ಮೈಸೂರು

ರಸ್ತೆ ಸಂಚಾರಕ್ಕೆ ನಿರ್ಬಂಧ: ಗ್ರಾಮಸ್ಥರ ಪ್ರತಿಭಟನೆ

Published On :

ಕ.ಪ್ರ.ವಾರ್ತೆ ಕೆ.ಆರ್. ನಗರ ಜು. 24
ದಶಕಗಳಿಂದ ನಾಲ್ಕಾರು ಗ್ರಾಮಗಳ ರೈತರು ಮತ್ತು ಸಾರ್ವಜನಿಕರು ಸಂಚರಿಸುತ್ತಿದ್ದ ರೇಲ್ವೆ ಮೇಲು ಸೇತುವೆಯ ಕೆಳಗೆ ಇಲಾಖೆಯವರು ಬಂದ್ ಮಾಡುವುದನ್ನು ವಿರೋಧಿಸಿ ಲಾಳನಹಳ್ಳಿ ಗ್ರಾಮಸ್ಥರು ಬುಧವಾರ ಕಾಮಗಾರಿ ತಡೆದು ಪ್ರತಿಭಟಿಸಿದರು.
ಗ್ರಾಮದ ಸಮೀಪದಲ್ಲಿ ರೇಲ್ವೆ ಹಳಿ ಹಾದುಹೋಗಿದ್ದು, ಇಲಾಖೆಯವರು ಏಕಾಏಕಿ ರಸ್ತೆಗೆ ಅಡ್ಡಲಾಗಿ ಕಂಬಿಗಳನ್ನು ನೆಟ್ಟು ಸಂಚಾರ ಬಂದ್ ಮಾಡಲು  ಮುಂದಾಗಿದ್ದರಿಂದ ಆಕ್ರೋಶಗೊಂಡ ಸಾರ್ವಜನಿಕರು ಪ್ರತಿಭಟನೆ ನಡೆಸಿದರಲ್ಲದೆ, ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆಯನ್ನು ಬಂದ್ ಮಾಡುವುದರಿಂದ ರೇಲ್ವೆ ಹಳಿಯಿಂದ ಆಚೆ ಇರುವ ನೂರಾರು ಎಕರೆ ಜಮೀನಿಗಳಿಗೆ ಹೋಗಲು ತೊಂದರೆಯಾಗುತ್ತದೆ. ಆದ್ದರಿಂದ ಯಾವುದೆ ಕಾರಣಕ್ಕೂ ರಸ್ತೆಗೆ ಅಡ್ಡಲಾಗಿ ಕಂಬಿಗಳನ್ನು ನೆಡಲು ಬಿಡುವುದಿಲ್ಲ ಎಂದು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ, ಕಾಮಗಾರಿ ತಡೆಯಲು ಮುಂದಾದಾಗ ಮಾತಿನ ಚಕಮುಕಿ ನಡೆಯಿತು.
ಆದರೆ ರೇಲ್ವೆ ಇಲಾಖೆಯ ನೌಕರರು ಮತ್ತು ಅಧಿಕಾರಿಗಳು ಸಾರ್ವಜನಿಕರ ಪ್ರತಿಭಟನೆಗೆ ಜಗ್ಗದೆ ನಿಮ್ಮ ದೂರನ್ನು ಹಿರಿಯ ಅಧಿಕಾರಿಗಳಿಗೆ ನೀಡುವಂತೆ ತಿಳಿಸಿ, ತಮ್ಮ ಕೆಲಸವನ್ನು ಮುಂದುವರಿಸಿದಾಗ ರೊಚ್ಚಿಗೆದ್ದ ಪ್ರತಿಭಟನಾಕಾರರು ಒಂದು ಹಂತದಲ್ಲಿ ಕಾಮಗಾರಿಗೆ ಬಳಸುತ್ತಿದ್ದ ಕಂಬಿಗಳನ್ನು ಕೀಳಲು ಪ್ರಯತ್ನಿಸಿದರು.
ಸಾರ್ವಜನಿಕರ ತೀವ್ರ ವಿರೋಧಕ್ಕೆ ಬೆದರಿದ ಕೆಲಸಗಾರರು ಒಂದು ರಸ್ತೆಯನ್ನು ಬಂದ್ ಮಾಡಿ ಮತ್ತೊಂದು ರಸ್ತೆಯನ್ನು ಬಿಟ್ಟು ತೆರಳಿದರು. ನಂತರ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿಯ ಮೂಲಕ ಸಮಸ್ಯೆ ಬಗ್ಗೆ ಮುಖಂಡರು ತಿಳಿಸಿದಾಗ, ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಂದ್ರಕಾಂತ, ಸಹಾಯಕ ಎಂಜಿನಿಯರ್ ನಾಗರಾಜು ರೈತರೊಂದಿಗೆ ಮಾತನಾಡಿದರು.
ಎರಡು ರಸ್ತೆಗಳು ನೀರಾವರಿ ಇಲಾಖೆಗೆ ಸೇರಿದ್ದು, ಸಾರ್ವಜನಿಕರು ಓಡಾಡಲು ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಈಗಾಗಲೇ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಹತ್ತಾರು ವರ್ಷದಿಂದ ಬಳಸುತ್ತಿದ್ದ ರಸ್ತೆಗಳನ್ನು ಇದಕ್ಕಿದಂತೆ ಇಲಾಖೆಯವರು ಬಂದ್ ಮಾಡಲು ಮುಂದಾಗಿರುವುದರಿಂದ ಹಿರಿಯ ಅಧಿಕಾರಿಗಳಿಗೆ ದೂರು ನೀಡುವಂತೆ ಸಲಹೆ ನೀಡಿದರು.
ಅಧಿಕಾರಿಗಳಿಗೆ ತಮ್ಮ ಸಮಸ್ಯೆ ಹೇಳಿಕೊಂಡ ಗ್ರಾಮಸ್ಥರು ಈಗಾಗಲೆ ಕೃಷಿ ಚಟುವಟಿಕೆ ಪ್ರಾರಂಭವಾಗಿದ್ದು, ರೈತರು ತಮ್ಮ ಜಮೀನುಗಳಿಗೆ ಹೋಗಲು ತೊಂದರೆಯಾಗಿದೆ. ಆದ್ದರಿಂದ ಕೂಡಲೇ ಚುನಾಯಿತ ಜನಪ್ರತಿನಿಧಿಗಳು ಮತ್ತು ತಾಲೂಕು ಆಡಳಿತ ರಸ್ತೆ ಸಂಚಾರ ಮುಕ್ತಗೊಳಿಸಿ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದರು. ಹೊಸಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಲ್.ಪಿ. ರವಿಕುಮಾರ್, ಬಿಜೆಪಿ ತಾಲೂಕು ಕಾರ್ಯದರ್ಶಿ ಎಲ್.ಎಸ್. ಮಹೇಶ್, ಕಾಂಗ್ರೆಸ್ ಮುಖಂಡ ಮಾರ್ಕಂಡಯ್ಯ, ಉಮೇಶ್, ಪುಟ್ಟಣ್ಣಯ್ಯ, ಗಿರೀಶ್, ನಾಗರಾಜು, ಮೂರ್ತಿ ಹಾಗೂ ನೂರಾರು ರೈತರು ಪ್ರತಿಭಟನೆ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.