ಮೈಸೂರು

ವಾಯುಮಾಲಿನ್ಯ ಪತ್ತೆ ಯಂತ್ರ ಸ್ಥಾಪನೆಗೆ ಅಸ್ತು

Published On :

ಮೈಸೂರು:  ಸಾಂಸ್ಕೃತಿಕ ನಗರಿ ಮೈಸೂರು ಹವಾ ನಿಯಂತ್ರಿತ ನಗರ ಅಭಿದಾನವನ್ನೂ ಹೊಂದಿದೆ. ಇದೀಗ ಶುದ್ಧ ಗಾಳಿ ಹೊಂದಿರುವ ನಗರ ಎಂದೂ ಹೆಸರು ಪಡೆದಿದೆ. ಬೆಂಗಳೂರಿನ ನಂತರ ವೇಗವಾಗಿ ಬೆಳೆಯುತ್ತಿರುವ ನಗರವಾದ್ದರಿಂದ ಇನ್ನು ಮುಂದೆ ಇಲ್ಲಿನ ಹಸಿರುಮಯ ವಾತಾವರಣ, ಶುದ್ಧ ಗಾಳಿ ಕಲುಷಿತವಾಗದಂತೆ ಮುನ್ನೆಚ್ಚರಿಕೆ ವಹಿಸಲು ಮುಂದಾಗಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಗರದ ಕೇಂದ್ರ ಭಾಗದಲ್ಲಿ ನಿರಂತರ ಪರಿವೇಕ್ಷಿತ ಗಾಳಿಯ ಗುಣಮಟ್ಟ ಮಾಪನ ಯಂತ್ರ (ಸಿಎಎಕ್ಯೂಎಂಎಸ್) ಸ್ಥಾಪಿಸಲು ಸಿದ್ಧತೆ ನಡೆಸಿದೆ.
ರಾಷ್ಟ್ರೀಯ ಪರಿವೀಕ್ಷಣೆ ಗಾಳಿ ಗುಣಮಟ್ಟ ಮಾಪನ ಕಾರ್ಯಕ್ರಮದಡಿ ರಾಜ್ಯದ ಮೆಟ್ರೋ ನಗರಗಳಾದ ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಬೆಳಗಾವಿಯಲ್ಲಿ ಈ ಯಂತ್ರವನ್ನು ಸ್ಥಾಪಿಸಲು ಯೋಜಿಸಲಾಗಿತ್ತು. ಅದರಂತೆ ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಅನುಷ್ಠಾನಗೊಳಿಸಿದ್ದು, ಸದ್ಯ ಮೈಸೂರಿನಲ್ಲಿ ಅನುಷ್ಠಾನಕ್ಕೆ ತರಲು ಅನುದಾನಕ್ಕಾಗಿ ಕೇಂದ್ರ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಬಾರಿಯ 2013-14ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಅನುದಾನ ಲಭಿಸುವ ಸಾಧ್ಯತೆ ಇದೆ. ಅಲ್ಲದೇ ರಾಜ್ಯ ಮಂಡಳಿ ಶೇ.50 ರಷ್ಟು ಹಣವನ್ನು ಈಗಾಗಲೆ ಒದಗಿಸಿದೆ.
ಏನಿದು ಸಿಎಎಕ್ಯೂಎಂಎಸ್?:  ನಿರಂತರ ಪರಿವೀಕ್ಷಣೆ ಗಾಳಿ ಗುಣಮಟ್ಟ ಮಾಪನ ಯಂತ್ರ (ಕಂಟಿನಿಯಸ್ ಆಂಬಿಂಟ್ ಏರ್ ಕ್ವಾಲಿಟಿ ಮಾನಿಟರಿಂಗ್ ಸಿಸ್ಟಂ- ಸಿಎಎಕ್ಯೂಎಂಎಸ್) ಗಾಳಿಯಲ್ಲಿ ಕಂಡುಬರುವ ಉಸಿರಾಡಲು ಯೋಗ್ಯವಾದ ತೇಲಾಡುವ ಕಣ, ರಂಜಕ, ಸಾರಜನಕದ ಪ್ರಮಾಣ ತಿಳಿಸುತ್ತದೆ. ನಗರದ ಹೆಚ್ಚು ಜನದಟ್ಟಣೆ ಇರುವ ಕೇಂದ್ರದಲ್ಲಿ ಈ ಯಂತ್ರ ಅಳವಡಿಸಿದರೆ ವಾಯು ಮಾಲಿನ್ಯ ಎಷ್ಟಿದೆ ಎಂಬ ನಿಖರ ಮಾಹಿತಿಯನ್ನು ಎಲ್‌ಇಡಿಯಲ್ಲಿ ಪ್ರದರ್ಶಿಸುತ್ತದೆ. ಈ ಹಿಂದೆ ಇದ್ದ ಯಂತ್ರದಿಂದ ಗಾಳಿಯ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಿ ಫಲಿತಾಂಶ ಪಡೆಯಲಾಗುತ್ತಿತ್ತು. ಈ ಪ್ರಕ್ರಿಯೆಯಿಂದ ಹೆಚ್ಚಾಗಿ ಸಮಯ ಹಿಡಿಯುತ್ತಿತ್ತು ಮತ್ತು ಸಾರ್ವಜನಿಕರಿಗೆ ಮಾಹಿತಿ ಇರುತ್ತಿರಲಿಲ್ಲ.
ಕೆ.ಆರ್. ವೃತ್ತದ ಬಳಿ ಸ್ಥಾಪನೆ:  ಈ ಹಿಂದೆ ಮೈಸೂರಿನ ಕೆ.ಆರ್. ವೃತ್ತ ಹಾಗೂ ಮೇಟಗಳ್ಳಿಯಲ್ಲಿರುವ ಮಂಡಳಿಯ ಪ್ರಾದೇಶಿಕ ಕಚೇರಿಯಲ್ಲಿ ಗಾಳಿ ಗುಣಮಟ್ಟ ಮಾಪನ ಯಂತ್ರ ಅಳವಡಿಸಲಾಗಿತ್ತು. ಈ ಯಂತ್ರಕ್ಕೆ ಪರ್ಯಾಯವಾಗಿ ರಾಜ್ಯ ಮಂಡಳಿ ಸಿಎಎಕ್ಯೂಎಂಎಸ್ ಸ್ಥಾಪಿಸಲಿದೆ. ಮೈಸೂರಿನ ಕೇಂದ್ರ ಭಾಗವಾದ ಕೆ.ಆರ್. ವೃತ್ತದಲ್ಲಿ ಹೆಚ್ಚು ಜನದಟ್ಟಣೆ ಇರುವುದರಿಂದ ಇಲ್ಲಿಯೇ ಸ್ಥಾಪಿಸಲು ಚಿಂತಿಸಿದೆ. ಈ ಯಂತ್ರ ಸ್ಥಾಪನೆಗೆ ಅಗತ್ಯವಾದ 10್ಗ10 ಅಡಿ ಜಾಗ ನೀಡುವಂತೆ ಎಂಡಿಎ ಮತ್ತು ಪಾಲಿಕೆಗೆ ಪತ್ರವನ್ನೂ ಬರೆದಿದ್ದು, ಅಲ್ಲಿಂದಲೂ ಸಕರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರ ಮಂಡಳಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಡಾ.ಪಿ. ನಿರಂಜನ್ ಕನ್ನಡಪ್ರಭಕ್ಕೆ ತಿಳಿಸಿದರು.
ವಾಹನ ಸಂಖ್ಯೆ ಎಷ್ಟಿದೆ?:  ಮೈಸೂರಿನಲ್ಲಿ ನಿರೀಕ್ಷೆಯಂತೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈಗಿನ ಮಾಹಿತಿ ಪ್ರಕಾರ ಒಟ್ಟು 3,50,169 ವಾಹನಗಳು ನೋಂದಾವಣೆಯಾಗಿವೆ. ಅದರಲ್ಲಿ ದ್ವಿಚಕ್ರ ವಾಹನ- 2,75,952, ಕಾರು- 41,856, ಇನ್‌ವ್ಯಾಲಿಡ್ ಕ್ಯಾರೇಜ್- 13, ಜೀಪ್- 597, ಆಟೋರಿಕ್ಷಾ- 10,477, ಮೋಟಾರ್ ಕ್ಯಾಬ್- 1786, ಓಮ್ನಿ ಬಸ್- 1411, ಸ್ಟೇಷನ್ ವ್ಯಾಗನ್- 3, ಕೆಎಸ್‌ಆರ್‌ಟಿಸಿ ಬಸ್ಸು- 3361, ಖಾಸಗಿ ಬಸ್ಸು- 86, ಸರಕು ಸಾಗಣೆ ವಾಹನ- 5967, ಇತರೆ 8660 ವಾಹನಗಳು ಇವೆ.
ಇದರಲ್ಲಿ ಹಲವು ವಾಹನಗಳು ಸುಸ್ಥಿತಿಯಲ್ಲಿಲ್ಲದೆ ಹೊರ ಹಾಕುವ ಹೊಗೆಯು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಆಗಾಗ ವಾಹನಗಳನ್ನು ತಪಾಸಣೆ ಮಾಡಲಾಗುತ್ತದೆ. ಅದರಂತೆ ಕಳೆದ ವರ್ಷ 530 ವಾಹನಗಳನ್ನು ತಪಾಸಣೆಗೆ ಒಳಪಡಿಸಿ, 96 ವಾಹನಗಳ ಮೇಲೆ ಕೇಸು ದಾಖಲಿಸಿ 77,900 ದಂಡ ವಿಧಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ 4 ಸ್ಟ್ರೋಕ್ ಎಂಜಿನ್ ವಾಹನಗಳನ್ನು ಬಳಸುತ್ತಿರುವುದರಿಂದ ಅಷ್ಟಾಗಿ ವಾಯು ಮಾಲಿನ್ಯ ಉಂಟಾಗುತ್ತಿಲ್ಲ. ಜತೆಗೆ ಪರಿಸರ ಸಂರಕ್ಷಣೆಗೆ ಆರ್‌ಟಿಒಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ. ಅರುಣ್‌ಕುಮಾರ್ ಸಿಂಗ್ ತಿಳಿಸಿದರು.
ಕಾರ್ಖಾನೆಗಳ ಪಾತ್ರ:  ಮೈಸೂರಿನಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ಕಾರ್ಖಾನೆಗಳಿದ್ದು, ಅವುಗಳಲ್ಲಿ ಹಸಿರು, ಕಿತ್ತಳೆ ಹಾಗೂ ಕೆಂಪು ವಲಯ ಎಂದು ಗುರುತಿಸಲಾಗಿದೆ. ಹಸಿರು ವಲಯದ ಕಾರ್ಖಾನೆಗಳಿಂದ ಯಾವುದೇ ಮಾಲಿನ್ಯವಿಲ್ಲ. ಕಿತ್ತಳೆ ಮತ್ತು ಕೆಂಪು ವಲಯದ ಕಾರ್ಖಾನೆಗಳಿಂದ ವಾಯು ಮಾಲಿನ್ಯ ಉಂಟಾಗಲಿದ್ದು, ಎಲ್ಲಾ ಕಾರ್ಖಾನೆಗಳಲ್ಲಿ ಬ್ಯಾಕ್ ಫಿಲ್ಟರ್ ಅಳವಡಿಸಬೇಕು. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗದರ್ಶನ ನೀಡಿದರೆ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಮೈಸೂರು ಕೈಗಾರಿಕೆಗಳ ಸಂಘ ಸಹಕರಿಸಲಿದೆ ಎಂದು ಪ್ರಧಾನ ಕಾರ್ಯದರ್ಶಿ ಎಸ್. ಸುರೇಶ್‌ಕುಮಾರ್ ಜೈನ್ ತಿಳಿಸಿದ್ದಾರೆ.
- ಜೆ.ಮಹದೇವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.