ಅಧಿಕಾರಿಗಳ ಚೆಲ್ಲಾಟ; ಎಂಜಿನಿಯರ್‌ಗಳಿಗೆ ಸಂಕಟ!
-ಅಂಶಿ ಪ್ರಸನ್ನಕುಮಾರ್
ಕ.ಪ್ರ.ವಾರ್ತೆ ಮೈಸೂರು ಜು. 28
ಇದೊಂದು ರೀತಿಯಲ್ಲಿ ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟವಿದ್ದಂತೆ.
ಒಂದೇ ಉದ್ಯೋಗ ನೇಮಕಾತಿ ಪ್ರಕಟಣೆಯಡಿ ನೇಮಕಗೊಂಡ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಗುತ್ತಿಗೆ ಸಹಾಯಕ ಎಂಜಿನಿಯರು (ಎಇ)ಗಳಿಗೆ 12 ಸಾವಿರ. ಆದರೆ, ಬೆಸ್ಕಾಂ ಗುತ್ತಿಗೆ ಸಹಾಯಕ ಎಂಜಿನಿಯರುಗಳಿಗೆ 30 ಸಾವಿರ ವೇತನ.
ಇದು ಕೆಪಿಟಿಸಿಎಲ್‌ನ ಕೆಲವು ಅಧಿಕಾರಿಗಳ ದ್ವಂದ್ವ ನಿರ್ಧಾರಗಳು. ಉನ್ನತ ಸ್ಥಾನದಲ್ಲಿರುವ ಕೆಲವು ಅಧಿಕಾರಿಗಳ ಇಂಥ ನಿರ್ಧಾರದಿಂದ ಕೆಪಿಟಿಸಿಎಲ್‌ನ ಗುತ್ತಿಗೆ ಎಂಜಿನಿಯರ್‌ಗಳು ತೊಂದರೆಗೀಡಾಗಿದ್ದಾರೆ.
'ಸಮಾನ ಕೆಲಸಕ್ಕೆ ಸಮಾನ ವೇತನ' ಇದು ಸರ್ಕಾರದ ನೀತಿ. ಆದರೆ, ಒಂದೇ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಎಇಗಳು ಹಾಗೂ ಕಿರಿಯ ಎಂಜಿನಿಯರು(ಜೆಇ)ಗಳಿಗೆ ಕ್ರಮವಾಗಿ 12 ಸಾವಿರ ಹಾಗೂ 8 ಸಾವಿರ ವೇತನವಾದರೆ, ಕಾಯಂ ಎಇ ಹಾಗೂ ಜೆಇಗಳಿಗೆ ಕ್ರಮವಾಗಿ 40 ಸಾವಿರ, 25 ಸಾವಿರ ವೇತನ ನೀಡಲಾಗುತ್ತಿದ್ದು, ಸರ್ಕಾರವೇ ತಾರತಮ್ಯ ನೀತಿ ಅನುಸರಿಸುತ್ತಿದೆ.
ನಿಯಮದಿಂದ ನೇಮಕಾತಿ: 2007ರ ಸೆಪ್ಟೆಂಬರ್‌ನಲ್ಲಿ ಇಂಧನ ಇಲಾಖೆ ಎಇ ಮತ್ತು ಜೆಇಗಳನ್ನು ಕಾಯಂ ಆಗಿ ನೇಮಿಸಿಕೊಳ್ಳಲು ಅನುಮತಿ ನೀಡಿತ್ತು. ಆದರೆ, ಕೆಪಿಟಿಸಿಎಲ್ ತನ್ನ ಉದ್ಯೋಗ ನೇಮಕಾತಿ ಪ್ರಕಟಣೆಯಲ್ಲಿ, ಮೀಸಲಾತಿ, ಲಿಖಿತ ಪರೀಕ್ಷೆ, ಸಂದರ್ಶನ ಹಾಗೂ ಸಂವಿಧಾನಾತ್ಮಕವಾಗಿ ಎಲ್ಲ ನಿಯಮಗಳನ್ನು ಪಾಲಿಸಿಯೂ ಕಾಯಂ ನೇಮಕಾತಿ ಬದಲು ಗುತ್ತಿಗೆ ಆಧಾರದ ಮೇಲೆ ಈ ಎಂಜಿನಿಯರುಗಳನ್ನು ನೇಮಿಸಿಕೊಂಡಿದೆ. ಕೆಪಿಟಿಸಿಎಲ್‌ನಲ್ಲಿ ಈ ಹಿಂದೆ ಮೂರು ತಂಡಗಳಲ್ಲಿ ನೇಮಕಗೊಂಡ ಗುತ್ತಿಗೆ ಎಇ ಹಾಗೂ ಜೆಇಗಳ ಜೇಷ್ಠತೆ ಕಾಪಾಡುವುದು ಅವರ ಉದ್ದೇಶವಾಗಿತ್ತು.
ಈ ಹಿಂದೆ ನವೆಂಬರ್- 2003, ಆಗಸ್ಟ್ 2006 ಮತ್ತು ಡಿಸೆಂಬರ್- 2006ರಲ್ಲಿ ಒಟ್ಟು 1,462 ಗುತ್ತಿಗೆ ಎಇಗಳು ಮತ್ತು 1,017 ಗುತ್ತಿಗೆ ಜೆಇಗಳನ್ನು ಅದೇ ರೀತಿಯಲ್ಲಿಯೇ ನೇಮಿಸಿಕೊಳ್ಳಲಾಗಿತ್ತು. ಆದರೆ, ಅವರ ಸೇವೆಯನ್ನು ವಿವಿಧ ಹಂತಗಳಲ್ಲಿ ನಡೆದ ಆಡಳಿತ ಮಂಡಳಿಯ ಸಭೆಗಳಲ್ಲಿ ಸೇವಾಬದ್ಧತೆ ಮತ್ತು ಸೇವಾ ನಿಷ್ಠತೆ ಪರಿಗಣಿಸಿ ಕಾಯಂಗೊಳಿಸಲಾಗಿದೆ.
ಚೆಲ್ಲಾಟ: 2007ರಲ್ಲಿ ನೇಮಕಗೊಂಡ ತಂಡವನ್ನು ಕಾಯಂಗೊಳಿಸಲು ಸುಪ್ರೀಂ ಕೋರ್ಟ್ ನೀಡಿರುವ ಉಮಾದೇವಿ ಪ್ರಕರಣದ ತೀರ್ಪಿಗೆ ವಿರುದ್ಧವೆನ್ನಲಾಗುತ್ತಿದೆ.
ಉಮಾದೇವಿ ಪ್ರಕರಣದಲ್ಲಿ ದಿನಗೂಲಿ, ಗುತ್ತಿಗೆ ನೌಕರರು ಯಾರು ನಿಗದಿತ ವಿದ್ಯಾರ್ಹತೆ, ಮಂಜೂರಾದ ಖಾಲಿ ಹುದ್ದೆ, ಮೀಸಲಾತಿ ಪಾಲಿಸದ ಹಾಗೂ ಸಂವಿಧಾನಾತ್ಮಕವಾಗಿ ನೇಮಕ ಪ್ರಕ್ರಿಯೆಗೊಳಪಡದವನ್ನು ಕಾಯಂಗೊಳಿಸಲು ಬರುವುದಿಲ್ಲ ಎಂದು ಐವರು ನ್ಯಾಯಾಧೀಶರನ್ನೊಳಗೊಂಡ ಸುಪ್ರೀಂ ಕೋರ್ಟ್ ತೀರ್ಪಿತ್ತಿದೆ. ಎಲ್ಲ ಅಧಿಕಾರಿಗಳು, ನಿಯಮಾನುಸಾರ ಮೀಸಲಾತಿ, ವಿದ್ಯಾರ್ಹತೆ, ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂವಿಧಾನಾತ್ಮಕವಾಗಿ ನೇಮಕವಾಗಿದ್ದರೂ ಉಮಾದೇವಿ ಪ್ರಕರಣದಡಿ ಬರುವುದರಿಂದ ಕಾಯಂ ಮಾಡಲು ಸಾಧ್ಯವಿಲ್ಲವೆನ್ನುತ್ತಿದೆ ಕೆಪಿಟಿಸಿಎಲ್.
ಕೋರ್ಟ್ ಮೊರೆ: 2007ರ ತಂಡದ ಹಲವು ಎಂಜಿನಿಯರ್‌ಗಳು ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯ ಕಾಯಂಗೊಳಿಸಲು ಮೂರು ತೀರ್ಪು ನೀಡಿದ್ದರೂ ಯಾವುದನ್ನೂ ಅನುಷ್ಠಾನಗೊಳಿಸಿಲ್ಲ. ಸುಖಾಸುಮ್ಮನೆ ಕಾಲಹರಣ ಮಾಡುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ಈ ವಿಷಯ ಗೊತ್ತು. ಈ ತಂಡವನ್ನು ಕಾಯಂಗೊಳಿಸದಿರಲು ಕಾರಣ ಕೇಳಿ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರನ್ನು ಪ್ರಶ್ನಿಸಿದ್ದಾರೆ.
ಈ ಇಬ್ಬರೂ 'ಯಾವುದೇ ಸಮಸ್ಯೆ ಇಲ್ಲ' ಎಂದೇ ಉತ್ತರಿಸಿದ್ದಾರೆ. ಆದರೂ ಸಿಎಂ ಕಚೇರಿಗೆ ಸಂಬಂಧಪಟ್ಟ ಕಡತ ಕಳುಹಿಸಲು ಮೀನಮೇಷ ಎಣಿಸಲಾಗುತ್ತಿದೆ. ಈ ನಾಲ್ಕನೇ ತಂಡ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು ಎಂಬ ಏಕೈಕ ಕಾರಣಕ್ಕಾಗಿ ಉನ್ನತ ಅಧಿಕಾರಿಗಳು ದ್ವೇಷ ಸಾಧಿಸುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಸಮಸ್ಯೆ ಬಗೆಹರಿಸುವರೇ ?
ಸಿಎಂ ಪ್ರಧಾನ ಕಾರ್ಯದರ್ಶಿ ಈ ಹಿಂದೆ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದವರು. ಪ್ರಸ್ತುತ ಅಡ್ವೋಕೇಟ್ ಜನರಲ್ ಆಗಿರುವ ಪ್ರೊ. ರವಿವರ್ಮಕುಮಾರ್ ಅವರೂ ಈ ಹಿಂದೆ ಈ ತಂಡದ ಗುತ್ತಿಗೆ ಎಂಜಿನಿಯರುಗಳ ಪರವಾಗಿ ಹೈಕೋರ್ಟ್‌ನಲ್ಲಿ ವಾದಿಸಿದ್ದು, ಇಬ್ಬರಿಗೂ ಸಮಸ್ಯೆ ಅರಿವು ಸ್ಪಷ್ಟವಾಗಿದೆ. ಇಂಧನ ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಸು ಮಾಡಿದರೆ ಈ ಸಮಸ್ಯೆ ಒಂದೇ ದಿನದಲ್ಲಿ ಬಗೆಹರಿದು, 113 ಗುತ್ತಿಗೆ ಎಇ ಹಾಗೂ 225 ಜೆಇಗಳ ಬಾಳಲ್ಲಿ ಬೆಳಕು ಮೂಡಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

