ಕೆ.ಆರ್. ನಗರ ತಾಲೂಕಿನಲ್ಲೂ ನೀರಸ ಮತ
ಕ.ಪ್ರ.ವಾರ್ತೆ , ಕೆ.ಆರ್. ನಗರ , ಆ. 21
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಬುಧವಾರ ನಡೆದ ಉಪ ಚುನಾವಣೆಯ ಮತದಾನಕ್ಕೆ ಕೆ.ಆರ್. ನಗರ ತಾಲೂಕಿನಲ್ಲಿ ಶೇ.53 ರಷ್ಟು ಮತದಾನವಾಗಿದೆ.
ಬೆಳಗ್ಗೆ 8ಕ್ಕೆ ಮತದಾನ ಆರಂಭವಾಗಿ ಮಧ್ಯಾಹ್ನ ಒಂದು ಗಂಟೆಯಾದರೂ ತಾಲೂಕಿನಾದ್ಯಂತ ಶೇ. 20 ರಷ್ಟು ಮತದಾನ ಆಗಿರಲಿಲ್ಲ. ಕೆಲವು ಮತಗಟ್ಟೆಗಳಲ್ಲಿ ಶೇ. 10 ರಷ್ಟು ಮತದಾನ ನಡೆದಿತ್ತು. ಮತದಾರರು ಚುನಾವಣೆಯ ಬಗ್ಗೆ ತೀವ್ರ ನಿರಾಸಕ್ತಿ ತೋರಿದರಲ್ಲದೆ, ಕೇಂದ್ರದತ್ತ ಸುಳಿಯಲಿಲ್ಲ. ರಾಜಕೀಯ ಪಕ್ಷಗಳ ಮುಖಂಡರು ಹೆಚ್ಚು ಕಾಣಿಸಿದ್ದು ಕಂಡು ಬಂತು. ಆದರೆ, ಮಧ್ಯಾಹ್ನದ ನಂತರ ವೇಗ ಪಡೆದು, ಸಂಜೆ ವೇಳೆಗೆ ಶೇ. 53 ರಷ್ಟು ಮಂದಿ ಮತ ಚಲಾಯಿಸಿದರು.
ಈಗಾಗಲೇ ಕೃಷಿ ಚಟುವಟಿಕೆಗಳು ಆರಂಭವಾಗಿರುವುದರ ಜೊತೆಗೆ ಲೋಕಸಭೆಯ ಅವಧಿ ಕೆಲವೆ ತಿಂಗಳು ಉಳಿದಿರುವುದರಿಂದ ಮುಖಂಡರು ಮತ್ತು ಮತದಾರರಲ್ಲಿ ಚುನಾವಣೆ ಬಗ್ಗೆ ಆಸಕ್ತಿ ಮತ್ತು ಕುತೂಹಲವೆ ಇಲ್ಲದಂತಾಗಿದ್ದು, ಮತ ಕೇಂದ್ರಗಳು ಬೆಳಗ್ಗೆಯಿಂದ ಭಣಗುಡುತ್ತಿದ್ದವು.
ಮಾರಗೌಡನಹಳ್ಳಿ, ಹೊಸಕೋಟೆ ಕೊಪ್ಪಲು, ಮುದ್ದನಹಳ್ಳಿ, ಕುಪ್ಪೆ, ಚಿಕ್ಕಕೊಪ್ಪಲು, ದೊಡ್ಡಕೊಪ್ಪಲು, ಹಳಿಯೂರು, ಹೊಸೂರು, ಚುಂಚನಕಟ್ಟೆ ಸೇರಿದಂತೆ ಹತ್ತಾರು ಗ್ರಾಮಗಳ ಮತ ಕೇಂದ್ರಗಳ ಬಳಿ ಮಧ್ಯಾಹ್ನ 2 ಗಂಟೆಯಾದರೂ ಹೆಚ್ಚು ಮತದಾರರು ಬರಲಿಲ್ಲ. ಅಲ್ಲದೆ, ರಾಜಕೀಯ ಪಕ್ಷಗಳ ಮುಖಂಡರು ಮತದಾರರನ್ನು ಓಲೈಸುವ ದೃಶ್ಯಗಳು ಕಂಡು ಬರಲಿಲ್ಲ.
ಕೆಲವೆಡೆ ಬಲವಂತವಾಗಿ ಮತದಾರರನ್ನು ಕರೆ ತಂದು ಮತದಾನ ಮಾಡಿಸುತ್ತಿದ್ದ ದೃಶ್ಯ ಕಂಡು ಬಂತಲ್ಲದೆ, ಅನಗತ್ಯವಾಗಿ ಬಂದ ಲೋಕಸಭಾ ಉಪ ಚುನಾವಣೆಯ ಮೇಲೆ ಮತದಾರರಿಗೆ ಅಕ್ಕರೆ ಇರಲಿಲ್ಲ. ಸಿದ್ದಾಪುರ ಗ್ರಾಮದ ಮತ ಕೇಂದ್ರದಲ್ಲಿ ಗುರುತಿನ ಚೀಟಿ ತರದೆ ಮತದಾನ ಮಾಡಲು ಅವಕಾಶ ಕೇಳಿದಾಗ, ಇದಕ್ಕೆ ನಿರಾಕರಿಸಿದ ಅಧಿಕಾರಿಗಳ ಮೇಲೆ ಮಹಿಳಾ ಮತದಾರರು ಹರಿಹಾಯ್ದಾಗ ಗೊಂದಲ ಉಂಟಾಯಿತು.
ತಾಲೂಕಿನ ಸಂಕನಹಳ್ಳಿ, ದೊಡ್ಡಕೊಪ್ಪಲು ಮತ್ತು ಗಂಧನಹಳ್ಳಿ ಗ್ರಾಮಗಳಲ್ಲಿ ಮತ ಯಂತ್ರ ಕೈಕೊಟ್ಟಿದ್ದರಿಂದ ಕೆಲವು ಸಮಯ ಮತದಾನ ವಿಳಂಬವಾಯಿತು.
ನಂತರ ಅಧಿಕಾರಿಗಳು ಬಂದು ದುರಸ್ತಿಪಡಿಸಿದ ನಂತರ ಮತದಾನ ಆರಂಭವಾಯಿತು. ಬಟಿಗನಹಳ್ಳಿ, ಹರಂಬಳ್ಳಿಕೊಪ್ಪಲು ಸೇರಿದಂತೆ ಇತರ ಕೆಲವು ಗ್ರಾಮಗಳಲ್ಲಿ ಶೇ. 80ಕ್ಕೂ ಅಧಿಕ ಮತದಾನವಾಗಿದ್ದು ವಿಶೇಷವಾಗಿತ್ತು.
ರಮ್ಯ ಭೇಟಿ: ತಾಲೂಕಿನ ಭೇರ್ಯ, ಮಿರ್ಲೆ, ಸಾಲಿಗ್ರಾಮ, ಹಂಪಾಪುರ ಸೇರಿದಂತೆ ಪಟ್ಟಣದ ವಿವಿಧ ಮತಗಟ್ಟೆಗಳಿಗೆ ಕಾಂಗ್ರೆಸ್ ಅಭ್ಯರ್ಥಿ ರಮ್ಯ ಭೇಟಿ ನೀಡಿ ಮತದಾರರಲ್ಲಿ ತಮ್ಮ ಪರವಾಗಿ ಮತ ನೀಡುವಂತೆ ಮನವಿ ಮಾಡಿದರು.
ರಮ್ಯ ಮುನಿಸು: ಇಲ್ಲಿನ ಬಸವೇಶ್ವರ ಬಡಾವಣೆಯ ಮತಗಟ್ಟೆಗೆ ರಮ್ಯ ಭೇಟಿ ನೀಡಿದಾಗ, ಸುದ್ದಿಗಾರರೊಂದಿಗೆ ಮಾತನಾಡಿ, ಮತ ಯಾಚಿಸುವಾಗ ಸಾರ್ವಜನಿಕ ಸಮಾರಂಭಗಳಲ್ಲಿ ಮತ್ತು ರೋಡ್ ಶೋಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸದೆ, ಕಣ್ಣೀರು ಸುರಿಸಿ ಮತ ಕೇಳುವುದು ಸರಿಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಮುನಿಸು ತೋರಿ, ಮಾತನಾಡದೆ ಕಾರನ್ನೇರಿ ಹೊರಟರು.
ಜೆಡಿಎಸ್ಗೆ ಗೆಲವು: ಸಾ.ರಾ. ಮಹೇಶ್ ವಿಶ್ವಾಸ
ಸಾಲಿಗ್ರಾಮ: ಲೋಕಸಭಾ ಉಪಚುನಾವಣೆ ನಡೆಯುತ್ತಿರುವ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲವು ಖಚಿತ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು. ಸಾಲಿಗ್ರಾಮದಲ್ಲಿ ಬುಧವಾರ ಮತ ಚಲಾಯಿಸಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲಿ ಜನಪರ ಕಾರ್ಯಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಇದನ್ನು ಜನತೆ ಮರೆತಿಲ್ಲ. ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ನಮ್ಮ ಪಕ್ಷ ಗೆಲವನ್ನು ಸಾಧಿಸುವುದರಲ್ಲಿ ಯಾವುದೆ ಅನುಮಾನವಿಲ್ಲವೆಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

