ಮೈಸೂರು

ಸಬ್ ಇನ್ಸ್‌ಪೆಕ್ಟರ್‌ಶಿವಕುಮಾರ್ ಅಮಾನತು

Published On :

ಮೈಸೂರು: ಮನೆಯೊಂದಕ್ಕೆ ನುಗ್ಗಿ ಗಲಾಟೆ ಮಾಡಿದ ಹಿನ್ನೆಲೆಯಲ್ಲಿ ಮೇಟಗಳ್ಳಿ ಠಾಣೆಯ ಎಸ್‌ಐ ಶಿವಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ. ಕುರುಬಾರಹಳ್ಳಿ ಮನೆಯೊಂದಕ್ಕೆ ಎಸ್‌ಐ ಶಿವಕುಮಾರ್ ಶನಿವಾರ ರಾತ್ರಿ ಅತಿಕ್ರಮವಾಗಿ ಪ್ರವೇಶಿಸಿ ಅನುಚಿತವಾಗಿ ವರ್ತಿಸಿದ್ದಾರೆ. ಈ ಸಂಬಂಧ ನಜರ್‌ಬಾದ್ ಠಾಣೆ ಇನ್ಸ್‌ಪೆಕ್ಟರ್ ಅವರಿಂದ ವರದಿ ಕೇಳಲಾಗಿತ್ತು. ಅವರ ನೀಡಿರುವ ವರದಿ ಅನ್ವಯ ಶಿವಕುಮಾರ್ ಅವರನ್ನು ಅಮಾನತುಗೊಳಿಸಿರುವುದಾಗಿ ತಿಳಿಸಿದ್ದಾರೆ.

ಮಹಿಳೆ ವಂಚಿಸಿ ಚಿನ್ನದ ಸರ ಕಳವು
ಮೈಸೂರು: ಇಬ್ಬರು ಮಹಿಳೆಯರು ಸೇರಿಕೊಂಡು ಮತ್ತೊಬ್ಬ ಮಹಿಳೆಯನ್ನು ವಂಚಿಸಿ 60 ಸಾವಿರ ಮೌಲ್ಯದ 25 ಗ್ರಾಂ. ಚಿನ್ನದ ಮಾಂಗಲ್ಯ ಸರ ದೋಚಿ ಪರಾರಿಯಾಗಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಕೆ.ಆರ್. ಮೊಹಲ್ಲಾ ಬಸವೇಶ್ವರ ರಸ್ತೆ 12ನೇ ಕ್ರಾಸ್ ನಿವಾಸಿ ಪುಟ್ಟಸ್ವಾಮಿ ಎಂಬವರ ಪತ್ನಿ ಜಯಮ್ಮ (55) ಚಿನ್ನದ ಮಾಂಗಲ್ಯ ಸರ ಕಳೆದುಕೊಂಡವರು. ಇವರು ಮನೆಯಿಂದ ನಂಜುಮಳಿಗೆ ವೃತ್ತಕ್ಕೆ ತರಕಾರಿ ಖರೀದಿಗೆ ಹೋಗಿದ್ದರು. ಈ ವೇಳೆ ಅಪರಿಚಿತ ಮಹಿಳೆಯೊಬ್ಬಳು ಪರ್ಸ್ ಸಿಕ್ಕಿದೆ, ನಿಮ್ಮದೇ ಎಂದು ಪ್ರಶ್ನಿಸಿದ್ದಾರೆ. ಜಯಮ್ಮ ಪರ್ಸ್ ತನ್ನದಲ್ಲ ಎಂದು ಹೇಳಿದ್ದಾರೆ. ಪರ್ಸ್‌ನಲ್ಲಿರುವ ಹಣವನ್ನು ಇಬ್ಬರು ಹಂಚಿಕೊಳ್ಳುವುದಾಗಿ ಆಮಿಷವೊಡ್ಡಿದ್ದಾಳೆ. ಈ ವೇಳೆ ಮತ್ತೊಬ್ಬ ಅಪರಿಚಿತ ಮಹಿಳೆಯು ಪರ್ಸ್ ತನ್ನದೆಂದು ಮಧ್ಯಪ್ರವೇಶಿಸಿದ್ದಾಳೆ. ಪರ್ಸ್ ಕದ್ದಿಲ್ಲ ಎಂಬುದನ್ನು ದೇವರ ಮುಂದೆ ಪ್ರಮಾಣ ಮಾಡುವಂತೆ ಕೃಷ್ಣಮೂರ್ತಿಪುರಂ ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾರೆ. ಮಾಂಗಲ್ಯ ಸರವನ್ನು ಕಾಗದ ಪೊಟ್ಟಣಕ್ಕೆ ಹಾಕಿ ಪ್ರಮಾಣ ಮಾಡುವಂತೆ ಹೇಳಿ ಲಪಟಾಯಿಸಿಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ. ಲಕ್ಷ್ಮಿಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕಾರ್ಯಾಗಾರ ಮುಂದೂಡಿಕೆ
ಮೈಸೂರು: ಮೈಸೂರು ಕೈಗಾರಿಕೆಗಳ ಸಂಘವು ಜು. 30 ರಂದು ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಕೈಗಾರಿಕೆಗಳ ಕ್ಲಸ್ಟರ್ ಅರಿವು ಕಾರ್ಯಾಗಾರವನ್ನು ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್ ತಿಳಿಸಿದ್ದಾರೆ.

ಎಚ್. ರಾಮಯ್ಯ ಜಯಂತಿ ಮುಂದಕ್ಕೆ
ಮೈಸೂರು: ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯು ಜು. 30 ರಂದು ಆಯೋಜಿಸಿದ್ದ ಎಚ್. ರಾಮಯ್ಯನವರ 115ನೇ ಜಯಂತಿಯನ್ನು ಆ. 20ಕ್ಕೆ ಮುಂದೂಡಿದೆ. ಹಾಗೆ ಪ್ರತಿಭಾ ಪುರಸ್ಕಾರಕ್ಕಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿರುವ ಒಕ್ಕಲಿಗ ಸಮಾಜದ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ, ನಂ. 12, ಕೆಎಸ್‌ಆರ್‌ಟಿಸಿ ಕಟ್ಟಡ, ಕೆ.ಆರ್. ವೃತ್ತ, ಮೈಸೂರು- 1. ಇಲ್ಲಿಗೆ ಅರ್ಜಿ ಸಲ್ಲಿಸುವಂತೆ ಸಂಸ್ಥಾಪಕ ಅಧ್ಯಕ್ಷೆ ಎಚ್.ಎಲ್. ಯಮುನಾ ತಿಳಿಸಿದ್ದಾರೆ. ಮೊ. 9902698623 ಸಂಪರ್ಕಿಸಬಹುದು.

ಸ್ನಾತಕೋತ್ತರ ಕೋರ್ಸಿಗೆ ಅರ್ಜಿ
ಮೈಸೂರು: ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗದ ಪ್ರಥಮ ಎಂ.ಎ (ಅರ್ಥಶಾಸ್ತ್ರ, ಇಂಗ್ಲಿಷ್), ಎಂ.ಕಾಂ ಕೋರ್ಸಿಗೆ ಅರ್ಜಿ ಸಲ್ಲಿಸಲು ಜು. 30 ಕಡೆಯ ದಿನವಾಗಿದೆ ಎಂದು ಪ್ರಾಂಶುಪಾಲ ಪ್ರೊ. ಎನ್.ಪಿ. ಪದಕಿ ತಿಳಿಸಿದ್ದಾರೆ. ದೂ. 2548383 ಸಂಪರ್ಕಿಸಬಹುದು. ಯುವರಾಜ ಕಾಲೇಜಿನಲ್ಲಿ ಎಂ.ಎಸ್ಸಿ (ರಾಸಾಯನಶಾಸ್ತ್ರ) ಕೋರ್ಸಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಜು. 30 ರೊಳಗೆ 200 ಡಿಡಿ ಸಹಿತ ಅರ್ಜಿ ಸಲ್ಲಿಸಬಹುದು. ಮೊ. 9480477620.

ಇಂದು ಎರಡು ಸಿನಿಮಾ ಪ್ರದರ್ಶನ
ಮೈಸೂರು: ಮೈಸೂರು ವಿವಿ ಮಾನಸ ಗಂಗೋತ್ರಿಯ ಸಾಮರ್ಥ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೇವಾ ಕೇಂದ್ರವು ಆಯೋಜಿಸಿರುವ ಚಲನಚಿತ್ರ ರಸಗ್ರಹಣ ಶಿಬಿರದಲ್ಲಿ ಜು. 29 ರಂದು ಸಂಜೆ 5.30ಕ್ಕೆ ಸುಭಾಷ್ ಗಾಯ್ ಅವರ ಪರ್‌ದೇಶಿ ಮತ್ತು ಶಾರುಖ್‌ಖಾನ್ ಅಭಿನಯದ ದಿಲ್ವಾಲೆ ದುಲ್ಹಾನಿಯಾ ಲೇ ಜಾಯೆಂಗೇ ಚಿತ್ರಗಳ ಪ್ರದರ್ಶನ ಇರುತ್ತದೆ. ನಂತರ ಬಳ್ಳಾರಿ ಶ್ರೀಕೃಷ್ಣದೇವರಾಯ ವಿವಿ ಇಂಗ್ಲಿಷ್ ಪ್ರಾಧ್ಯಾಪಕ ಕೃಷ್ಣ ಮನವಳ್ಳಿ ಮಾತನಾಡುವರು ಎಂದು ಕೇಂದ್ರದ ನಿರ್ದೇಶಕ ಪ್ರೊ. ನಿರಂಜನ ವಾನಳ್ಳಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.