ಮೈಸೂರು

ಅರಸು ರಸ್ತೆಯಲ್ಲಿ ಪಾರ್ಕಿಂಗ್ ಜಾಗವಿಲ್ಲ...

Published On :

ಮೈಸೂರು:  ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಡಿ.ದೇವರಾಜ ಅರಸು ರಸ್ತೆಯೂ ಒಂದು. ಈ ರಸ್ತೆಯು ಕೆ.ಆರ್. ವೃತ್ತದಿಂದ ಜೆಎಲ್‌ಬಿ ರಸ್ತೆಗೆ ಸಂಪರ್ಕಿಸುತ್ತದೆ.
ಈ ರಸ್ತೆಯಲ್ಲಿರುವ ಬಟ್ಟೆ, ಮೊಬೈಲ್, ಚಿನ್ನಾಭರಣ, ಎಲೆಕ್ಟ್ರಾನಿಕ್ಸ್ ಇನ್ನಿತರ ಮಳಿಗೆಗಳಿಗೆ, ಬ್ಯಾಂಕುಗಳು, ವಿವಿಧ ಕಚೇರಿಗಳು ಇವೆ. ಹೀಗಾಗಿ, ನಗರದ ಎಲ್ಲಾ ಭಾಗದ ಜನರು ಪ್ರತಿನಿತ್ಯ ಸಾವಿರಾರು ಮಂದಿ ಬಂದು ಹೋಗುತ್ತಾರೆ. ಇಲ್ಲಿ ಬರುವವರು ಬಹುತೇಕರು ದ್ವಿಚಕ್ರ ವಾಹನ, ನಾಲ್ಕು ಚಕ್ರಗಳ ವಾಹನದಲ್ಲಿ ಬರುತ್ತಾರೆ. ಕೆಲವರು ಆಟೋಗಳಲ್ಲಿ ಬರುವುದುಂಟು.
ಬೆಳಗ್ಗೆಯಿಂದ ರಾತ್ರಿಯವರೆಗೆ ಗಿಜುಗುಡುವ ಈ ರಸ್ತೆಯಲ್ಲಿ ಪ್ರತಿನಿತ್ಯ ಸಂಚಾರ ದಟ್ಟಣೆ ಇದ್ದೆ ಇರುತ್ತದೆ. ಸಂಜೆಯ ನಂತರ ಸಂಚಾರ ದಟ್ಟಣೆ ಪ್ರಮಾಣ ಜಾಸ್ತಿ ಇರುತ್ತದೆ. ಹೀಗಾಗಿ, ಇಲ್ಲಿ ವಾಹನ ನಿಲುಗಡೆ ಸಮಸ್ಯೆಯೂ ಸಹ ತಲೆದೋರಿದೆ.
ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದಲೇ ನಗರ ಸಂಚಾರ ಪೊಲೀಸರು ಡಿ.ದೇವರಾಜ ಅರಸು ರಸ್ತೆಯಲ್ಲಿ ಏಕಮುಖ ಸಂಚಾರ (ಒನ್‌ವೇ) ವ್ಯವಸ್ಥೆ ಮಾಡಿದ್ದಾರೆ. ಕೆ.ಆರ್. ವೃತ್ತದಿಂದ ಜೆಎಲ್‌ಬಿ ಕಡೆಗೆ ಮಾತ್ರ ವಾಹನಗಳು ಸಂಚರಿಸಬಹುದು. ಅರಸು ರಸ್ತೆಗೆ ಹಲವು ಅಡ್ಡ ರಸ್ತೆಗಳು ಸೇರುತ್ತವೆ. ಇವುಗಳಲ್ಲೂ ಕೆಲವು ಅಡ್ಡ ರಸ್ತೆಗಳನ್ನೂ ಸಹ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಆದರೂ ಸಹ ಸಂಚಾರ ದಟ್ಟಣೆ ಮಾತ್ರ ಕಡಿಮೆ ಆಗಿಲ್ಲ. ನಗರದಲ್ಲಿ ಜನಸಂಖ್ಯೆ ಜೊತೆಗೆ ವಾಹನಗಳ ಸಂಖ್ಯೆಯೂ ಮಿತಿಮೀರಿ ಏರಿಕೆ ಆಗುತ್ತಿರುವುದರಿಂದ ಸಂಚಾರ ದಟ್ಟಣೆಯು ಜಾಸ್ತಿಯಾಗುತ್ತದೆ.
ಅರಸು ರಸ್ತೆಯಲ್ಲಿ ನೂರಾರು ಮಳಿಗೆಗಳಿವೆ. ಇವುಗಳ ಮಾಲೀಕರು ಮತ್ತು ಸಿಬ್ಬಂದಿ ನೂರಾರು ವಾಹನಗಳನ್ನು ತಂದು ನಿಲ್ಲಿಸುತ್ತಾರೆ. ಇಲ್ಲಿರುವ ಕಟ್ಟಡಗಳಲ್ಲಿ ನೆಲಮಹಡಿ ಪಾರ್ಕಿಂಗ್ ವ್ಯವಸ್ಥೆ ಮಾಡಿಲ್ಲ. ಕೆಲವೆಡೆ ಇರುವ ನೆಲಮಹಡಿಯಲ್ಲಿ ಮಳಿಗೆಗಳನ್ನು ತೆರೆಯಲಾಗಿದೆ. ಹೀಗಾಗಿ, ಗ್ರಾಹಕರು ತಮ್ಮ ವಾಹನಗಳನ್ನು ನಿಲ್ಲಿಸಲು ಪರದಾಡುವ ಪರಿಸ್ಥಿತಿ ಉಂಟಾಗಿದೆ.
ಇತರೆಡೆ...:  ನ್ಯೂ ಸಯ್ಯಾಜಿರಾವ್ ರಸ್ತೆ, ವಿನೋಬಾ ರಸ್ತೆ, ಅಶೋಕ ರಸ್ತೆ, ಚಾಮರಾಜ ಜೋಡಿ ರಸ್ತೆ, ಕಾಳಿದಾಸ ರಸ್ತೆ, ನ್ಯೂ ಕಾಂತರಾಜ ಅರಸು ರಸ್ತೆ ಸೇರಿದಂತೆ ವಿವಿಧೆಡೆ ಈ ಸಮಸ್ಯೆ ಇದೆ. ಕೆಲವು ಕಟ್ಟಡಗಳಲ್ಲಿ ನೆಲಮಹಡಿ ಪಾರ್ಕಿಂಗ್ ಇರುವುದರಿಂದ ತಕ್ಕಮಟ್ಟಿಗೆ ಪಾರ್ಕಿಂಗ್ ಸಮಸ್ಯೆ ಕುಗ್ಗಿದೆ. ಎಲ್ಲಾ ಕಟ್ಟಡಗಳಲ್ಲಿಯೂ ನೆಲಮಹಡಿಯನ್ನು ಪಾರ್ಕಿಂಗ್ ಮೀಸಲಿಟ್ಟರೆ ಸಮಸ್ಯೆಯನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದಾಗಿದೆ.
- ಬಿ.ಶೇಖರ್ ಗೋಪಿನಾಥಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.