ತಂತ್ರಜ್ಞಾನದ ಸವಲತ್ತು ಬಳಸಿಕೊಳ್ಳಿ: ಪ್ರೊ. ಮಾಲಗತ್ತಿ
ಕ.ಪ್ರ.ವಾರ್ತೆ ಮೈಸೂರು ಆ. 7
ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ಸಮರ್ವಕವಾಗಿ ಬಳಸಿಕೊಳ್ಳಬೇಕು ಎಂದು ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಸಲಹೆ ಮಾಡಿದರು.
ಮಹಾರಾಜ ಕಾಲೇಜಿನ ಜೂನಿಯರ್ ಬಿ.ಎ. ಹಾಲ್ನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ಅನಂತಯಾತ್ರಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ನಾವು ಸೋಮಾರಿಗಳು. ತಂತ್ರಜ್ಞಾನದ ಜತೆ ಕರಗಿ ಹೋಗಿದ್ದೇವೆ. ಆದರೆ ಈಗಿನ ವಿದ್ಯಾರ್ಥಿಗಳಿಗೆ ನಮಗಿರದಿದ್ದ ಅನೇಕ ಸವಲತ್ತುಗಳಿವೆ. ಅವುಗಳನ್ನು ಬಳಸಿಕೊಳ್ಳಬೇಕು ಎಂದರು.
ದೇವರಿಲ್ಲದ ಗುಡಿ, ಗ್ರಂಥಾಲಯವಿಲ್ಲದ ಕಾಲೇಜು ಎರಡೂ ವ್ಯರ್ಥ. ಆದರೆ ಮಹಾರಾಜ ಕಾಲೇಜಿನಲ್ಲಿ ದೊಡ್ಡ ಗ್ರಂಥಾಲಯವಿದೆ. ನಾನು ಅಧ್ಯಾಪಕನಾಗಿ ಸೇರಿದಾಗ ದೊಡ್ಡ ಗ್ರಂಥಾಲಯವಿರುವ ಕಾಲೇಜಿಗೆ ಹಾಕಿ ಎಂದು ಮಂಗಳೂರಿಗೆ ಹಾಕಿಸಿಕೊಂಡಿದ್ದೆ ಎಂದು ಅವರು ಸ್ಮರಿಸಿದರು.
ವಾರ್ಷಿಕ ಸಂಚಿಕೆಗಳಿಗೆ ತನ್ನದೇ ಆದ ಮಿತಿ ಇರುತ್ತದೆ. ಆದರೆ ಅನಂತಯಾತ್ರಿ ಅದನ್ನು ಮೀರಿ ಅನಂತವಾಗಲು ಪ್ರಯತ್ನಪಟ್ಟಿದೆ. ಕರ್ನಾಟಕದ ಅಸ್ತಿತ್ವದ ಯಾತ್ರೆಯಂತೆ ಕಾಣಿಸುತ್ತದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಪಾದಕನ ಕೆಲಸ ದೊಡ್ಡ ತಲೆನೋವಿನದು ಎಂಬುದು ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆಯನ್ನು 7 ಸಂಪುಟಗಳಲ್ಲಿ ತರುತ್ತಿರುವ ನನಗೆ ಗೊತ್ತಾಗಿದೆ. ಲೇಖನಗಳನ್ನು ಬರೆಸುವುದು, ತಿದ್ದುವುದು ಎಷ್ಟು ಕಷ್ಟು ಎಂಬುದು ಗೊತ್ತಾಗಿದೆ. ಹೀಗಿರುವಾಗ ಪ್ರೊ. ಶಿವರಾಜಪ್ಪ ಅವರು ವಾರ್ಷಿಕ ಸಂಚಿಕೆಯನ್ನು ಉತ್ತಮವಾಗಿ ರೂಪಿಸಿದ್ದಾರೆ ಎಂದು ಶ್ಲಾಘಿಸಿದರು.
ವರ್ತಮಾನದ ಸಂಗತಿಯನ್ನು ವಾಸ್ತವಕ್ಕೆ ಒಗ್ಗಿಸಿಕೊಳ್ಳಲು ಯತ್ನಿಸಲಾಗಿದೆ. ಚರಿತ್ರೆ ಜತೆಗೆ ವರ್ತಮಾನ ಸೇರಿಸಿದರೆ ಪ್ರಸ್ತುತ ಆಗುತ್ತದೆ. ಆತ್ಮವಿಶ್ವಾಸವೇ ಬರವಣಿಗೆಯ ಶಕ್ತಿ ಎಂದರು.
ಪ್ರೊ.ಮಾಲಗತ್ತಿಯವರು ವಿದ್ಯಾರ್ಥಿಗಳಿಗೆ ಮಾದರಿ ಎಂಬ ಡಾ.ಎಸ್. ಶಿವರಾಜಪ್ಪ ಅವರ ಮಾತನ್ನು ಪ್ರಸ್ತಾಪಿಸಿದ ಅವರು, ಮಾಲಗತ್ತಿ ಕುಬ್ಜ. ಆದ್ದರಿಂದ ನನ್ನಂಥವರು ಮಾದರಿಯಾಗಬಾರದು. ಈ ಕಾಲೇಜಿನಲ್ಲಿ ಕುವೆಂಪು ಅವರಂಥ ದಿಗ್ಗಜರು
ಓಡಾಡಿರುವ ದೊಡ್ಡ ಇತಿಹಾಸವಿದೆ. ದಿಗ್ಗಜರು ಕೆಲಸ ಮಾಡಿದ ಸ್ಥಳಕ್ಕೆ ಬರುವುದೇ ಜನ್ಮಸಾರ್ಥಕವಾದಂತೆ. ಸಮಗ್ರ ಸಾಹಿತ್ಯ, ಇತಿಹಾಸ ಓದಿದಂತೆ ಆಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಮಹಾರಾಜ ಕಾಲೇಜು, ಮೈಸೂರು ಮಾದರಿಯಾಗಲಿ ಎಂದು ಆಶಿಸಿದರು.
ಕಾಲ ಬದಲಾದಂತೆ ಕೆಲಸದಲ್ಲೂ ಬದಲಾವಣೆಯಾಗಿದೆ. ನಾವೆಲ್ಲಾ ಎಚ್ಚರಗೊಳಿಸುವ ಸೊಳ್ಳೆಗಳ ಸ್ನೇಹಿತರಾಗಿ ರಾತ್ರಿ ಓದು, ಬರಹ ಮಾಡುತ್ತಿದ್ದವು. ಆದರೆ ಈಗ ಸೆಮಿಸ್ಟರ್ ಪದ್ಧತಿ ಇರುವುದರಿಂದ ಅಂದಿನ ಪಾಠ ಅಂದೇ ಓದಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಂಶುಪಾಲ ಪ್ರೊ. ವಸಂತ ಮಾತನಾಡಿ, ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು ಆರ್ಥಿಕವಾಗಿ ಬಡವರಾದರೂ ಸಾಂಸ್ಕೃತಿಕವಾಗಿ ಶ್ರೀಮಂತರಾಗಿದ್ದಾರೆ ಎಂದರು.
ವಾರ್ಷಿಕ ಸಂಚಿಕೆಯ ಸಂಪಾದಕ ಪ್ರೊ.ಎಸ್. ಶಿವರಾಜಪ್ಪ ಸ್ವಾಗತಿಸಿದರು. ಡಾ. ರೂಪಾ ಪ್ರಾರ್ಥಿಸಿದರು. ಕಾಲೇಜಿನ ಆಡಳಿತಾಧಿಕಾರಿ ಡಾ.ಬಿ. ನಾಗರಾಜಮೂರ್ತಿ ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಜೆ. ಲೋಹಿತ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

