ಮೈಸೂರು

ನೀರಾವರಿ ಯೋಜನೆ ವಿಳಂಬಕ್ಕೆ ಆಕ್ರೋಶ

Published On :

ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿ ಕಾಚೇನಹಳ್ಳಿ ಹಾಗೂ ಆಲಗೊಂಡನಹಳ್ಳಿ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಉದಯಪುರದಲ್ಲಿ ರೈತರು ರಸ್ತೆ ತಡೆ ಹಾಗೂ ಧರಣಿ ನಡೆಸಿದರು.
ಕಾಚೇನಹಳ್ಳಿ ಹಾಗೂ ಆಲಗೊಂಡನಹಳ್ಳಿ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ಕಾಚೇನಹಳ್ಳಿ ಏತ ನೀರಾವರಿ ಸಂಘ ಹಾಗೂ ರೈತ ಸಂಘದ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆ ಹಿಡಿದು ರಸ್ತೆಯಲ್ಲಿ ಕುಳಿತು ಕಾಮಗಾರಿ ವಿಳಂಬ ಖಂಡಿಸಿ ಧರಣಿ ನಡೆಸಿ, ನಂತರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡೆ ಅನುಪಮ ಮಹೇಶ್ ಮಾತನಾಡಿ ಮಾಜಿ ಸಚಿವ, ದಿ. ಜಿ.ಪುಟ್ಟಸ್ವಾಮಿಗೌಡರು ಕಳೆದ 20 ವರ್ಷಗಳ ಹಿಂದೆ ದಂಡಿಗನಹಳ್ಳಿ ರೈತರ ಹಿತ ಕಾಪಾಡುವ ದೃಷ್ಠಿಯಿಂದ ಕಾಚೇನಹಳ್ಳಿ ಹಾಗೂ ಆಲಗೊಂಡನಹಳ್ಳಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿ ಹಣ ಬಿಡುಗಡೆಗೊಳಿಸಿದರು.
ನಂತರ ಅಧಿಕಾರಕ್ಕೆ ಬಂದ ಜೆಡಿಎಸ್ ಸರ್ಕಾರ ತಮ್ಮ ಮಾವ ನವರ ಮೇಲಿನ ದ್ವೇಷದಿಂದ ಯೋಜನೆಯನ್ನು ನೆನೆಗುದಿಗೆ ತಳ್ಳಿದ ಕಾರಣ, ದಂಡಿಗನಹಳ್ಳಿ ಹೋಬಳಿ ರೈತರು ಕುಡಿಯಲು ನೀರಿಲ್ಲದೆ ಕೊರಗುವ ಮಟ್ಟಕ್ಕೆ ಬಂದಿದ್ದಾರೆ ಎಂದು  ಆರೋಪಿಸಿದರು. ಹೊಳೆನರಸೀಪುರ ತಾಲೂಕು ಹಳ್ಳಿಮೈಸೂರು ಹೋಬಳಿಯ ಗುಡ್ಡೇನಹಳ್ಳಿ ಏತ ನೀರಾವರಿ ಯೋಜನೆಗೆ ಹಣ ನೀಡದ ಕಾರಣ, ಆ ಕಾಮಗಾರಿಯೂ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿದೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಕಳೆದ 8 ತಿಂಗಳಲ್ಲಿ ಯಾವ ಕಾಮಗಾರಿ ಮಾಡದೆ ಪ್ರಭಾವಿ ರಾಜಕಾರಣಿಗಳ ಕಟ್ಟಿಗೆ ಬಿದ್ದಿರುವ ಅಧಿಕಾರಿಗಳು ಕಾಮಗಾರಿಯನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಅವರು ದೂರಿದರು.
ಕಾಚೇನಹಳ್ಳಿ ಏತ ನೀರಾವರಿ ಹೋರಾಟ ಸಮಿತಿ ಸಂಚಾಲಕ ಯು.ಟಿ ಅಜ್ಜೇಗೌಡ ಮಾತನಾಡಿ, ಕಳೆದ ನಾಲ್ಕೂವರೆ ವರ್ಷದಲ್ಲಿ ರಾಜ್ಯ ಸರ್ಕಾರ ಕಾಮಗಾರಿ ಅಗತ್ಯಕ್ಕೆ ತಕ್ಕಷ್ಟು ಹಣ ಬಿಡುಗಡೆ ಮಾಡಿದ್ದಾರೆ.  
ಆದರೆ, ಜೆಡಿಎಸ್ ನಾಯಕರು ತಮ್ಮ ಪ್ರಭಾವ ಬಳಸಿ ಕಾಮಗಾರಿ ಮಂದಗತಿಯಲ್ಲಿ ನಡೆಯಲು ಕೆಲ ರಾಜಕಾರಣಿಗಳು ಕಾರಣರಾಗಿದ್ದಾರೆ ಎಂದು ಪರೋಕ್ಷವಾಗಿ ಎಚ್.ಡಿ ರೇವಣ್ಣ ಅವರ ಹೆಸರು ಹೇಳದೆ ಟೀಕಿಸಿದರು.
ರೈತ ಸಂಘದ ಜಿಲ್ಲಾ ಸಂಚಾಲಕ ದೊಡ್ಡೇರಿ ಶ್ರೀಕಂಠ ಮಾತನಾಡಿ, ಕಾಚೇನಹಳ್ಳಿ ಏತ ನೀರಾವರಿಗೆ ಕಳೆದ 20 ವರ್ಷಗಳ ಹಿಂದೆ ಅನುಮತಿ ದೊರೆತಿದೆ. ಆದರೆ, ಕಾಮಗಾರಿ ಪೂರ್ಣಗೊಂಡಿಲ್ಲ. ಮಾತ್ರವಲ್ಲ, ಕಳೆದ 10 ತಿಂಗಳ ಹಿಂದೆ ಅವರ ಪಕ್ಷದ ಶಾಸಕ ಶಿವಲಿಂಗೇಗೌಡ ಅವರು ಅರಸೀಕೆರೆಗೆ 60 ಕಿ.ಮೀ ಗೂ ಹೆಚ್ಚು ದೂರಕ್ಕೆ ನೀರು ತೆಗೆದುಕೊಂಡು ಹೋಗುವ ಕಾರ್ಯ ಸಂಪೂರ್ಣವಾಗಿ ಪೂರ್ಣಗೊಳ್ಳುವ ಹಂತ ತಲುಪಿರುವುದನ್ನು ಜನತೆ ಪ್ರತ್ಯಕ್ಷವಾಗಿ ನೋಡುತ್ತಿದ್ದಾರೆ ಎಂದು ದೂರಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಸತ್ತೀಗೌಡ, ಉದ್ಯಮಿ ಅಟ್ಟಾವರ ರಾಮದಾಸ್, ಚಂದ್ರಶೇಖರ್, ಸತೀಶ್, ರಂಗೇಗೌಡ ಪ್ರಸಾದ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.