ಮೈಸೂರು

ಕಾವ್ಯ ಏಕಾಂತ ದಾಟಿಸುವಂತಿರಬೇಕು

Published On :

ಕ.ಪ್ರ.ವಾರ್ತೆ ,  ಮೈಸೂರು ,  ಆ. 25
ಕಾವ್ಯವು ಏಕಾಂತವನ್ನು ದಾಟಿಸುವಂತಿರಬೇಕು. ಕವಿಯು ತನ್ನ ಅನುಭವವನ್ನು ಸಹೃದಯಿಗರಿಗೆ ತಲುಪಿಸಲು ಕಾವ್ಯ ಶ್ರದ್ಧೆ ಉಳ್ಳವನಾಗಿರಬೇಕು ಎಂದು ಬೆಂಗಳೂರು ಕೇಂದ್ರ ವಿಭಾಗ ಡಿಸಿಪಿ, ಸಾಹಿತಿ ಬಿ.ಆರ್. ರವಿಕಾಂತೇಗೌಡ ಹೇಳಿದರು.
ನೆಲದನಿ ಸಾಂಸ್ಕೃತಿಕ ಸಂಸ್ಥೆಯಿಂದ ಭಾನುವಾರ ಕಲಾಮಂದಿರದ ಮನೆಯಂಗಳದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಶಿಕ್ಷಕ ಟಿ. ಸತೀಶ್ ಜವರೇಗೌಡ ಮಂಡ್ಯ ಅವರ ಹೊಳೆ ಜಂಗಮನ ಜೋಳಿಗೆ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿ, ಸತೀಶ್ ಜವರೇಗೌಡ ಅವರು ಬೆಳೆಯುವ ಕವಿಯಾಗಿ ಕಾಣಿಸುತ್ತಿದ್ದಾರೆ ಎಂದರು.
ರೈನರ್ ರಿಲ್ಕ್ ಮಾರಿಯಾ ಅವರ ಯುವ ಕವಿಗೆ ಬರೆದ ಪತ್ರಗಳು ಕೃತಿಯಲ್ಲಿ ಉಲ್ಲೇಖಿಸಿರುವಂತೆ ಕವಿಯಾದವನು ಕಾವ್ಯವನ್ನು ಬರೆಯದೆ ಹೋದರೆ ಸತ್ತೇ ಹೋಗುತ್ತೇನೆ ಎಂಬ ಸ್ಥಿತಿಯಲ್ಲಿದ್ದಾಗ ಮಾತ್ರ ಕಾವ್ಯ ಬರುತ್ತದೆ. ಬರವಣಿಗೆ ರೂಪುಗೊಳ್ಳುತ್ತದೆ. ಕಾವ್ಯಕ್ಕೆ ಅಂತಹ ಶಕ್ತಿ ಇದೆ. ಅನುಭವವನ್ನು ಅಕ್ಷರ ರೂಪಕ್ಕೆ ಇಳಿಸಿ ಓದುಗರಿಗೆ ದಾಟಿಸುತ್ತದೆ. ಈ ಮೂಲಕ ಕವಿಯ ಏಕಾಂತವು ಕಳೆಯುತ್ತದೆ ಎಂದು ತಿಳಿಸಿದರು.
ಕೃತಿ ಕುರಿತು ಮೈವಿವಿ ಪ್ರಸಾರಾಂಗದ ನಿರ್ದೇಶಕ ಡಾ.ಸಿ. ನಾಗಣ್ಣ ಮಾತನಾಡಿ, ಹವ್ಯಾಸಿ ಕವಿಗಳ ವರ್ಗ ಎಂಬುದಿಲ್ಲ. ಬರೆಯದಿದ್ದರೆ ಸಾಯುತ್ತೇನೆ ಎಂಬ ಮನಸ್ಥಿತಿಯೇ ಕಾವ್ಯ ಬರೆಸುತ್ತದೆ. ಇಂತಹ ತವಕಕ್ಕೆ ಒಳಗಾದ ಸತೀಶ್ ಅವರಿಂದ ಒಳ್ಳೆಯ ಕಾವ್ಯ ಬಂದಿದೆ. ಬೆಳಕಿನಲ್ಲಿ ಹಣತೆ, ಹಣತೆಯಲ್ಲಿ ಬೆಳಕನ್ನು ಕಾಣ ಬಯಸಿದ ಸತೀಶ್ ಬೆಳಕಿನ ಕವಿಯಾಗಿದ್ದಾರೆ. ಸಂಘಟನೆಗೆ ಬಳಸುತ್ತಿರುವ ಸಮಯವನ್ನು ಕಡಿಮೆ ಮಾಡಿ ಸಾಹಿತ್ಯ ಕೃಷಿಗೆ ಮೀಸಲಿಟ್ಟರೆ ಮತ್ತಷ್ಟು ಕವನಗಳು ಸೃಜಿಸುತ್ತವೆ ಎಂದು ಆಶಿಸಿದರು.
ಹಿರಿಯ ಸಾಹಿತಿ ಡಾ. ಸಿಪಿಕೆ ಅಧ್ಯಕ್ಷತೆ ವಹಿಸಿದ್ದರು. ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಕೆ. ಪುಟ್ಟಸ್ವಾಮಿ, ಲೇಖಕ ಟಿ. ಸತೀಶ್ ಜವರೇಗೌಡ ಇದ್ದರು. ಕಸಾಪ ಪ್ರಧಾನ ಕಾರ್ಯದರ್ಶಿ ಡಾ.ವೈ.ಡಿ. ರಾಜಣ್ಣ ನಿರೂಪಿಸಿದರು. ಶಾಂತಾ ಜಗದೀಶ್ ಪ್ರಾರ್ಥಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.