ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲವು
ಭೇರ್ಯ: ಜನರ ಭಾವನೆ ಮತ್ತು ಭರವಸೆಗಳು ಕಾಂಗ್ರೆಸ್ ಸರ್ಕಾರದ ಮೇಲಿದೆ. ಆದ್ದರಿಂದ ಮಂಡ್ಯ ಲೋಕಸಭೆ ಮತ್ತು ಮೈಸೂರು ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅತ್ಯಂತ ಅಧಿಕ ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಹೇಳಿದರು.
ಕೆ.ಆರ್. ನಗರ ತಾಲೂಕಿನ ಹೊಸಅಗ್ರಹಾರ ಹೋಬಳಿ ಮತ್ತು ಭೇರ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಶುಕ್ರವಾರ ಬಿರುಸಿನ ಪ್ರಚಾರ ಕೈಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ 15 ಲಕ್ಷ ರೈತರ 3,600 ಕೋಟಿ ಸಾಲಮನ್ನಾ ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಚುನಾವಣೆ ಸಮಯದಲ್ಲಿ ಹೇಳಿದ್ದಾರೆ. ಆದರೆ ಅವರು ಸರ್ಕಾರದ ಬೊಕ್ಕಸದಲ್ಲಿ ಇಟ್ಟಿದ್ದು ಕೇವಲ 940 ಕೋಟಿ ಮಾತ್ರ. ಉಳಿದ ಬಾಕಿ 2,600 ಕೋಟಿ ಹಣವನ್ನು ಕಾಂಗ್ರೆಸ್ ಸರ್ಕಾರ ಬಂದು ಕೇವಲ ಎರಡು ತಿಂಗಳಲ್ಲಿ ಹಣವನ್ನು ನೀಡುತ್ತಾ ಬಂದಿದೆ ಎಂದ ಅವರು, ಜೆಡಿಎಸ್ನ ಇಬ್ಬರು ಸ್ವಾಮಿಗಳು ರಾಜಿನಾಮೆ ನೀಡಿದ್ದರ ಪ್ರತಿಫಲದಿಂದ ಈ ಉಪಚುನಾವಣೆ ಬಂದಿದೆ ಎಂದು ತಿಳಿಸಿದರು.
ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಈ ಉಪಚುನಾವಣೆ ಕಳೆದ ಮೇಲೆ ಮತ್ತೆ ಮರು ಟೆಂಡರ್ ಕರೆದು ಸೂಕ್ತ ಕಂಪೆನಿಗಳಿಗೆ ನೀಡಲಾಗುವುದು. ಸರ್ಕಾರ ಇದರ ಬಗ್ಗೆ ಚಿಂತನೆ ನಡೆಸಿದೆ ಎಂದು ಹೇಳಿದರು.
ಅಭ್ಯರ್ಥಿಗಳೇ ಬಂದಿಲ್ಲ: ಈ ಭಾಗಕ್ಕೆ ಇನ್ನೂ ನಿಮ್ಮ ಅಭ್ಯರ್ಥಿಗಳೆ ಬಂದಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಮಹದೇವಪ್ರಸಾದ್, ನಮ್ಮ ಅಭ್ಯರ್ಥಿಗಳಾದ ಚಿತ್ರನಟಿ ರಮ್ಯಾ ಮತ್ತು ಧರ್ಮಸೇನ ಅವರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪಕ್ಷದ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಸಚಿವ ಅಂಬರೀಶ್, ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್, ಸಂಸದ ಎಚ್. ವಿಶ್ವನಾಥ್ ಮತ್ತು ನಾನು ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಇದೇ 19ರ ಸೋಮವಾರ ಕೆ.ಆರ್. ನಗರ ಮತ್ತು ತಾಲೂಕಿನ ಕೆಲವು ಹೋಬಳಿಗಳಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ, ಚುನಾವಣಾ ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಭೇರ್ಯದ ವೀರಶೈವ ಸಮಾಜದ ವತಿಯಿಂದ ಸಚಿವ ಮಹದೇವಪ್ರಸಾದ್ ಅವರನ್ನು ಅಭಿನಂದಿಸಿತು. ಕೆ.ಆರ್. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಲ್. ರಾಜಶೇಖರ್, ಪುರಸಭಾ ಸದಸ್ಯ ಪ್ರಭುಶಂಕರ್, ಮಾಜಿ ಸದಸ್ಯ ರಾಜಾ ಶ್ರಿಕಾಂತ್, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್. ಚೆನ್ನಬಸಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎಚ್. ಮಹದೇವು, ಮುಶೀರ್ಖಾನ್, ಸದಸ್ಯ ವಕೀಲ ಸತೀಶ್, ಕಾಂಗ್ರೆಸ್ ಮುಖಂಡರಾದ ಜಯಕೀರ್ತಿ, ಕುರುಬಹಳ್ಳಿ ಚೆನ್ನಾಪ್ಪಾಜಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

