ಮೈಸೂರು

ಇಬ್ಬರು ಕಳ್ಳರ ಸೆರೆ: 1.40ಲಕ್ಷ ಮೌಲ್ಯದ ಮಾಲು ವಶ

Published On :

ಮೈಸೂರು: ನಗರದ ಉದಯಗಿರಿ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ, 1.40 ಲಕ್ಷ ಮೌಲ್ಯದ ಕಳವು ಮಾಲನ್ನು ವಶಪಡಿಸಿಕೊಂಡಿದ್ದಾರೆ. ಗೌಸಿಯಾನಗರ ನಿವಾಸಿಗಳಾದ ಅಕ್ಬರ್ ಖಾನ್ (27) ಮತ್ತು ಇಮ್ರಾನ್ ಪಾಷ (22) ಬಂಧಿತ ಆರೋಪಿಗಳು. ಬಂಧಿತರಿಂದ 80 ಸಾವಿರ ಮೌಲ್ಯದ 1 ಟನ್ ಎಪಿಎಸ್‌ಆರ್ ಅಲ್ಯುಮಿನಿಯಂ ವೈರ್‌ಗಳು ಹಾಗೂ 60 ಸಾವಿರ ಮೌಲ್ಯದ ಸೆಂಟ್ರಿಂಗ್ ಸೀಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಭಾನುವಾರ ಬೆಳಗಿನ ಜಾವ ಪೊಲೀಸರು ಗಸ್ತಿನಲ್ಲಿದ್ದಾಗ ಶ್ರೀನಗರದ ಬಳಿ ಗೂಡ್ಸ್ ಆಟೋದಲ್ಲಿ ಬಂದ ಐವರು ಪರಾರಿಯಾಗಲು ಪ್ರಯತ್ನಿಸಿದ್ದು, ಈ ವೇಳೆ ಇಬ್ಬರನ್ನು ಪೊಲೀಸರು ಹಿಡಿದಿದ್ದಾರೆ. ಸೈಯದ್ ಕರೀಂ, ಇಮ್ತಿಯಾಜ್ ಮತ್ತು ನದೀಂ ಪಾಷ ಎಂಬವರು ಪರಾರಿಯಾಗಿದ್ದಾರೆ. ನಂತರ ಆಟೋ ಪರಿಶೀಲಿಸಿದಾಗ ಎಸಿಎಸ್‌ಆರ್ ಅಲ್ಯುಮಿನಿಯಂ ವೈರ್‌ಗಳು 57 ಕಂತೆ ಇರುವುದು ಪತ್ತೆಯಾಗಿದೆ. ಈ ವೈರುಗಳನ್ನು ಬನ್ನೂರು ರಸ್ತೆಯ ಕೆಇಬಿ ಉಗ್ರಾಣದಿಂದ ಕಳವು ಮಾಡಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಇದೇ ರೀತಿ ಆರೋಪಿಗಳು 161 ಸೆಂಟ್ರಿಂಗ್ ಸೀಟ್‌ಗಳನ್ನು ಕಳವು ಮಾಡಿದ್ದು, 60 ಸೀಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರಿಂದ ನಜರ್‌ಬಾದ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳು ಪತ್ತೆಯಾಗಿವೆ. ಉದಯಗಿರಿ ಠಾಣೆ ಇನ್ಸ್‌ಪೆಕ್ಟರ್ ಆರ್.ಪಿ. ಅಶೋಕ್, ಎಸ್‌ಐ ಕೆ.ಎಸ್. ನರೇಂದ್ರಬಾಬು ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಶಿಕ್ಷಕ ಅಮಾನತು: ಬಿಇಒ ಆದೇಶ
ಮೈಸೂರು:
ಶಿಕ್ಷಕನೊಬ್ಬ 6ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಅಮಾನತುಗೊಂಡಿರುವ ಘಟನೆ ಮೈಸೂರಿನ ಜ್ಯೋತಿನಗರದಲ್ಲಿ ಸೋಮವಾರ ನಡೆದಿದೆ. ಜ್ಯೋತಿನಗರ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕ ನವೀದ್ ಅಹಮದ್ ಅಮಾನತುಗೊಂಡವರು. ಈತ 6ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ವಿಚಾರವನ್ನು ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಆಕೆಯ ಪೋಷಕರು ಸೋಮವಾರ ಶಾಲೆಯ ಬಳಿ ಜಮಾಯಿಸಿ ಗಲಾಟೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬಿಇಒ ಕರೀಗೌಡ ಪೋಷಕರಿಂದ ದೂರು ಪಡೆದು, ಶಿಕ್ಷಕ ನವೀದ್‌ನನ್ನು ಅಮಾನತುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಈ ಸಂಬಂಧ ನಜರ್‌ಬಾದ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.