ ಹೆಸರು ಮಾಡಿದ್ದ ಟಿ.ಮಾನಪ್ಪ ಅವರನ್ನು ಕಣಕ್ಕಿಳಿಸಿ ಕ್ಷೇತ್ರವನ್ನು ಕೈವಶ ಮಾಡಿಕೊಂಡಿತು. 1962ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಟಿ.ಎನ್.ಮಾದಪ್ಪಗೌಡ ಗೆಲವು ಸಾಧಿಸಿದರು. ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಇಮೇಜ್ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತೆ 1967ರಲ್ಲಿ ಕೆ.ಸಿಂಗಾರಿಗೌಡ ಅವರಿಗೆ ಟಿಕೆಟ್ ನೀಡಿತು. ಪಕ್ಷದ ವರಿಷ್ಟರು ಇಟ್ಟಿದ್ದ ನಂಬಿಕೆ ಸಿಂಗಾರಿಗೌಡರು ಚುನಾವಣೆಯಲ್ಲಿ ಜಯ ಗಳಿಸಿ ಉಳಿಸಿಕೊಂಡರು.
ಅದೇ ರೀತಿ 1972 ರಲ್ಲಿ ಇಂದಿರಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾದಪ್ಪಗೌಡರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ನಿಜಲಿಂಗಪ್ಪ ಬಣ) ಅಭ್ಯರ್ಥಿಯಾಗಿದ್ದ ಎಚ್.ಟಿ. ಕೃಷ್ಣಪ್ಪ ಅವರನ್ನು ಸೋಲಿಸಿದರು. ಶಾಸಕರಾದ ಆರೇ ತಿಂಗಳಲ್ಲಿ ಮಾದಪ್ಪಗೌಡರು ನಿಧನರಾದಾಗ ಎದುರಾದ ಉಪಚುನಾವಣೆಯಲ್ಲಿ ಎಚ್.ಟಿ. ಕೃಷ್ಣಪ್ಪ ಗೆಲವು ಸಾಧಿಸಿದರು.
1978ರ ಚುನಾವಣೆ ಗುರು-ಶಿಷ್ಯರ ನಡುವಿನ ಪೈಪೋಟಿಗೆ ಕ್ಷೇತ್ರ ವೇದಿಕೆಯಾಯಿತು. ಎಚ್.ಟಿ.ಕೃಷ್ಣಪ್ಪ ಅವರಿಗೆ ಒಂದು ಕಾಲದಲ್ಲಿ ರಾಜಕೀಯ ಗುರುವಾಗಿದ್ದ ಸಿಂಗಾರಿಗೌಡರು ಜನತಾ ಪಕ್ಷದಿಂದ ಕಣಕ್ಕಿಳಿದರೆ, ಶಿಷ್ಯ ಎಚ್.ಟಿ. ಕೃಷ್ಣಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡಕ್ಕಿಳಿದರು.ಚುನಾವಣೆಯಲ್ಲಿ ಗುರುವಿನ ವಿರುದ್ಧವೇ ಜಯಭೇರಿ ಬಾರಿಸಿದ ಎಚ್.ಟಿ. ಕೃಷ್ಣಪ್ಪ, ಮುಖ್ಯಮಂತ್ರಿ ಡಿ.ದೇವರಾಜ ಅರಸು ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ರೇಷ್ಮೆ ಸಚಿವರಾಗಿಯೂ ಕರ್ತವ್ಯ ನಿರ್ವಹಿಸಿದರು.
1983ರಲ್ಲಿ ಪಕ್ಷೇತರ ಅಭ್ಯರ್ಥಿ ಚಿಗರೀಗೌಡ ಆಯ್ಕೆಯಾದರೆ, 1985ರಲ್ಲಿ ಜನತಾ ಪಕ್ಷದ ಅಭ್ಯರ್ಥಿ ಎಚ್.ಟಿ. ಕೃಷ್ಣಪ್ಪ ಗೆಲವು ಸಾಧಿಸುವ ಮೂಲಕ 3ನೇ ಬಾರಿಗೆ ಶಾಸಕರಾಗುತ್ತಾರೆ. 1988 ಹಾಗೂ 1994ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಲ್.ಆರ್.ಶಿವರಾಮೇಗೌಡ ವಿಧಾನಸಭೆಗೆ ಆಯ್ಕೆಯಾಗುತ್ತಾರೆ.
1999ರ ಚುನಾವಣೆ ವೇಳೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆಯಿದ್ದರೂ ಕ್ಷೇತ್ರದ ಮತದಾರರು ಜೆಡಿಎಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಅವರ ಕೈ ಹಿಡಿದರು. ಮತ್ತೆ 2004ರಲ್ಲಿ ಆಯ್ಕೆಯಾಗಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಾರಿಗೆ, ಆರೋಗ್ಯ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಾರೆ. ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ನಾಗಮಂಗಲ ಕ್ಷೇತ್ರ ಸೇರಿಕೊಂಡ ತರುವಾಯ ನಡೆದ 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸುರೇಶ್‌ಗೌಡ ಎದುರು ಜೆಡಿಎಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಸೋಲು ಅನುಭವಿಸಿದರು.
ಯಾರ್ಯಾರು ಆಕಾಂಕ್ಷಿತರು: ಈ ಬಾರಿ ಹಾಲಿ ಶಾಸಕ ಕೆ.ಸುರೇಶ್‌ಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಖಚಿತ. ಸಂಸದ ಚಲುವರಾಯಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಉಳಿದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷದಿಂದ ಕೆ.ಕೃಷ್ಣಪ್ಪ, ಬಿಜೆಪಿ ಪಕ್ಷದಿಂದ ಡಾ.ಪಾರ್ಥಸಾರಥಿ, ತಾಪಂ ಮಾಜಿ ಸದಸ್ಯ ರಾಜೇಶ್ ಸಂಭವನೀಯ ಅಭ್ಯರ್ಥಿಗಳು.
-ಎಂ.ಅಫ್ರೋಜ್ ಖಾನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

