ಮೈಸೂರು

ಪುಸ್ತಕ ಖರೀದಿಗೆ ಮಾರ್ಗಸೂಚಿ

Published On :

 ಬಿ. ಶೇಖರ್ ಗೋಪಿನಾಥಂ
ಕ.ಪ್ರ.ವಾರ್ತೆ   ಮೈಸೂರು   ಜೂ. 11
ಸರ್ಕಾರಿ ಪ್ರೌಢಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಖರೀದಿಸಿ ಪೂರೈಸಲು 2013-14ನೇ ಸಾಲಿನ ಪುಸ್ತಕ ಸಗಟು ಖರೀದಿ ಯೋಜನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಕೈಗೊಂಡಿದೆ. ಈ ಯೋಜನೆಯಡಿ ಪುಸ್ತಕಗಳ ಆಯ್ಕೆ ಮತ್ತು ಖರೀದಿಸುವ ಸಂಬಂಧ ಕೆಲವು ಮಾರ್ಗಸೂಚಿಗಳನ್ನು ರೂಪಿಸಿದೆ.
ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗುವ ಕನ್ನಡ ಭಾಷೆ, ವ್ಯಾಕರಣ, ವಿಜ್ಞಾನ, ಜೀವಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತ, ಸಮಾಜ ವಿಜ್ಞಾನ, ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ನಿಘಂಟು, ವಿಶ್ವಕೋಶ, ಸಮಾನ ಪದಕೋಶ, ಪ್ರಬಂಧ, ಕಾವ್ಯ, ಕಥನ ಸಾಹಿತ್ಯ, ನಾಟಕ, ಕಾದಂಬರಿ, ಸಾಮಾನ್ಯಜ್ಞಾನ, ಕಲೆ, ಕ್ರೀಡೆ, ವೃತ್ತಿ ಶಿಕ್ಷಣ, ಮಹಾನ್ ಸಾಧಕರ ಜೀವನ ಚರಿತ್ರೆಗಳು, ಆರೋಗ್ಯ ಶಿಕ್ಷಣ, ವಿಜ್ಞಾನ ಆಕರ ಗ್ರಂಥಗಳು, ಪ್ರಶಸ್ತಿ ಪಡೆದ ಕೃತಿಗಳು, ಕನ್ನಡಕ್ಕೆ ಭಾಷಾಂತರಿಸಿ ಪ್ರಶಸ್ತಿ ಪಡೆದ ಕೃತಿಗಳು, ಮಾಹಿತಿ ತಂತ್ರಜ್ಞಾನ, ಸಾಮಾನ್ಯ ಹಾಗೂ ಪರಾಮರ್ಶನ ಕೃತಿಗಳು, ಜನಪ್ರಿಯ ವಿಜ್ಞಾನ, ಪರಿಸರ ಅಧ್ಯಯನ ಸೇರಿದಂತೆ ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಪ್ರಕಟಗೊಂಡಿರುವ ಪುಸ್ತಕಗಳನ್ನು ಆಯ್ಕೆ ಮಾಡಲಿದೆ.
ಶಿಕ್ಷಕರು- ವಿದ್ಯಾರ್ಥಿಗಳು: ರಾಜ್ಯ ಸರ್ಕಾರವು 8 ರಿಂದ 10ನೇ ತರಗತಿಗೆ ನಿಗದಿಪಡಿಸಿರುವ ಪಠ್ಯಪುಸ್ತಕವನ್ನು ಬೋಧಿಸಲು ಶಿಕ್ಷಕರಿಗೆ ಉಪಯುಕ್ತವಾದ ಪೂರಕ ಸಾಹಿತ್ಯ, ಶಿಕ್ಷಣ ಕ್ಷೇತ್ರದ ಸುಧಾರಣೆಯಲ್ಲಿ ರಾಷ್ಟ್ರ ಮತ್ತು ರಾಜ್ಯದಲ್ಲಿ ಕೈಗೊಳ್ಳಲಾಗಿರುವ ವಿನೂತನ ಯಶಸ್ವಿ ಪ್ರಯೋಗಗಳ ಸಾಹಿತ್ಯ, ಗಣಿತ, ವಿಜ್ಞಾನ, ಇತಿಹಾಸ, ಕಲೆ, ಪರಿಸರ ವಿಜ್ಞಾನ, ಭೂಗೋಳ ಇತ್ಯಾದಿ ಬೋಧನ ವಿಷಯಗಳಿಗೆ ಸಂಬಂಧಿಸಿದ ಕೃತಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ರೌಢಶಾಲಾ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿರುವ ಸಾಹಿತ್ಯ, ರಾಷ್ಟ್ರ ಮತ್ತು ರಾಜ್ಯದ ಇತಿಹಾಸ, ಭೌಗೋಳಿಕ ಅಂಶಗಳಿರುವ ಕೃತಿ, ಪ್ರಖ್ಯಾತ ವಿಜ್ಞಾನಿಗಳ ಸಾಧನೆ ಮತ್ತು ಜೀವನ ಚರಿತ್ರೆ, ವಿದ್ಯಾರ್ಥಿಗಳಲ್ಲಿ ಓದುವ ಕೌಶಲ್ಯ ಮತ್ತು ವೈಜ್ಞಾನಿಕ ಮನೋಭಾವ ಹೆಚ್ಚಿಸುವಂಥ ಕುತೂಹಲಕಾರಿ ಕೃತಿಗಳು, ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸುವ ಒಗಟು, ಗಾದೆಗಳು, ಸುಭಾಷಿತ, ಪದಬಂಧಗಳನ್ನೊಳಗೊಂಡ ಕೃತಿಗಳು, ವಿದ್ಯಾರ್ಥಿಗಳ ಇಂಗ್ಲಿಷ್ ಕಲಿಕೆಯನ್ನು ಉತ್ತಮಪಡಿಸಲು ಪೂರಕವಾದ ರೀಡಿಂಗ್ ಕಾರ್ಡ್ ಪುಸ್ತಕಗಳು, ವಿದ್ಯಾರ್ಥಿಗಳಲ್ಲಿ ಬರೆಯುವ ಹವ್ಯಾಸವನ್ನು ಬೆಳೆಸುವಂತಹ ಪತ್ರ ಲೇಖನಗಳು, ಪ್ರಬಂಧ ಸೇರಿದಂತೆ ಇತರೆ ಕೃತಿಗಳನ್ನು ಇಲಾಖೆ ಆಯ್ಕೆ ಮಾಡಲಿದೆ.
ಇಲಾಖೆಯು ಪುಸ್ತಕಗಳ ಆಯ್ಕೆ ಮತ್ತು ಖರೀದಿಗಾಗಿ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಯು ಸರ್ಕಾರಿ ಪ್ರೌಢಶಾಲಾ ಗ್ರಂಥ ಭಂಡಾರಕ್ಕೆ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಪುಸ್ತಕಗಳನ್ನು ಆಯ್ಕೆ ಮಾಡುವಾಗ ಪುಸ್ತಕದ ಗಾತ್ರ, ಮುದ್ರಣಕ್ಕೆ ಉಪಯೋಗಿಸಿದ ಕಾಗದ, ವಿನ್ಯಾಸ, ಮುದ್ರಣ ಗುಣಮಟ್ಟ ಮುಂತಾದ ಅಂಶಗಳನ್ನು ಗಮನಿಸಲಿದೆ.


ಪುಸ್ತಕಗಳ ಆಹ್ವಾನ
ಪುಸ್ತಕ ಸಗಟು ಖರೀದಿ ಯೋಜನೆಯಡಿ ಸರ್ಕಾರಿ ಪ್ರೌಢಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕ ಪೂರೈಸಲು ಪುಸ್ತಕಗಳ ಆಯ್ಕೆಗಾಗಿ ಲೇಖಕರು, ಪ್ರಕಾಶಕರಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯು ಪುಸ್ತಕಗಳನ್ನು ಆಹ್ವಾನಿಸಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಉಪಯುಕ್ತ ಪುಸ್ತಕಗಳನ್ನು ಕಳುಹಿಸಬೇಕು. ಅರ್ಜಿ ನಮೂನೆಗಳನ್ನು ಜಿಲ್ಲಾ ಉಪ ನಿರ್ದೇಶಕರ ಕಚೇರಿಗಳಿಂದ ಹಾಗೂ ಇಲಾಖೆಯ ವೆಬ್ಸೈಟ್- ಡಿಡಿ//ಢಿಢಿಢಿ.ಝ್ಛ್ಟ್ಟಟಜಜ್ಡ್ಛಛಡ್ಝ್ಟಿಟಿ.್ಞಛ್ಠ.ಟ್ಝ್ಛಿ.್ಝಟಿ ಪಡೆಯಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.