ನೆಮ್ಮದಿ ಜೀವನಕ್ಕೆ ಯಂತ್ರಗಳನ್ನು ಕಳಚೋಣ
-ಜೆ. ಮಹದೇವ
ಕ.ಪ್ರ.ವಾರ್ತೆ ಮೈಸೂರು ಆ. 28
ಭೂಮಿ ಮೇಲಿನ ಕೊನೆಯ ಮರ ಕಡಿದಾಗ, ಕೊನೆಯ ನೀರ ಹನಿ ಬತ್ತಿದಾಗ ಮನುಷ್ಯನಿಗೆ ಗೊತ್ತಾಗುವುದು ನಾವು ಹಣ ತಿನ್ನುವುದಕ್ಕೆ ಆಗುವುದಿಲ್ಲ- ಎಂಬ ಜನಪ್ರಿಯ ಉಕ್ತಿಯಿದೆ.
ಅಂದಹಾಗೆ ಈ ಉಕ್ತಿ ಮುಂದೊಂದು ದಿನ ನಿಜವೂ ಆಗಬಹುದು. ಅನಾದಿ ಕಾಲದಿಂದಲೂ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡು ಬಂದ ಮಾನವ ನಂತರ ಯಂತ್ರಗಳನ್ನೇ ಆಧಾರ ಮಾಡಿಕೊಂಡು ಅವಲಂಬಿತ ಬದುಕಿಗೆ ಸ್ಥಾನಪಲ್ಲಟಗೊಂಡ. ಅಲ್ಲಿಂದ ಯಂತ್ರ ನಾಗರಿಕತೆ ಬೆಳೆದು ಇಂದು ಮಾನವನ ಎಲ್ಲಾ ಕೆಲಸಗಳನ್ನು ಯಂತ್ರಗಳು ಬಾಚಿಕೊಂಡಿವೆ. ಮಾನವ ಮಾತ್ರ ಸೋಮಾರಿಯಾಗಿ ಜೀವನ ನಡೆಸುತ್ತಿರುವ ವಿಲಕ್ಷಣ ಸನ್ನಿವೇಶ ಕಣ್ಮುಂದೆ ನಿಂತಿದೆ.
ಈ ರೀತಿಯ ಭಯ ಹುಟ್ಟಿಸುವ ಯೋಚನೆಯಿಂದ ಚಿಂತನೆಗೀಡಾದ ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು. ಮನುಷ್ಯ ಹೇಗೆ ಯಂತ್ರಗಳನ್ನು ಅವಲಂಬಿಸಿದ್ದಾನೆ. ಈ ಯಂತ್ರ ಸಂಸ್ಕೃತಿಯಿಂದ ಮುಂದೆ ಆಗುವ ಅನಾಹುತ ಏನು ಎಂಬುದರ ಮುನ್ಸೂಚನೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಮೆಶೀನ್- ಮನುಷ್ಯ ಎಂಬ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಸೆ.1 ರಿಂದ 5 ರವರೆಗೆ ಸರಸ್ವತಿಪುರಂನಲ್ಲಿರುವ ಸಬ್ರಂಗ್ ಕಲಾ ಗ್ಯಾಲರಿಯಲ್ಲಿ ಏರ್ಪಡಿಸಿದ್ದಾರೆ.
ಏನಿದು ಮೆಶೀನ್- ಮನುಷ್ಯ?: ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ಸತತ ಐದು ವರ್ಷಗಳಿಂದ ರಚಿಸಿರುವ ಚಿತ್ರಕಲೆಯ ಪ್ರಧಾನ ಪರಿಕಲ್ಪನೆಯೇ ಮೆಶೀನ್- ಮನುಷ್ಯ. ನದಿ ಬಯಲುಗಳಿಂದ ಜೀವನ ಆರಂಭಿಸಿದ ಮನುಷ್ಯ ನಾಗರಿಕತೆಗೆ ಒಗ್ಗಿಕೊಂಡ. ಹೊಲ, ಮನೆ, ಮಠ ಎಲ್ಲವನ್ನೂ ಸ್ಥಾಪಿಸಿಕೊಂಡ. ಬಳಿಕ ಜೀವನನ್ನು ಮತ್ತಷ್ಟು ಸಂತೃಪ್ತಿಗೊಳಿಸಿಕೊಳ್ಳುವ ಮಹದಾಸೆಯಿಂದ ಯಂತ್ರಗಳನ್ನು ಸೃಷ್ಟಿಸಿಕೊಂಡ. ಆ ನಂತರ ಅವುಗಳನ್ನೇ ತನ್ನ ಜೀವನದ ಪ್ರಮುಖಾಂಗ ಮಾಡಿಕೊಂಡ. ಕೊನೆಗೆ ಅವುಗಳಿಗೆ ಜೋತು ಬಿದ್ದ ಆತನ ಚಲನೆಗೆ ಜಡತ್ವ ಆವರಿಸಿಕೊಂಡಿತು. ಅಗತ್ಯವಿಲ್ಲದೆಡೆ ಯಂತ್ರಗಳು ಬಂದು ಮಾಲಿನ್ಯ ಆವರಿಸಿಕೊಳ್ಳುವಂತೆ ಮಾಡಿಕೊಂಡಿರುವುದು ಈಗ ನಮ್ಮ ಕಣ್ಣ ಮುಂದಿದೆ.
ಈ ಅಂಶವನ್ನು ಒತ್ತಿ ಹೇಳುವಂತೆ ಮನುಷ್ಯನ ದೇಹದ ಚಿತ್ರ ಬರೆದು ರೇಖೆಗಳಿಂದ ಯಂತ್ರಗಳನ್ನು ಸೃಷ್ಟಿಸಿದ್ದಾರೆ. ಒಂದು ಚಿತ್ರದಲ್ಲಿ ತೀರಾ ಗ್ರಾಮೀಣ ಬದುಕು ಹರಡಿಕೊಂಡಿರುವುದು. ಅಲ್ಲಿನ ಜನ ಹೊಲ, ಗದ್ದೆಗಳಲ್ಲಿ ಕೆಲಸ ಮಾಡುತ್ತಿರುವುದು. ಬಹುಸಂಖ್ಯಾತರು ಕರಕುಶಲ ಕೆಲಸಗಳಲ್ಲಿ ತೊಡಗಿರುವುದು ಕಂಡುಬಂದರೆ, ಮತ್ತೊಂದು ಚಿತ್ರದಲ್ಲಿ ಯಂತ್ರಗಳನ್ನು ಅವಲಂಬಿಸಿರುವುದು. ಅವುಗಳಿಂದ ಪರಿಸರ ಹಾಳುಗುತ್ತಿರುವುದು. ಭೂತಾಯಿಯ ಒಡಲಲ್ಲಿ ಕೊಳೆಯಲಾಗದ ಪ್ಲಾಸ್ಟಿಕ್ ಮೆತ್ತಿಕೊಂಡಿರುವುದು. ಪ್ರಕೃತಿಯ ಸಂಕೇತವಾಗಿರುವ ಮರಕ್ಕೆ ಜಡತ್ವ ಆವರಿಸಿ ನಶಿಸಿ ಹೋಗುವ ಹಂತದಲ್ಲಿರುವ ಚಿತ್ರವನ್ನು ನೈಜವಾಗಿ ಚಿತ್ರಿಸಿದ್ದಾರೆ.
ಹೀಗೆ ಯಂತ್ರಗಳಿಂದ ಬಂದೊದಗಿರುವ ದುಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿರುವ ನಂಜುಂಡಸ್ವಾಮಿ ಮುಂದಿನ ನಿರ್ಧಾರವನ್ನು ಕಲಾಸಕ್ತರು, ಪ್ರೇಕ್ಷಕರಿಗೆ ಬಿಟ್ಟಿದ್ದಾರೆ.ನೀವೂ ಬನ್ನಿ: ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರ ಮೇಶಿನ್- ಮನುಷ್ಯ ಚಿತ್ರಕಲಾ ಪ್ರದರ್ಶನವು ಸೆ. 1 ರಿಂದ 5 ರವರೆಗೆ ಸರಸ್ವತಿಪುರಂನ ಬೇಕ್ ಪಾಯಿಂಟ್ ಬಳಿಯ ಸಬ್ರಂಗ್ ಕಲಾ ಗ್ಯಾಲರಿಯಲ್ಲಿ ನಡೆಯಲಿದೆ. ಸೆ. 1ರ ಸಂಜೆ 5.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ವಾಸು, ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್, ರಂಗಾಯಣ ಕಲಾವಿದ ಎಚ್.ಕೆ. ದ್ವಾರಕನಾಥ್ ಅತಿಥಿಯಾಗಿ ಭಾಗವಹಿಸುವರು.
ನಾನು ಯಾವುದೇ ಪರಿಕಲ್ಪನೆ ಇಟ್ಟುಕೊಂಡು ಕೆಲಸ ಮಾಡಿದರೂ ಅದು ಸಮಾಜಮುಖಿಯಾಗಿರಬೇಕೆಂದು ಆಶಿಸುತ್ತೇನೆ. ಹಾಗೆ ಮೆಶೀನ್- ಮನುಷ್ಯ ಚಿತ್ರಕಲಾ ಕೆಲಸವನ್ನು ಕಳೆದ ಐದು ವರ್ಷಗಳಿಂದ ಮಾಡಿಕೊಂಡು ಬಂದಿದ್ದು, ಇದೀಗ ಪ್ರದರ್ಶಿಸುತ್ತಿದ್ದೇನೆ.
-ಬಾದಲ್ ನಂಜುಂಡಸ್ವಾಮಿ, ಕಲಾವಿದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

