ಇನ್ನೂ ಸಿಗದ ಸಿದ್ದು ಅಭಿಮಾನಿ ಗುರುತು
ಮೈಸೂರು: ಇನ್ನೂ 20 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರಲಿ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಅಪರಿಚಿತ ವ್ಯಕ್ತಿಯ ಹೆಸರು ಮತ್ತು ವಿಳಾಸ ಇನ್ನೂ ಪತ್ತೆಯಾಗಿಲ್ಲ. ನಂಜನಗೂಡು ರಸ್ತೆ ಕಾಮತ್ ಹೊಟೇಲ್ ಹಿಂಭಾಗದಲ್ಲಿರುವ ತೋಪಿನಲ್ಲಿ ಮರಕ್ಕೆ ನೇಣು ಬಿಗಿದು 45 ವರ್ಷದ ಅಪರಿಚಿತ ವ್ಯಕ್ತಿ ಕೆಲವು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರು ಬರೆದಿಟ್ಟಿದ್ದ ಪತ್ರದಲ್ಲಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ, ಜಲಾಶಯಗಳು ತುಂಬಿದೆ, ನನ್ನ ಬಹುದಿನ ಕನಸು ಈಡೇರಿದೆ. ಸಿದ್ದರಾಮಯ್ಯ ಅವರೇ ಇನ್ನೂ 20 ವರ್ಷ ಮುಖ್ಯಮಂತ್ರಿಯಾಗಿರಲಿ ಎಂದು ಬಯಸಿದ್ದಾರೆ. ಆದರೆ, ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಅವರ ವಾರಸುದಾರರು ಸಹ ಮುಂದೆ ಬಂದಿಲ್ಲ. ಹೀಗಾಗಿ ಶುಕ್ರವಾರ ಮೃತ ವ್ಯಕ್ತಿಯ ಶವಪರೀಕ್ಷೆ ನಡೆಸಲಾಗಿದೆ. ಇವರ ವಾರಸುದಾರರು ಇದ್ದಲ್ಲಿ ದೂ. 0821- 2418319 ಸಂಪರ್ಕಿಸಲು ಕೆ.ಆರ್. ಠಾಣೆ ಪೊಲೀಸರು ಕೋರಿದ್ದಾರೆ.
ವೇಶ್ಯಾವಾಟಿಕೆ: ವ್ಯಕ್ತಿ ಬಂಧನ
ಮೈಸೂರು: ಬಾಂಗ್ಲಾದೇಶ ಮೂಲದ ಇಬ್ಬರು ಮಹಿಳೆಯರನ್ನು ಇರಿಸಿಕೊಂಡು ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಉದಯಗಿರಿ ಠಾಣೆ ಪೊಲೀಸರು ಭಾನುವಾರ ಸಂಜೆ ಬಂಧಿಸಿದ್ದಾರೆ. ಬೆಂಗಳೂರು ಮೂಲದ ಅನ್ಬುಶೇಖರ್ (26) ಬಂಧಿತ ಆರೋಪಿ. ಈತನು ಇಬ್ಬರು ಬಾಂಗ್ಲಾದೇಶ ಮೂಲದ ಮಹಿಳೆಯರನ್ನು ಇರಿಸಿಕೊಂಡು ರಾಜೀವ್ನಗರದ ಬಾಡಿಗೆ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಉದಯಗಿರಿ ಠಾಣೆ ಇನ್ಸ್ಪೆಕ್ಟರ್ ಆರ್.ಪಿ. ಅಶೋಕ್, ಎಸ್ಐಗಳಾದ ವೆಂಕಟೇಶ್, ನರೇಂದ್ರಬಾಬು, ಅಫೀಜಾಬೇಗಂ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ, ಇಬ್ಬರು ಮಹಿಳೆಯರನ್ನು ರಕ್ಷಿಸಿ ಶಕ್ತಿಧಾಮಕ್ಕೆ ಬಿಟ್ಟಿದ್ದಾರೆ.
ಆಕಸ್ಮಿಕ ಬೆಂಕಿ: ಗೃಹಿಣಿ ಸಾವು
ಮೈಸೂರು: ಸೀಮೆಎಣ್ಣೆ ಸ್ಟೌವ್ ಹಚ್ಚುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ತೀವ್ರ ಸುಟ್ಟಗಾಯಗಳೊಂದಿಗೆ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಭಾನುವಾರ ಮೃತಪಟ್ಟಿದ್ದಾರೆ.ಜೆ.ಪಿ. ನಗರ ಬಳಿಯ ಮಹದೇವಪುರ ನಿವಾಸಿ ದೊರೆ ಎಂಬವರ ಪತ್ನಿ ರೂಪಾ (25) ಮೃತಪಟ್ಟವರು. ಇವರು 4- 5 ದಿನಗಳ ಹಿಂದೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದರು. ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಲಕನಿಗೆ ಹಲ್ಲೆ: ಆರೋಪಿ ಬಂಧನ
ಮೈಸೂರು: ಮುಂದೆ ಹೋಗಲು ದಾರಿ ಬಿಡಲಿಲ್ಲ ಎಂಬ ಕಾರಣಕ್ಕಾಗಿ ಕೆಎಸ್ಆರ್ಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಕೆ.ಆರ್. ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬಿಎಂಶ್ರೀ ನಗರ ನಿವಾಸಿ ಅಣ್ಣಯ್ಯಪ್ಪ ಬಂಧಿತ ಆರೋಪಿ. ಈತನು ಬಸ್ ಚಾಲಕ ಯಾಸೀನ್ ಬೇಗ್ ಎಂಬವರ ಮೇಲೆ ಹಲ್ಲೆ ನಡೆಸಿದ್ದಾನೆ. ಮುಂಜಾನೆ ಎಪಿಎಂಸಿಯಿಂದ ತರಕಾರಿ ತೆಗೆದುಕೊಂಡು ಗೂಡ್ಸ್ ಆಟೋದಲ್ಲಿ ಅಣ್ಣಯ್ಯಪ್ಪ ನಗರದತ್ತ ಬರುತ್ತಿದ್ದ, ಎದುರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕ ಯಾಸೀನ್ಗೆ ದಾರಿ ಬಿಡುವಂತೆ ಹೆಡ್ಲೈಟ್ ಹಾಕಿದ್ದಾನೆ. ಆದರೆ, ಯಾಸೀನ್ ದಾರಿ ಬಿಡದೆ ಮುಂದೆ ಹೋಗಿದ್ದಾರೆ. ಇದರಿಂದ ಕುರಿತಗೊಂಡ ಅಣ್ಣಯ್ಯಪ್ಪ ಹಿಂಬಾಲಿಸಿಕೊಂಡು ಹೋಗಿ, ಬಸ್ಸನ್ನು ಅಡ್ಡಗಟ್ಟಿ ಚಾಲಕ ಯಾಸೀನ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಬಸ್ ನಿರ್ವಾಹಕ ಕೃಷ್ಣ ಶೆಟ್ಟಿ ನೀಡಿರುವ ದೂರಿನ್ವಯ ಕೆ.ಆರ್. ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಮಂಚಯ್ಯ ನೇಮಕ
ಮೈಸೂರು: ನಗರಪಾಲಿಕೆ ಪೌರ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೆ. ಮಂಚಯ್ಯ ನೇಮಕವಾಗಿದ್ದಾರೆ. ಅವರನ್ನು ಆದಿದ್ರಾವಿಡ ತಮಟೆ ಮತ್ತು ನಗಾರಿ ಸಾಂಸ್ಕೃತಿಕ ಕಲಾವೃಂದದ ಅಧ್ಯಕ್ಷ ಸಿ. ಮಂಜುನಾಥ್, ಸಲಹೆಗಾರ ಆರ್. ಪರಮೇಶ್ವರ, ಕಾರ್ಯದರ್ಶಿ ಕೆ. ಸೋಮು ಅಭಿನಂದಿಸಿದ್ದಾರೆ.
ಮಂಟೇಲಿಂಗಯ್ಯ ಪುನರಾಯ್ಕೆ
ಮೈಸೂರು: ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಿ. ಮಂಟೇಲಿಂಗಯ್ಯ ಅವರು ಅತ್ಯಧಿಕ ಮತಗಳಿಂದ ಪುನರಾಯ್ಕೆಯಾಗಿದ್ದಾರೆ.
ನೇಮಕ
ಮೈಸೂರು: ಮೈಸೂರು ಜಿಲ್ಲಾ ಸರ್ವಜನಾಂಗ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ ಆರ್. ಲಕ್ಷ್ಮಣರಾಜ್ ನೇಮಕವಾಗಿದ್ದಾರೆ.
ಯುವತಿ ನಾಪತ್ತೆ
ಮೈಸೂರು: ನಗರ ಬಸ್ ನಿಲ್ದಾಣದಿಂದ ಸಾಕಮ್ಮ (23) ಎಂಬವರು ಜು.29 ರಿಂದ ನಾಪತ್ತೆಯಾಗಿದ್ದಾರೆ. ತನ್ನ ಸಹೋದರ ಮಣಿಕಂಠನೊಂದಿಗೆ ಸಾಕಮ್ಮ ಬಸ್ ನಿಲ್ದಾಣಕ್ಕೆ ಬಂದಿದ್ದು, ಯಾವುದೋ ಕಂಪನಿಯೊಂದರ ಸಂದರ್ಶನಕ್ಕೆ ಎಂದು ಹೇಳಿ ಹೋದವರು ಕಾಣೆಯಾಗಿದ್ದಾರೆ. ಈ ಕುರಿತು ಸಾಕಮ್ಮಳ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಚಹರೆ- 4.9 ಅಡಿ ಎತ್ತರ, ಗೋದಿ ಮೈಬಣ್ಣ, ಗುಂಡು ಮುಖ, ಸಾಧಾರಣ ಮೈಕಟ್ಟು, ಹಲ್ಲೊಂದು ಉಬ್ಬಿರುತ್ತದೆ. ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418306 ಸಂಪರ್ಕಿಸಲು ದೇವರಾಜ ಠಾಣೆ ಪೊಲೀಸರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

