ಮೈಸೂರು

ಬಜೆಟ್ ಬೇಡ, ವಿಧಾನಸಭೆ ವಿಸರ್ಜಿಸಿ: ಸಿದ್ದರಾಮಯ್ಯ

Published On :

ಮೈಸೂರು:  ಅಲ್ಪಮತಕ್ಕೆ ಕುಸಿದಿರುವ ರಾಜ್ಯ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಜೆಟ್ ಮಂಡಿಸದೆ, ವಿಧಾನಸಭೆ ವಿಸರ್ಜಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
117 ಶಾಸಕರ ಬೆಂಬಲವಿದ್ದ ಬಿಜೆಪಿ ಸರ್ಕಾರದ 13 ಮಂದಿ ಶಾಸಕರು ಸ್ಪೀಕರ್ ಕೆ.ಜಿ.ಬೋಪಯ್ಯ ಬೆಂಗಳೂರಿಗೆ ಆಗಮಿಸುತ್ತಲೇ ರಾಜಿನಾಮೆ ಸಲ್ಲಿಸಲು ತೀರ್ಮಾನಿಸಿದ್ದಾರೆ. ಇಂತಹ ಸಂದರ್ಭ 104 ಸ್ಥಾನಗಳ ಮೂಲಕ ಸರ್ಕಾರ ಅಲ್ಪಮತಕ್ಕೆ ಕುಸಿದಿರುವ ಹಿನ್ನೆಲೆ ಸಿಎಂ ಶೆಟ್ಟರ್ ಬಜೆಟ್ ಮಂಡಿಸಬಾರದು. ಬದಲಿಗೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಸಿದ್ಧರಾಗುವುದು ಒಳ್ಳೆಯದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು.
ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಪೀಕರ್ ಸ್ಥಾನ ದುರುಪಯೋಗವಾಗಿದೆ. ಇಂದೊಂದು ಸಂವಿಧಾನಬಾಹಿರ ಕೃತ್ಯ ಎಂದರು.
ಮಾಡಿದುಣ್ಣೋ ಮಹಾರಾಯ:  ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಈಗ 'ಮಾಡಿದ್ದುಣ್ಣೋ ಮಹಾರಾಯ' ಎಂಬಂತೆ ಆಗಿದೆ. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ 16 ಮಂದಿ ಶಾಸಕರನ್ನು ಅನರ್ಹಗೊಳಿಸುವಾಗ ಇದೇ ಬೋಪಯ್ಯರನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರ ಉಳಿಸಿಕೊಂಡಿದ್ದರು. ಈಗ ಶೆಟ್ಟರ್ ಸಹ ತಮ್ಮ ಸ್ಥಾನ ಉಳಿಸಿಕೊಳ್ಳಲು ಬೋಪಯ್ಯರನ್ನೇ ಬಳಸಿಕೊಂಡಿದ್ದಾರೆ ಎಂದು ಗೇಲಿ ಮಾಡಿದರು.
ಯಡಿಯೂರಪ್ಪ ಅವರಿಗೆ ಸರ್ಕಾರ ಉರುಳಿಸುವ ಉದ್ದೇಶ ಇಲ್ಲ. ಒಂದು ವೇಳೆ ಸರ್ಕಾರ ಬೀಳಿಸಬೇಕು ಎಂಬ ಆಸೆ ಇದ್ದರೆ ಶೆಟ್ಟರ್ ಸರ್ಕಾರದಿಂದ ನಮ್ಮ ಬೆಂಬಲ ಹಿಂದಕ್ಕೆ ಪಡೆಯುತ್ತಿದ್ದೇವೆ ಎಂದು ರಾಜ್ಯಪಾಲರಿಗೆ ಮನವಿ ನೀಡಿ ಸರ್ಕಾರ ಬೀಳಿಸಬಹುದಿತ್ತು. ಆದರೆ, ಸ್ಪೀಕರ್ಗೆ ರಾಜಿನಾಮೆ ನೀಡುತ್ತೇವೆ ಎನ್ನುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸ್ವಯಂ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಬರುವುದಿಲ್ಲ ಎಂದು ಹೇಳಿದರು.
ಕ್ಷೇತ್ರ ಬದಲಾವಣೆ ಇಲ್ಲ:  ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಯಡಿಯೂರಪ್ಪನವರೇ ನಿಲ್ಲಲಿ. ನಾನು ಕ್ಷೇತ್ರ ಬದಲಿಸುವುದಿಲ್ಲ. ಜೆಡಿಎಸ್ ಅಧಿಕಾರ ಹಿಡಿಯುತ್ತದೆ ಎಂಬ ಭ್ರಮೆ ಕುಮಾರಸ್ವಾಮಿಗೆ ಬಿಟ್ಟುಬಿಡಲಿ ಎಂದ ಅವರು, ನಾನು 1996 ರಲ್ಲಿಯೇ ಉಪ ಮುಖ್ಯಮಂತ್ರಿಯಾಗಿದ್ದೆ. ಜನತಾದಳ ಇಭ್ಭಾಗವಾಗಿದ್ದು 1999 ರಲ್ಲಿ. ಈ ಸಂದರ್ಭ ನಾನು, ಇಬ್ರಾಹಿಂ, ಲಕ್ಷ್ಮೀಸಾಗರ್, ಸತೀಶ್ ಜಾರಕಿಹೊಳಿ ಸೇರಿ ಪಕ್ಷವನ್ನು ಕಟ್ಟಿದೆವು. ಇದರಲ್ಲಿ ಎಚ್.ಡಿ. ದೇವೇಗೌಡರ ಪರಿಶ್ರಮವೂ ಇದೆ. ಆದರೆ ಎಚ್.ಡಿ. ಕುಮಾರಸ್ವಾಮಿಯ ಪರಿಶ್ರಮ ಇಲ್ಲ. ಆದ್ದರಿಂದ ಜನತಾದಳ ಜೆಡಿಎಸ್ ಆಗುವ ಮುನ್ನವೇ ನಾನು ಉಪ ಮುಖ್ಯಮಂತ್ರಿಯಾಗಿದ್ದೆ. ಇಷ್ಟಕ್ಕೂ ಎಚ್.ಡಿ. ದೇವೇಗೌಡರು ನಮ್ಮ ಬೆಂಬಲ ಮತ್ತು ಪರಿಶ್ರಮದಿಂದ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯಾಗಿದ್ದಾರೆ ಎಂದರು.
ಟಿಪ್ಪು ವಿವಿ ಸ್ಥಾಪಿಸಲಿ:  ಟಿಪ್ಪು ವಿಶ್ವವಿದ್ಯಾನಿಲಯ ಸ್ಥಾಪಿಸಬೇಕು. ಇದಕ್ಕೆ ಸರ್ಕಾರ ಅಗತ್ಯ ಜಮೀನು ನೀಡಬೇಕು. ಆಗತ್ಯ ಜಮೀನು ನೀಡದಿದ್ದರೆ ಈ ಬಗ್ಗೆ ಸದನದಲ್ಲಿ ಚರ್ಚಿಸುತ್ತೇನೆ ಎಂದರು.
ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಮುಖಂಡ ಕೆ. ನರಸೇಗೌಡ, ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಕಾಂಗ್ರೆಸ್ ವಕ್ತಾರ ಎಂ.ವಿ. ಸೀತಾರಾಂ, ಡಿಸಿಸಿ ಸದಸ್ಯ ಜಗದೀಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.