ಮೈಸೂರು

ಶಿಕ್ಷಣದಷ್ಟೆ ಆದ್ಯತೆ ಕ್ರೀಡೆಗೂ ನೀಡಬೇಕು

Published On :

ಕೆ.ಆರ್. ನಗರ: ಶಿಕ್ಷಣ ಕ್ಷೇತ್ರಕ್ಕೆ ನೀಡುವಷ್ಟು ಮಹತ್ವ ಮತ್ತು ಆದ್ಯತೆಯನ್ನು ಕ್ರೀಡಾ ಕ್ಷೇತ್ರಕ್ಕೂ ನೀಡಿದರೆ ಆ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವವರಿಗೆ ಹೆಚ್ಚು ಸಹಕಾರಿ ಆಗುತ್ತದೆ ಎಂದು ಕನಕಗುರು ಪೀಠದ ಶಿವಾನಂದಪುರಿಶ್ರೀ ಹೇಳಿದರು.
ಇಲ್ಲಿನ ಕೃಷ್ಣರಾಜೇಂದ್ರ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಿತ್ಯ ಒಂದು ಗಂಟೆ ಕ್ರೀಡೆ ಮತ್ತು ವ್ಯಾಯಾಮಕ್ಕಾಗಿ ತಮ್ಮ ಸಮಯ ಮೀಸಲಿಡಬೇಕು ಮತ್ತು ಸೋಲು- ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿ ಹೆಸರು ಗಳಿಸುವಷ್ಟೆ, ಕ್ರೀಡಾ ಕ್ಷೇತ್ರದಲ್ಲಿಯೂ ವಿಫುಲ ಅವಕಾಶವಿದ್ದು, ತಮ್ಮಲಿನ ಪ್ರತಿಭೆಯನ್ನು ಹೊರಗೆಡವಲು ಯಾವುದೆ ಅಂಜಿಕೆ ತೋರಬಾರದು ಎಂದರು.
ಆಧುನಿಕ ಯುಗದಲ್ಲಿ ಸಾಧಕರಿಗೆ ಸಾಕಷ್ಟು ಗೌರವ ಪುರಸ್ಕಾರ ದೊರಕುತ್ತಿದ್ದು ಸಾರ್ವಜನಿಕರು ಮತ್ತು ಪೋಷಕರು ಮಕ್ಕಳಲ್ಲಿನ ಕ್ರೀಡಾ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಶಿಕ್ಷಣ ಸಂಸ್ಥೆಗಳು ಅಗತ್ಯ ತರಬೇತಿ ಸಲಹೆ- ಸಹಕಾರ ಕೊಡಿಸಿ ಅವರನ್ನು ಖ್ಯಾತ ಕ್ರೀಡಾಪಟುಗಳನ್ನಾಗಿ ಮಾಡಲು ಆದ್ಯತೆ ನೀಡಬೇಕು ಎಂದು ಶ್ರೀಗಳು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ತಹಸೀಲ್ದಾರ್ ವೀಣಾ ಕುಮಾರ್ ಮಾತನಾಡಿ, ಸದೃಢ ದೇಹದಲ್ಲಿ ದೃಢ ಮನಸ್ಸು ಇರಲು ಸಾಧ್ಯ. ದೇಶದ ಸುಭದ್ರತೆ ಕಾಪಾಡಲು ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಸಿದ್ಧರಾಗಬೇಕು ಈ ಸಾಧನೆಗೆ ಕ್ರೀಡೆ ಅತ್ಯಗತ್ಯ ಎಂದು ತಿಳಿಸಿದರು.
ಪತಂಜಲಿ ಯೋಗಾಶ್ರವು ಟ್ರಸ್ಟ್‌ನ ಅಧ್ಯಕ್ಷ ಡಾ.ಟಿ.ಶಿವನಂಜಪ್ಪ, ಬಿಇಒ ಎಸ್.ಟಿ. ಜವರೇಗೌಡ, ದೈಹಿಕ ಶಿಕ್ಷಣ ಪರಿವೀಕ್ಷಕ ಪಿ.ಮಧುರದಾಸ್, ಟಿ.ಮರಿಯಪ್ಪ ವಿದ್ಯಾ ಸಂಸ್ಥೆ ಮುಖ್ಯ ಶಿಕ್ಷಕ ಟಿ. ತುಕ್ಕೋಜಿರಾವ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ವಿಜಯ ಕುಮಾರ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಂಜುನಾಥ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಂಗಸ್ವಾಮಿ, ದೈಹಿಕ ಶಿಕ್ಷಕರಾದ ನರಸಯ್ಯ, ಬಸವರಾಜ್ ಇದ್ದರು.

ಕಳವು ಮಾಡುತ್ತಿದ್ದ ಇಬ್ಬರ ಬಂಧನ
ಕೆ.ಆರ್. ನಗರ: ಜಲ್ಲಿ ಕ್ರಷರ್‌ಗೆ ಬಳಸುತ್ತಿದ್ದ ಸಾಮಗ್ರಿಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಾಲಿಗ್ರಾಮ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಗೌಸಿಯಾನಗರದ ನಿವಾಸಿ ಮಹಮದ್ ಅತಿಕ್ ಹಾಗೂ ಮಹಮ್ಮದ್ ಸಮೀರ್ ಬಂಧಿತ ಆರೋಪಿಗಳು. ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ನದೀಕ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಭೇರ್ಯ ಸಮೀಪ ಮುಂಜನಹಳ್ಳಿ ಜಲ್ಲಿ ಕ್ರಷರ್‌ನಲ್ಲಿ ಬಳಸುತ್ತಿದ್ದ ಮೂರು ಲಕ್ಷ ರು. ಬೆಲೆಬಾಳುವ ಟಾಟಾ ಎಂಜಿನ್, ಆಲ್ಟ್ರನೇಟರ್, 3 ಎಚ್‌ಪಿಯು 3ಎಸಿ ಮೋಟರ್‌ಗಳು, ಎಚ್‌ಪಿಯು ಮೋಟರ್, ಬ್ಯಾಟರಿಗಳನ್ನು ಮೂವರು ಆರೋಪಿಗಳು ಕಳ್ಳತನ ಮಾಡಿ ಟೆಂಪೋದಲ್ಲಿ ಸಾಗಿಸಿ, ಮೈಸೂರಿನ ಗುಜರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದರು ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಗ್ರಿಗಳ ಮಾಲೀಕ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕೆ.ಎಂ. ಬಷೀರ್ ಸಾಲಿಗ್ರಾಮ ಠಾಣೆಯಲ್ಲಿ ದೂರು ನೀಡಿದ್ದರು. ಸರ್ಕಲ್ ಇನ್‌ಸ್ಪೆಕ್ಟರ್ ಪ್ರಸನ್ನಕುಮಾರ್ ಮಾರ್ಗದರ್ಶನದಲ್ಲಿ ಎಸ್‌ಐ ಮಹೇಶ್ ನೇತೃತ್ವದಲ್ಲಿ ಸಿಬ್ಬಂದಿ ತನಿಖೆ ಕೈಗೊಂಡು ಆರೋಪಿಗಳನ್ನು ಬುಧವಾರ ಬೆಳಗ್ಗೆ ಮೈಸೂರಿನ ಶಾಂತಿನಗರದಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.
ಬಳಿಕ ಆರೋಪಿಗಳು ಕಳ್ಳತನಕ್ಕೆ ಬಳಸುತ್ತಿದ್ದ ಕಾರು, ಟೆಂಪೋ ಹಾಗೂ ಕೆಲವು ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.