4 ಝೂ ಮೇಲ್ದರ್ಜೆಗೆ ಚಿಂತನೆ
ಮೈಸೂರು: ರಾಜ್ಯದ 4 ಮೃಗಾಲಯಗಳನ್ನು ಮೇಲ್ದರ್ಜೆಗೇರಿಸಲು ಚಿಂತಿಸಿರುವ ರಾಜ್ಯ ಮೃಗಾಲಯ ಪ್ರಾಧಿಕಾರವು 10 ಕೋಟಿ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಕೇಂದ್ರ ಮೃಗಾಲಯ ಪ್ರಾಧಿಕಾರ ಈಗಾಗಲೇ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಜೂವಾಲಜಿಕಲ್ ಗಾರ್ಡನ್ ಹೆಸರಿನ ಮೃಗಾಲಯ ನಿರ್ಮಿಸಲು ಮುಂದಾಗಿದೆ. ಇದಕ್ಕಾಗಿ ಈಗಾಗಲೇ 141.6 ಎಕರೆ ಸ್ಥಳ ಗುರುತಿಸಲಾಗಿದೆ. ಈ ಸಂಬಂಧ ಪ್ರಸ್ತುತ 20 ಕೋಟಿ ಅನುದಾನ ಮತ್ತು 2 ಕೋಟಿ ದೇಣಿಗೆ ಸೇರಿದಂತೆ 22 ಕೋಟಿ ಪ್ರಾಧಿಕಾರದಲ್ಲಿದೆ.
ಮುಂದಿನ ಒಂದು ವಾರದೊಳಗೆ ಇ-ಟೆಂಡರ್ ಮೂಲಕ ಕಾಮಗಾರಿ ಆರಂಭವಾಗಲಿದೆ. ಮೊದಲ ಹಂತದಲ್ಲಿ 141 ಎಕರೆಯಲ್ಲಿ ಹಸಿರು ಬೆಳೆಸುವುದು, ರಕ್ಷಣಾ ಗೋಡೆ ನಿರ್ಮಾಣ, ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಬಳಿಕ ಉಳಿಕೆ ಕಾಮಗಾರಿ ಹಂತ ಹಂತವಾಗಿ ಕೈಗೆತ್ತಿಕೊಳ್ಳಲು ಪ್ರಾಧಿಕಾರ ತೀರ್ಮಾನಿಸಿದೆ.
ಅಂತೆಯೇ ಮೃಗಾಲಯ ಪ್ರಾಧಿಕಾರವು ಗದಗ ಜಿಲ್ಲೆ ಬಿಂಕದಕಟ್ಟೆಯಲ್ಲಿನ ಮಕ್ಕಳ ಉದ್ಯಾನವನ- ಕಿರು ಮೃಗಾಲಯ, ದಾವಣಗೆರೆಯ ಇಂದಿರಾ ಪ್ರಿಯಾದರ್ಶಿನಿ ಪ್ರಾಣಿ ಸಂಗ್ರಹಾಲಯ, ಬೆಳಗಾವಿಯ ಕಿತ್ತೂರುರಾಣಿ ಚೆನ್ನಮ್ಮ ನಿಸರ್ಗಧಾಮ ಮತ್ತು ಗುಲ್ಬರ್ಗದ ಮಕ್ಕಳ ಉದ್ಯಾನವನ- ಕಿರು ಮೃಗಾಲಯವನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಿದೆ.
ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ 4 ಕಿರು ಮೃಗಾಲಯದ ಅಭಿವೃದ್ಧಿಗೆ ತಲಾ 1 ಕೋಟಿ ನೀಡುವಂತೆ ರಾಜ್ಯ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಇ. ಮಾರುತಿರಾವ್ ಪವಾರ್ ಮನವಿ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿಗಳು ಈ ಬಾರಿಯ ಬಜೆಟ್ನಲ್ಲಿ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ.
ಈಗಿರುವ ದಾವಣಗೆರೆ ಆನಗೋಡ್ನ ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯದಲ್ಲಿ ವರ್ಷಕ್ಕೆ ಕೇವಲ 5.30 ಲಕ್ಷ ಮಾತ್ರ ಆದಾಯ ಬರುತ್ತಿದೆ. ಆದರೆ, ಆದಾಯಕ್ಕಿಂತ ವೆಚ್ಚವೇ ಹೆಚ್ಚಾಗಿರುವುದರಿಂದ ಪ್ರಾಧಿಕಾರದಿಂದ ಹೆಚ್ಚುವರಿ ಹಣ ನೀಡಲಾಗುತ್ತಿದೆ. ಮತ್ತೊಂದೆಡೆ ಬಳ್ಳಾರಿ ನಗರದಲ್ಲಿಯೂ ಒಂದು ಕಿರು ಮೃಗಾಲಯ ಇದೆ. ಆದರೆ, ಈಗಾಗಲೇ ಹೊಸಪೇಟೆಯ ಕಮಲಾಪುರ ಬಳಿ ದೊಡ್ಡ ಪ್ರಮಾಣದಲ್ಲಿ ನಿರ್ಮಿಸುತ್ತಿರುವ ಮೃಗಾಲಯಕ್ಕೇ ಈ ಕಿರು ಮೃಗಾಲಯವನ್ನು ಸೇರಿಸಲು ಪ್ರಾಧಿಕಾರ ಉದ್ದೇಶಿಸಿತ್ತು. ಆದರೆ, ಬಳ್ಳಾರಿಯ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆ ಈಗಿರುವ ಕಿರು ಮೃಗಾಲಯವನ್ನು ಪ್ರಾಣಿ ಸಂಗ್ರಹಾಲಯ ಮಾಡಲು ಪ್ರಾಧಿಕಾರ ಚಿಂತಿಸಿದೆ.
ಮೈಸೂರು ಮೃಗಾಲಯ ಸೇರಿದಂತೆ ರಾಜ್ಯದ ಇತರ ಮೃಗಾಲಯಗಳ ಅಭಿವೃದ್ಧಿಗೆ 10 ಕೋಟಿ ಬಿಡುಗಡೆ ಮಾಡುವಂತೆ ಮನವಿ ಮಾಡಿರುವ ಪವಾರ್ ಅವರು ಮೃಗಾಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಆಕರ್ಷಣೀಯವಾಗಿ ಮಾಡಲು ಚಿಂತನೆ ನಡೆಸಿದ್ದಾರೆ.
ನೌಕರರ ಕೊರತೆ: ರಾಜ್ಯದ ಎಲ್ಲಾ ಮೃಗಾಲಯಗಳಲ್ಲಿ ನೌಕರರ ಕೊರತೆ ಇದೆ. ಈ ಕೊರತೆ ನೀಗಿಸಲು ಮೃಗಾಲಯವು ಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಕ ಮಾಡಿಕೊಂಡಿದೆ. ಯಾವುದೇ ಇತರೆ ಸೌಲಭ್ಯ ಇಲ್ಲದೆ ಕಡಿಮೆ ವೇತನಕ್ಕೆ ದುಡಿಯುತ್ತಿರುವ ಒಟ್ಟು 457 ಮಂದಿ ನೌಕರರನ್ನು ಕಾಯಂ ಮಾಡುವಂತೆ ಪವಾರ್ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಸಹಮತ ವ್ಯಕ್ತಪಡಿಸಿ, ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದಾರೆ.
-ಡಿ.ಎನ್. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

