ತೂಕದಲ್ಲಿ ಮೋಸ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ
ಕ.ಪ್ರ.ವಾರ್ತೆ ಶಿರಾ ಜು. 28
ರೈತರಿಗೆ ಅನುಕೂಲವಾಗಲೆಂದು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನಫೆಡ್ ಕೊಬ್ಬರಿ ಖರೀದಿ ಕೇಂದ್ರವನ್ನು ಆರಂಭಿಸಲಾಗಿದ್ದು ಒಂದು ವೇಳೆ ಅವರು ಲಂಚ ಪಡೆಯುವುದಾಗಲಿ, ತೂಕದಲ್ಲಿ ಮೋಸ ಮಾಡುವುದಾಗಲಿ, ಯಾವುದೇ ರೀತಿಯಲ್ಲಿ ತೊಂದರೆ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಸಚಿವರಿಗೆ ಹಾಗೂ ನಫೆಡ್ ಉನ್ನತ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ಶಶಿಧರ ಗೌಡ ತಿಳಿಸಿದರು.
ಅವರು ಪಟ್ಟಣ ಎಪಿಎಂಸಿ ಪ್ರಾಂಗಣದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಉತ್ತಮ ಗುಣಮಟ್ಟದ ಕೊಬ್ಬರಿಯನ್ನು ರೈತರು ನಫೆಡ್‌ನಲ್ಲಿ ಮಾರಿ ಹೆಚ್ಚಿನ ಲಾಭ ಪಡೆಯುವ ಸಲುವಾಗಿ ಸಚಿವರ ಸಹಕಾರದೊಂದಿಗೆ ನಫೆಡ್ ಕೇಂದ್ರವನ್ನು ತೆರೆಯಲಾಗಿದ್ದು ನಿಗದಿಪಡಿಸಿರುವ 75 ಎಂಎಂ ಅಳತೆಯ ಕೊಬ್ಬರಿಯನ್ನು ನಫೆಡ್‌ನವರು 5500 ರು. ಹಾಗೂ ಸರ್ಕಾರದ ಸಹಾಯ ಧನ ಸೇರಿ ಒಟ್ಟು 6500 ರು.ಗೆ ಖರೀದಿಸುತ್ತಿದ್ದಾರೆ. ಅಲ್ಪ ಸ್ವಲ್ಪ ವ್ಯತ್ಯಾಸವಿದ್ದರೆ ಕೊಳ್ಳುವಂತೆ ಸಚಿವರೇ ಸೂಚಿಸಿದ್ದಾರೆ. ಆದರೆ ನಫೆಡ್‌ನವರು ಲಂಚ ಕೇಳುತ್ತಿದ್ದಾರೆ. ಲಂಚ ಕೊಡದಿದ್ದರೆ ಗುಣಮಟ್ಟದಿಂದ ಕೂಡಿಲ್ಲ ಎಂದು ಕೊಬ್ಬರಿಯನ್ನು ಕೊಳ್ಳದೆ ವರ್ತಕರಿಗೆ ಅನುಕೂಲವಾಗುವಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಒಂದು ವೇಳೆ ನಫೆಡ್‌ನವರು ಕೊಳ್ಳದೆ ಇದ್ದರೂ 3 ತಿಂಗಳ ಮಟ್ಟಿಗೆ ಆವರ್ತಕ ನಿಧಿಯಲ್ಲಿ ಬಡ್ಡಿ ರಹಿತ ಸಾಲ ನೀಡಲಾಗುವುದು ಹಾಗೂ ಗೋದಾಮು ಒದಗಿಸಲಾಗುವುದು. ಒಂದು ವೇಳೆ ಲೈಸೆನ್ಸ್‌ಪಡೆದು ವರ್ತಕರು ರೈತರಿಂದ ಒಳ್ಳೆಯ ಬೆಲೆಗೆ ಕೊಬ್ಬರಿಯನ್ನು ಖರೀದಿಸುವುದಿದ್ದರೆ ಅಭ್ಯಂತರವಿಲ್ಲ. ಆದರೆ ರೈತರಿಗೆ ಮಾತ್ರ ಅನ್ಯಾಯವಾಗಬಾರದು ಎಂದರು.
ಗಮನಕ್ಕೆ ಬಂದಿಲ್ಲ: ನಫೆಡ್‌ಗೆ ಹೊರಗಡೆಯಿಂದ ಹಲವು ವರ್ತಕರು ಕೊಬ್ಬರಿಯನ್ನು ರೈತರ ಪಹಣಿ ಪಡೆದು ತಂದು ಮಾರುತ್ತಿರುವ ಬಗ್ಗೆ ಪ್ರಶ್ನಿಸಿದ ಬಗ್ಗೆ, ನಮ್ಮ ಗಮನಕ್ಕೆ ಇದು ಬಂದಿಲ್ಲ. ಕೇವಲ ರೈತರ ಪಹಣಿಯಲ್ಲದೆ ಗ್ರಾ.ಪಂ. ಕಾರ್ಯದರ್ಶಿಯಿಂದ ಬೆಳೆ ದೃಢೀಕರಣ ಪತ್ರವನ್ನು ತರಬೇಕು. ಒಂದು ವೇಳೆ ಗ್ರಾ.ಪಂ. ಕಾರ್ಯದರ್ಶಿ ಏನಾದರೂ ಸುಳ್ಳು ದೃಢೀಕರಣ ಪತ್ರ ಕೊಟ್ಟಿದ್ದು ಸಾಬೀತಾದರೆ ಅವರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿ ಬೇರೆಯ ಕಡೆ ವರ್ತಕರು ಈ ರೀತಿ ಮಾಡಿದ್ದೇನಾದರೂ ಕಂಡು ಬಂದಲ್ಲಿ ಮಾಲನ್ನು ಮುಟ್ಟುಗೊಲು ಹಾಕಿಕೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ಉಪಾಧ್ಯಕ್ಷ ರಾಜಣ್ಣ, ನಿರ್ದೆಶಕ ಬರಗೂರು ಬಪ್ಪಣ್ಣ, ಅಜ್ಜೇಗೌಡ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

