ಮೈಸೂರು

ವೃತ್ತಿಪರ ಕೋರ್ಸ್ ಕಲಿತರೂ ಕೆಲ್ಸ ಸಿಗ್ತಿಲ್ಲ

Published On :

ಕ.ಪ್ರ. ವಾರ್ತೆ ಮೈಸೂರು, ಜು.24
ವಿದ್ಯಾರ್ಥಿಗಳ ಬುದ್ಧಿವಂತಿಕೆಗೆ ಪ್ರಚೋದನೆ ಮತ್ತು ಪ್ರೋತ್ಸಾಹ ನೀಡುವುದು ಅಗತ್ಯ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆಯು ಮೈಸೂರು ವಲಯ ಸರ್ಕಾರಿ ಕಾಲೇಜುಗಳ ಪದವೀಧರರಿಗಾಗಿ ಬುಧವಾರ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿ, ಎಲ್ಲಾ ಜಾತಿ, ವರ್ಗದಲ್ಲೂ ಬುದ್ಧಿವಂತರು ಇದ್ದಾರೆ. ಅವರಿಗೆ ಸರ್ಕಾರವು ಪ್ರಚೋದನೆ, ಪ್ರೋತ್ಸಾಹ ನೀಡಬೇಕು ಎಂದರು.
ವೃತ್ತಿಪರ ಮತ್ತು ತಾಂತ್ರಿಕ ಕೋರ್ಸ್ ಓದಿದವರಿಗೆ ಶೇ. 25 ಮಾತ್ರ ಉದ್ಯೋಗ ಸಿಗುತ್ತಿದೆ. ಕೌಶಲ ಕೊರತೆಯಿಂದ ಉಳಿದವರಿಗೆ ಉದ್ಯೋಗ ಸಿಗುತ್ತಿಲ್ಲ. ಚೀನಾ ದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದರೂ ಉದ್ಯೋಗ ಕೊರತೆ ಇಲ್ಲ. ನಮ್ಮಲ್ಲಿ ಹಿಂದೆ ಒಬ್ಬರೇ ದುಡಿದು ಇಡೀ ಕುಟುಂಬ ಸಾಕುತ್ತಿದ್ದರು. ಈಗ ಕಾಲ ಬದಲಾಗಿದ್ದು, ಎಲ್ಲರೂ ದುಡಿಯಬೇಕಿದೆ ಎಂದು ತಿಳಿಸಿದರು.
ಈಗ ಹಳ್ಳಿಗಳಲ್ಲಿ ವ್ಯವಸಾಯ ಮಾಡುವವರೇ ಇಲ್ಲ. ಕಂಪ್ಯೂಟರ್ ಗುಂಗಿನಲ್ಲಿ ಕೆಲಸ ಹುಡುಕಿಕೊಂಡು ನಗರಕ್ಕೆ ಬರುತ್ತಿದ್ದಾರೆ. ಕೆಲಸ ಸಿಗದಿದ್ದಾಗ ಕಳ್ಳತನ ಇನ್ನಿತರ ಅಪರಾಧ ಕೃತ್ಯಕ್ಕೆ ಇಳಿಯುತ್ತಿದ್ದಾರೆ. ವಿದೇಶಗಳಲ್ಲಿ ತಮ್ಮ ಯೋಗ್ಯತೆಗೆ ತಕ್ಕ ಕೆಲಸ ಮಾಡುತ್ತಾರೆ. ಆದರೆ, ನಮ್ಮಲ್ಲಿ ಯೋಗ್ಯತೆ ಇಲ್ಲದಿದ್ದರೂ ಅದೇ ಕೆಲಸ ಬೇಕು ಎನ್ನುತ್ತಾರೆ. ವ್ಯಕ್ತಿ ತನಗೆ ತಿಳಿದ ಕೆಲಸ ಮಾಡಬೇಕು. ಗೊತ್ತಿರುವ ಕೆಲಸವನ್ನು 8 ರಿಂದ 10 ಗಂಟೆ ಮಾಡಿದರೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇರುವುದಿಲ್ಲ ಎಂದರು.
ರೋಬೋಟ್ ತಂದು ಹೊಲ ಉಳುವುದಕ್ಕೆ ಸಾಧ್ಯವಿಲ್ಲ. ಆ ಕೆಲಸವನ್ನು ಮಾನವನೆ ಮಾಡಬೇಕು. ಕೈಗಾರಿಕೆಗಳಲ್ಲಿ ಉತ್ಪಾದನೆಗೆ ಮಾನವ ಸಂಪನ್ಮೂಲ ಅಗತ್ಯ. ನಮ್ಮ ದೇಶದಲ್ಲಿ ಮಾತ್ರ ಬುದ್ಧಿವಂತರು ಮತ್ತು ಸಂಸ್ಕೃತಿಯುಳ್ಳವರು ಇದ್ದಾರೆ ಎಂದು ಹೇಳಿದರು. ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಸುಧಾಕರ ಎಸ್. ಶೆಟ್ಟಿ ಮಾತನಾಡಿ, ಉದ್ಯೋಗ ಬಯಸುವ ವಿದ್ಯಾರ್ಥಿಗಳು ತಮ್ಮ ಸಂಸ್ಥೆಗೆ ಬಯೋ- ಡೆಟಾ ನೀಡಿದರೆ ಎಲ್ಲಾ ಕಾರ್ಖಾನೆಗಳಿಗೂ ಕಳುಹಿಸಲಾಗುವುದು. ಅಗತ್ಯ ಇರುವವರು ಕಂಪನಿಗಳು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು.
ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಟಿ.ಎನ್. ಪ್ರಭಾಕರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಶಿಕ್ಷಣ ಇಲಾಖೆ ವಿಶೇಷಾಧಿಕಾರಿ ಡಾ. ಮೋನಿಕಾ ಘೋಷ್, ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು ಪ್ರಾಂಶುಪಾಲ ಪ್ರೊ. ಪುರುಷೋತ್ತಮ್, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಪ್ರಾಂಶುಪಾಲೆ ಜಿ.ಎಂ. ಸುಶೀಲಾ, ಉದ್ಯೋಗ ಮೇಳ ಸಂಯೋಜಕ ಸಂದೀಪ್‌ರಾಜೇ ಅರಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.