ರಾಜ್ಯದ ಅರಣ್ಯ ಅಭಿವೃದ್ಧಿಗೆ ಜಪಾನ್ ನೆರವು
ಹುಣಸೂರು: ಜಪಾನ್ ನೆರವಿನಡಿ ಅರಣ್ಯ ಪ್ರದೇಶವನ್ನು ಹೆಚ್ಚಿಸುವ ಸಲುವಾಗಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಜಂಟಿ ಅರಣ್ಯ ಯೋಜನೆ ಸಂಪನ್ಮೂಲ ವ್ಯಕ್ತಿ, ನಿವೃತ್ತ ಡಿಸಿಎಫ್ ಟಿ.ಎಚ್. ಮಲ್ಲಿಕಾರ್ಜುನ್ ಹೇಳಿದರು.
ಅರಣ್ಯ ಇಲಾಖೆಯ ಪ್ರಾದೇಶಿಕ ವಿಭಾಗದ ವತಿಯಿಂದ ರಚಿಸಲ್ಪಟ್ಟಿರುವ ಗ್ರಾಮ ಅರಣ್ಯ ಸಮಿತಿಗಳ ವಿವಿಧ ಅಭಿವೃದ್ಧಿ ಸುಸ್ಥಿರತೆ ಮತ್ತು ಇತರೆ ಚಟುವಟಿಕೆಗಳ ಪ್ರಗತಿ ಕುರಿತು ಪ್ರಾದೇಶಿಕ ಅರಣ್ಯ ವಿಭಾಗದ ಕಚೇರಿ ಆವರಣದಲ್ಲಿ ನಡೆದ, ವಿಭಾಗಮಟ್ಟದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗಾಗಲೆ ಗ್ರಾಮ ಅರಣ್ಯ ಸಮಿತಿಗಳ ಮೂಲಕ ನೆಡುತೋಪು ನಿರ್ಮಾಣ ಹಾಗೂ ಆದಾಯೋತ್ಪನ್ನ ಚಟುವಟಿಕೆಗಾಗಿ ಹಲವಾರು ಕಾರ್ಯಕ್ರಮ ರೂಪಿಸಲಾಗಿದೆ. ಇವೆಲ್ಲವನ್ನು ಪರಾಮರ್ಶಿಸಲು ಜಪಾನ್ ತಂಡ ಶೀಘ್ರವೇ ರಾಜ್ಯಕ್ಕೆ ಆಗಮಿಸಲಿದೆ. ಎಲ್ಲ ಸಮಿತಿಗಳು ತಮ್ಮ ವ್ಯವಹಾರ ಹಾಗೂ ಕಾರ್ಯಚಟುವಟಿಕೆಗಳ ದಾಖಲಾತಿ ಸರಿಯಾಗಿ ನಿರ್ವಹಿಸಿರಬೇಕು. ಅರಣ್ಯ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕೆಂದು ಸಮಿತಿ ಸದಸ್ಯರಿಗೆ ಸೂಚಿಸಿದರು. ಸಮಿತಿಗಳ ಕಾರ್ಯನಿರ್ವಹಣೆ ಬಗ್ಗೆ ಸದಸ್ಯರೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮ ಉದ್ಘಾಟಿಸಿ ಹುಣಸೂರು ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಎನ್.ಟಿ.ವಿಜಯಕುಮಾರ್ ಮಾತನಾಡಿ, ಹುಣಸೂರು ವಿಭಾಗದ ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ ತಾಲೂಕುಗಳಲ್ಲಿ 32 ಗ್ರಾಮ ಅರಣ್ಯ ಸಮಿತಿಗಳನ್ನು ರಚಿಸಲಾಗಿದೆ. ಗಿಡ ಬೆಳಸುವುದರ ಜೊತೆಗೆ ಅರಣ್ಯದಂಚಿನ ಗ್ರಾಮಸ್ಥರಲ್ಲಿ ಅರಣ್ಯದ ಮಹತ್ವದ ಬಗ್ಗೆ ತಿಳಿಸಿಕೊಡುವ ಹಾಗೂ ಗ್ರಾಮ ಅಭಿವೃದ್ಧಿಗೊಳಿಸುವ, ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಬೆಂಬಲ ನೀಡಿದೆ ಎಂದು ತಿಳಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಕೆಂಚೇಗೌಡ, ತೋಟಗಾರಿಕೆ ಇಲಾಖೆಯ ಸೋಮಯ್ಯ, ರೇಷ್ಮೆ ಇಲಾಖೆಯ ನಾಗರಾಜ್, ಪಶುಸಂಗೋಪನೆ ಇಲಾಖೆಯ ಡಾ.ನಾಗರಾಜ್ ಅವರು ಇಲಾಖೆ ಸೌಲಭ್ಯಗಳ ಬಗ್ಗೆ ಹಾಗೂ ಯೂನಿಯನ್ ಬ್ಯಾಂಕ್‌ನ ವ್ಯವಸ್ಥಾಪಕಿ ಸಿನಿಬಾ, ರೈತರಿಗೆ ಬ್ಯಾಂಕಿನಿಂದ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಆರ್. ಪ್ರಸನ್ನಕುಮಾರ್, ವಲಯ ಅರಣ್ಯಾಧಿಕಾರಿ ಕೆ.ಬಿ.ಶಿವರಾಂ ಮಾತನಾಡಿದರು. ಒಟ್ಟು 22 ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

