ಮಂಡ್ಯ

ಜನರನ್ನು ಪ್ರೀತಿ ವಿಶ್ವಾಸದಿಂದ ಗೆಲ್ಲಬೇಕು, ಹಣದಿಂದಲ್ಲ: ತಮ್ಮಣ್ಣ

Published On :

ಕ.ಪ್ರ.ವಾರ್ತೆ ಭಾರತೀನಗರ ಮಾ.26
ಜನನಾಯಕರಾದವರು ಹಣದ ಆಮಿಷ ತೋರಿಸಿ ಜನಸಾಮಾನ್ಯರ ಪ್ರೀತಿ ವಿಶ್ವಾಸ ಗಳಿಸಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಮಾರ್ಮಿಕವಾಗಿ ನುಡಿದರು.
ಸಮೀಪದ ಬಿದರಹೊಸಹಳ್ಳಿ ಗ್ರಾಮದಲ್ಲಿ ಮಂಗಳವಾರ ಸೋಮೇಶ್ವರ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಕೆಲವೆಡೆ ನನ್ನ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಸಲಾಗುತ್ತಿದೆ. ಡಿಸಿ ತಮ್ಮಣ್ಣ ಹಣ ಕೊಡುತ್ತಾರೆ. ಅದರಿಂದ ಜನರನ್ನು ಆಕರ್ಷಿಸುತ್ತಿದ್ದಾರೆಂದು ವಿರೋಧಿಗಳು ನಡೆಸುತ್ತಿರುವ ಕುತಂತ್ರಕ್ಕೆ ಯಾರೂ ಕಿವಿ ಕೊಡಬಾರದೆಂದು ಮನವಿ ಮಾಡಿದರು.
ನಮ್ಮ ತಾತನವರ ಕಾಲದಲ್ಲಿ 300 ಎಕರೆ ಜಮೀನ್ದಾರರ ಕುಟುಂಬ ನಮ್ಮದು. ಆದರೆ ಇಂದು ನಾನು ಸಾಲದ ಸಮಸ್ಯೆಯಲ್ಲಿ ಸಿಲುಕಿದ್ದೇನೆ. ಆದರೂ ನನ್ನ ಕ್ಷೇತ್ರದ ಜನರಿಗೆ ಉಪಯುಕ್ತವಾಗುವ ಯಾವುದೇ ಕೆಲಸವನ್ನು ಪೂರೈಸುವವರೆಗೆ ವಿಶ್ರಮಿಸಿದ ವ್ಯಕ್ತಿ ನಾನಲ್ಲ. ಅಧಿಕಾರವಿದ್ದಾಗಲೂ, ಅಧಿಕಾರ ಇಲ್ಲದಿದ್ದರೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಶ್ರಮಿಸುತ್ತಾ ಬಂದಿದ್ದೇನೆ. ಕೋಟ್ಯಂತರ ರು ಮೌಲ್ಯದ ಆಸ್ತಿಯನ್ನು ಧರ್ಮಾರ್ಥ ನೀಡಿ ಅಲ್ಲಿ ಗ್ರಾಮೀಣ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶಾಲಾ ಕಾಲೇಜುಗಳನ್ನು ನಡೆಸಲಾಗುತ್ತಿದೆ. ನನ್ನ ಶಾಸಕತ್ವದ ಅವಧಿಯಲ್ಲಿ ಕಾವೇರಿ ನೀರನ್ನು ಮದ್ದೂರಿಗೆ ತರುವ ಯೋಜನೆ ಯಶಸ್ವಿಯಾಗಿದೆ.
ಬಿದರಹೊಸಹಳ್ಳಿ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಗ್ರಾಮ ಪಂಚಾಯಿತಿ ಮುಖ್ಯ ಪೈಪ್‌ಲೈನ್‌ನಿಂದ ಸಂಪರ್ಕ ಪಡೆದುಕೊಳ್ಳಬೇಕಿದೆ ಎಂದರು.
ಸೋಮೇಶ್ವರ ಸನ್ನಿಧಿಯಲ್ಲಿ ಪ್ರಶ್ನಿಸಲಿ: ಇಂದು ಸುಳ್ಳು ಹೇಳುವವರಿಗೆ ಮಣೆ ಹಾಕುವ ವಾತಾವರಣ ಕಂಡು ಬರುತ್ತಿದೆ. ನಾನು ಕಾಯ, ವಾಚ, ಮನಸ ಪ್ರಾಮಾಣಿಕವಾಗಿ ಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನಿಂದ ಯಾರಿಗಾದರೂ ಮೋಸ ಅಥವಾ ಅನ್ಯಾಯವಾಗಿದ್ದಲ್ಲಿ ಸೋಮೇಶ್ವರ ಸನ್ನಿಧಿಯಲ್ಲೇ ಬಂದು ನನ್ನನ್ನು ಪ್ರಶ್ನಿಸಲಿ ಎಂದು ಹೇಳಿದರು.
ಕುಮಾರಸ್ವಾಮಿ ಅವರನ್ನು ಯಾರು ಬೇಕಾದರೂ ನೇರವಾಗಿ ಸಂಪರ್ಕಿಸಿ ತಮ್ಮ ಮನವಿ ಸಲ್ಲಿಸಬಹುದು.  ಅದರಂತೆ ಈ ಕ್ಷೇತ್ರದಲ್ಲಿ ನನ್ನನ್ನು ಯಾವಾಗ ಬೇಕಾದರೂ ಜನತೆ ನೇರವಾಗಿ ಬಂದು ಕಾಣಬಹುದಾಗಿದೆ ಎಂದು ಸಲಹೆ ನೀಡಿ ರಾಷ್ಟ್ರೀಯ ಪಕ್ಷದ ರಾಜ್ಯ ನಾಯಕರನ್ನು ನೀವು ಸಂಪರ್ಕಿಸಬಹುದೇ ಎಂದು ಪ್ರಶ್ನೆ ಮಾಡಿಕೊಳ್ಳಿ ಎಂದರು.
ವೇದಿಕೆಯಲ್ಲಿ ವಿವಿಎಸ್‌ಬಿಎನ್ ಮಾಜಿ ಅಧ್ಯಕ್ಷ ಬಳ್ಳಾರಿಗೌಡ, ಯಜಮಾನ್ ಮರೀಗೌಡ,  ಮುಖಂಡರಾದ  ನಿಂಗೇಗೌಡ, ಜಯರಾಮು, ಬೋರೇಗೌಡ, ಅರುಣ್, ಬಿದರಹಳ್ಳಿ ಬಸವೇಗೌಡ, ಕೆ.ಟಿ.ಸುರೇಶ್ ಸೇರಿದಂತೆ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.