ಮೈಸೂರು

ಒತ್ತುವರಿ ತೆರವುಗೊಳಿಸದ ಆಯುಕ್ತರಿಗೆ ತರಾಟೆ

Published On :

ಕ.ಪ್ರ.ವಾರ್ತೆ ತುಮಕೂರು ಜು.28
ತುಮಕೂರು ನಗರದಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸದ ನಗರಸಭಾ ಆಯುಕ್ತ ನಾರಾಯಣಪ್ಪ ಅವರನ್ನು ಉಪ ಲೋಕಾಯುಕ್ತ ಸುಭಾಷ್ ಬಿ ತರಾಟೆಗೆ ತೆಗೆದುಕೊಂಡರು.
ಅವರು ಮುಂದಿನ ತಿಂಗಳ 12, 17, 18 ಹಾಗೂ 19 ರಂದು ತಮ್ಮ ಪ್ರವಾಸದ ಹಿನ್ನೆಲೆಯಲ್ಲಿ ಏರ್ಪಾಟಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ತುಮಕೂರು ನಗರಸಭೆಗೆ ಸಂಬಂಧಿಸಿದಂತೆ ವಿಪರೀತ ದೂರುಗಳು ಬಂದಿವೆ. ರಸ್ತೆ, ನೀರು, ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದಂತೆ ನಗರಸಭೆ ಮೌನ ವಹಿಸಿದೆ. ಒತ್ತುವರಿ ತೆರವುಗೊಳಿಸಲು ಏಕೆ ಮುಂದಾಗಿಲ್ಲ ಎಂದು ಉಪಲೋಕಾಯುಕ್ತರು ನಾರಾಯಣಪ್ಪ ವಿರುದ್ಧ ಹರಿಹಾಯ್ದರು. ತಡಬಡಾಯಿಸಿದ ನಾರಾಯಣಪ್ಪ, ಒತ್ತುವರಿದಾರರಿಗೆ ನೊಟೀಸ್ ನೀಡಲಾಗಿದೆ. ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ತಡವರಿಸಿದರು. ಬರೀ ನೊಟೀಸ್ ನೀಡಲಷ್ಟೇ ಉತ್ಸುಕರಾಗಿದ್ದೀರಿ. ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿದ್ದೀರಿ ಎಂಬ ದೂರುಗಳು ಬಂದಿವೆಯಲ್ಲ ಎಂಬ ಉಪಲೋಕಾಯುಕ್ತರ ಪ್ರಶ್ನೆಗೆ ನಾರಾಯಣಪ್ಪ ತಬ್ಬಿಬ್ಬಾದರು. ಕೂಡಲೇ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ನಗರ ಹಾಗೂ ತಾಲೂಕುಗಳಲ್ಲಿ ರಸ್ತೆ, ನೀರು, ನೈರ್ಮಲ್ಯ ಹಾಗೂ ಏನೇ ಕುಂದು ಕೊರತೆಗಳಿದ್ದರೂ ಆಯಾ ನಗರಸಭೆ - ಪುರಸಭೆಗಳೇ ಜವಾಬ್ದಾರಿ. ಆಯುಕ್ತರು, ಪುರಸಭಾಧಿಕಾರಿಗಳು ನುಣುಚಿಕೊಳ್ಳುವಂತಿಲ್ಲ  ಎಂದು ಎಚ್ಚರಿಸಿದರು.
ಅಧಿಕಾರಿಗಳೇ ಹೊಣೆ: ಟೆಂಡರ್ ಪ್ರಕ್ರಿಯೆಗಳು ಪಾರದರ್ಶಕವಾಗಿರಬೇಕು. ಸಾರ್ವಜನಿಕರ ಹಣ ದುರುಪಯೋಗವಾಗಕೂಡದು. ಅಧಿಕಾರಿಗಳು ಎಚ್ಚರಿಕೆವಹಿಸಬೇಕು ಎಂದು ತಾಕೀತು ಮಾಡಿದರು. ಅಧಿಕಾರಿಗಳು ರಾಜಕಾರಣಿಗಳ ಮರ್ಜಿಗೆ ಒಳಗಾಗಿ ಅಕ್ರಮ ಎಸಗಿದರೆ, ಹೊಣೆಗಾರರಾಗುವುದು ಅಧಿಕಾರಿಗಳೇ. ಕೋಟಿಗಟ್ಟಲೆ ಹಣ ಸರ್ಕಾರ ನೀಡುತ್ತಿದೆ. ಆದರೆ ಸದುಪಯೋಗವಾಗುತ್ತಿಲ್ಲ. ಎಲ್ಲ ಇಲಾಖೆಗಳು ಶಿಸ್ತಿನಿಂದ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೇ ನಿರ್ಲಕ್ಷ್ಯ ವಹಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಹಸೀಲ್ದಾರ್‌ಗಳಿಗೆ ಸೂಚನೆ: ಜಾತಿ, ಆದಾಯ ಪ್ರಮಾಣಪತ್ರ,  ಸಕಾಲದಲ್ಲಿ ದೊರಕಬೇಕು. ಮರಳು ಗಣಿಗಾರಿಕೆ,  ಪರವಾನಗಿ ಇರುವ ಗಣಿಗಳೆಷ್ಟು, ಕಾರ್ಯನಿರ್ವಹಿಸುತ್ತಿರುವ ಗಣಿಗಳೆಷ್ಟು ಅಕ್ರಮ ಮರಳು ಗಣಿಗಾರಿಕೆ ಎಲ್ಲೆಲ್ಲಿ ನಡೆದಿದೆ. ಕ್ರಮ ಏನಾಗಿದೆ ಎಂಬುದರ ಕುರಿತು ಮುಂದಿನ ಸಭೆಯಲ್ಲಿ ಸಮಗ್ರ ಮಾಹಿತಿ ನೀಡುವಂತೆ ಜಿಲ್ಲೆಯ ತಹಸೀಲ್ದಾರ್‌ಗಳಿಗೆ ಸೂಚಿಸಿದರು.
ಹೆಚ್ಚು ಹಣ ವಸೂಲಿ ದೂರು: ಬಯೋವುಟ್ರಿಕ್ ಕೇಂದ್ರಗಳಲ್ಲಿ ಕಾರ್ಡ್ ನೀಡಲು ಅರ್ಜಿಯೊಂದಕ್ಕೆ 50 ರು. ಗೆ ಬದಲು 100 ರು. ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಜತೆಗೆ ಶನಿವಾರ ಹಾಗೂ ಭಾನುವಾರ ಕೂಡ ಬಯೋವುಟ್ರಿಕ್ ಕೇಂದ್ರಗಳು ಕೆಲಸ ಮಾಡುವಂತೆ ಉಪಲೋಕಾಯುಕ್ತ ಸುಭಾಷ್ ಆದೇಶಿಸಿದರು.
ಆಸ್ಪತ್ರೆಯಲ್ಲಿ ವೈದ್ಯರಿಲ್ಲ: ಎಲ್ಲ ಆಸ್ಪತ್ರೆಗಳಲ್ಲಿ 24 ಗಂಟೆ ಹೆರಿಗೆಗೆ ಸೌಲಭ್ಯವಿದ್ದರೂ, ಡಾಕ್ಟರ್‌ಗಳೇ ಇಲ್ಲ. ಶುಚಿತ್ವ ಇಲ್ಲ. ಮೂಲ ಸೌಕರ್ಯಗಳಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಸರ್ಕಾರಕ್ಕೆ ಕೂಡಲೇ ಪತ್ರ ಬರೆದು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಎಂದು ಸಿಇಓ ಗೋವಿಂದರಾಜು  ಅವರಿಗೆ ಉಪ ಲೋಕಾಯುಕ್ತರು ಸೂಚಿಸಿದರು. ವೈದ್ಯರ ಅಸಮರ್ಪಕ ಕಾರ್ಯವೈಖರಿ ಸಮರ್ಥಿಸಿಕೊಳ್ಳಲು ಹೋದ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿಗಳು ಗೊಂದಲಕ್ಕೊಳಗಾದರು.
ಎಸ್ಪಿಗೆ ಸೂಚನೆ: ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಿಷಯದಲ್ಲಿ ವಿಶೇಷ ಗಮನ ಹರಿಸುವಂತೆ, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ ಅವರಿಗೆ ಉಪಲೋಕಾಯುಕ್ತರು ಸೂಚಿಸಿದರು.
ರಸ್ತೆ ಬಗ್ಗೆ ದೂರು: ಜಿಲ್ಲೆಯ ರಸ್ತೆಯ ಸ್ಥಿತಿ-ಗತಿ ಕುರಿತಂತೆ ಜಿಲ್ಲಾ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಅವರಿಂದ ಮಾಹಿತಿ ಪಡೆದರು. ರಸ್ತೆ  ಸ್ಥಿತಿ-ಗತಿ ಕುರಿತಂತೆ ವ್ಯಾಪಕ ದೂರುಗಳು ಬಂದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಗನವಾಡಿ ಕಟ್ಟಡ: ಅಂಗನವಾಡಿ ಅವ್ಯವಸ್ಥೆ ಬಗ್ಗೆ ಕೂಡ ಉಪ ಲೋಕಾಯುಕ್ತರು ತೀವ್ರ ಅಸಮಾಧಾನ  ವ್ಯಕ್ತಪಡಿಸಿದರು. ಅತಿ ಚಿಕ್ಕ - ಚಿಕ್ಕ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿರುವುದರ ಕುರಿತು ದೂರುಗಳು ಬಂದಿವೆ. ಜತೆಗೆ ಮಕ್ಕಳಿಗೆ ಗುಣ ಮಟ್ಟದ ಆಹಾರ ನೀಡಲಾಗುತ್ತಿರುವ ಕುರಿತು ಸಿಇಓ ಅವರಿಂದ ಮಾಹಿತಿ ಪಡೆದರು.
ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು: ಜಿಲ್ಲೆಯಲ್ಲಿ 500 ದೂರಿನ ಅರ್ಜಿಗಳು ಬಂದಿದ್ದು, ಇದನ್ನು ನೋಡಿದರೆ ತುಮಕೂರು ಜಿಲ್ಲೆಯಲ್ಲಿ ಅಧಿಕಾರಿಗಳು ಜನಸಾಮಾನ್ಯರ ದೂರುಗಳಿಗೆ ಸ್ಪಂದಿಸುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಉಪಲೋಕಾಯುಕ್ತರು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಎಸ್ಪಿ ರಮಣಗುಪ್ತ, ಜಿಪಂ ಸಿಇಓ ಗೋವಿಂದರಾಜು, ಜಿಲ್ಲಾ ಲೋಕಾಯುಕ್ತ ಎಸ್ಪಿ ರಮೇಶ್‌ಚಂದ್ರ ಸೇರಿದಂತೆ ಸಿಬ್ಬಂದಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಡವರಿಸುವಂತಿಲ್ಲ
ಈಗಾಗಲೇ ಜಿಲ್ಲೆಯ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 500 ದೂರುಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಆಗಸ್ಟ್ 12,17,18,19 ರಂದು ತುಮಕೂರು ಜಿಲ್ಲಾ ಪ್ರವಾಸ ಕೈಗೊಳ್ಳುವೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಸಮಸ್ಯೆ ಬಗೆಹರಿಸುವ, ಅರ್ಜಿ ವಿಲೇವಾರಿ ಮಾಡುವ ಜವಾಬ್ದಾರಿ ಆಯಾ ಇಲಾಖೆ ಮುಖ್ಯಸ್ಥರದ್ದು. ಯಾವುದೇ ಕಾರಣಕ್ಕೂ ಪ್ರವಾಸದ ವೇಳೆ ಅಧಿಕಾರಿಗಳು ತಡವರಿಸುವಂತಿಲ್ಲ ಎಂದು ಉಪಲೋಕಾಯುಕ್ತ ಸುಭಾಷ್ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.