ಸಿಗದ ಸಾಮುದಾಯಿಕ ಹಕ್ಕು ಪತ್ರ: ಆದಿವಾಸಿಗಳ 'ಅರಣ್ಯ'ರೋದನ
- ಜೆ. ಮಹದೇವ
ಕ.ಪ್ರ.ವಾರ್ತೆ ಮೈಸೂರು ಜೂ. 27
ತಲತಲಾಂತರಗಳಿಂದ ಅರಣ್ಯಗಳಲ್ಲಿ ವಾಸಿಸುತ್ತಿರುವ ಆದಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡಲು ಸರ್ಕಾರ ಇನ್ನೂ ಮೀನಮೇಷ ಎಣಿಸುತ್ತಿದೆ. ಈ ನಡುವೆ ಕಿರು ಅರಣ್ಯ ಉತ್ಪನ್ನ ಸಂಗ್ರಹಿಸಲು ಅಗತ್ಯವಿರುವ ಸಾಮುದಾಯಿಕ ಹಕ್ಕು ಪತ್ರಗಳನ್ನು ನೀಡುವಂತೆ ಆದಿವಾಸಿಗಳು ಕೇಳಿಕೊಳ್ಳುತ್ತಿದ್ದರೂ ನೀಡಿಲ್ಲ.
ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ) ಅಧಿನಿಯಮ, 2006 (2007ರ 2) ಮತ್ತು ನಿಯಮಗಳು- 2008ರ ಪ್ರಕಾರ ಆದಿವಾಸಿಗಳು ಅರಣ್ಯ ಅಥವಾ ತಮ್ಮ ಜಮೀನಿನಲ್ಲಿ ಅರಣ್ಯ ಭೋಗಗಳನ್ನು ಅನುಭವಿಸಲು ಹಕ್ಕುಳ್ಳವರಾಗಿದ್ದಾರೆ. ಅದರಂತೆ ಅವರ ಹಕ್ಕುಗಳನ್ನು ಮಾನ್ಯ ಮಾಡಿ ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವ ಸಂಬಂಧ ವೈಯಕ್ತಿಕ ಅಥವಾ ಸಾಮುದಾಯಿಕ ಹಕ್ಕು ಪತ್ರ ನೀಡುವ ಜವಾಬ್ದಾರಿ ಆಯಾ ಜಿಲ್ಲಾ ಸಮಿತಿಗೆ ವಹಿಸಲಾಗಿರುತ್ತದೆ.
ಅನುಸೂಚಿತ ಬುಡಕಟ್ಟು ಜನರು ವಾಸಿಸುವ ಪ್ರದೇಶಗಳನ್ನು ಗುರುತಿಸಲಾಗಿದ್ದು, ರಾಜ್ಯದ ಮೈಸೂರು, ಚಿಕ್ಕಮಗಳೂರು, ಉತ್ತರ ಕನ್ನಡ, ಚಾಮರಾಜನಗರ, ಉಡುಪಿ, ಮಂಡ್ಯ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ತಾಲೂಕುಗಳಲ್ಲಿ ಆದಿವಾಸಿಗಳು ವಾಸಿಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಜೇನುಕುರುಬ, ಬೆಟ್ಟ ಕುರುಬ, ಸೋಲಿಗ, ಎರವ, ಅಸಲರು, ಮಲೆಕುಡಿಯ, ಇರುಳಿಗ, ಸಿದ್ಧಿ, ಗೌಡಲು, ಮರಾಠಿ ನಾಯಕ ಜನಾಂಗಗಳು ವಾಸಿಸುತ್ತಿದ್ದಾರೆ.
ಅರಣ್ಯ ಉತ್ಪನ್ನ ಸಂಗ್ರಹ ಹಕ್ಕು: ಇವರು ಅರಣ್ಯದಲ್ಲಿ ಸಿಗುವ ಬಿದಿರು, ಕುರುಚಲು ಗಿಡ, ತುಂಡು ಮರ, ಬೆತ್ತ, ಟಸ್ಸಾರ್, ರೇಷ್ಮೆಗೂಡು, ಜೇನು, ಮೇಣ, ಅರಗು, ಟೆಂಡು ಅಥವಾ ಕೆಂಡು ಎಲೆಗಳು, ಔಷಧೀಯ ಸಸ್ಯಗಳು, ಗಿಡಮೂಲಿಕೆಗಳು, ಬೇರುಗಳಿ, ಗೆಡ್ಡೆಗಳು ಮತ್ತು ಅಂಥವುಗಳನ್ನು ಒಳಗೊಂಡಿರುವ ಸಸ್ಯ ಮೂಲದ, ಮರಮುಟ್ಟಲ್ಲದ ಉತ್ಪನ್ನಗಳನ್ನು ಸಂಗ್ರಹಿಸಲು ಕಾನೂನಿನಡಿ ಹಕ್ಕು ಪಡೆದುಕೊಂಡಿರುತ್ತಾರೆ. ಸಮಾಜದ ಮುಖ್ಯವಾಹಿನಿಂದ ಬಹುದೂರ ಇರುವ ಆದಿವಾಸಿಗಳು ತಮ್ಮ ಜೀವನಕ್ಕಾಗಿ ಜಮೀನಿನಲ್ಲಿ ಬೇಸಾಯ ಮಾಡುವುದು, ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ನಗರ ಪ್ರದೇಶಕ್ಕೆ ತಂದು ಮಾರಬಹುದು. ಅಲ್ಲದೇ ಕರ್ನಾಟಕ ರಾಜ್ಯ ಗಿರಿಜನ ಸಹಕಾರ ಮಹಾಮಂಡಳ (ಲ್ಯಾಂಪ್ಸ್ ಸೊಸೈಟಿ) ಮೂಲಕವೂ ಮಾರಬಹುದು. ಆದರೆ, ಅರಣ್ಯ ಉತ್ಪನ್ನ ಸಂಗ್ರಹಿಸಬೇಕಾದರೆ ಜಿಲ್ಲಾ ಸಮಿತಿಯಿಂದ ಅನುಮತಿ ಪಡೆಯಬೇಕು. ಜಿಲ್ಲಾ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಗಿರಿಜನ ಅಥವಾ ಸಮಾಜ ಕಲ್ಯಾಣಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿ, ಜಿಪಂ ಸಿಇಒ ಹಾಗೂ 3 ಆದಿವಾಸಿಗಳು ಸದಸ್ಯರಾಗಿರುತ್ತಾರೆ.
ಈ ಸಮಿತಿಯು ಕಿರು ಅರಣ್ಯ ಉತ್ಪನ್ನ ಸಂಗ್ರಹಿಸಲು ಇಚ್ಛಿಸುವವರಿಂದ ಅರ್ಜಿ ಪಡೆದು ಪರಿಶೀಲಿಸಿ ನಂತರ ವೈಯಕ್ತಿಕ ಅಥವಾ ಸಾಮೂದಾಯಿಕ (ಗಿರಿಜನ ವಾಸಿಸುವ ಕಾಲೋನಿಗೆ) ಹಕ್ಕು ಪತ್ರ ನೀಡಬೇಕು. ಈಗಾಗಲೇ 8 ಜಿಲ್ಲೆಗಳಿಂದ ಒಟ್ಟು 3 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದು, ಕೆಲವು ಅರ್ಜಿಗಳನ್ನು ಮಾತ್ರ ಇತ್ಯರ್ಥಗೊಳಿಸಲಾಗಿದೆ. ಅದರಲ್ಲೂ ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ ಜಿಲ್ಲೆಗಳ ಜಿಲ್ಲಾ ಸಮಿತಿಗಳು ನಿಷ್ಕ್ರಿಯವಾಗಿವೆ. ಈ ಸಮಿತಿಗಳು ಸದರಿ ಕಾನೂನು ಬಗ್ಗೆ ಆದಿವಾಸಿಗಳಿಗೆ ಕನಿಷ್ಠ ಅರಿವು ಮೂಡಿಸುವ ಕೆಲಸವನ್ನೂ ಮಾಡಿಲ್ಲ. ಹೀಗಾಗಿ ಆದಿವಾಸಿಗಳ ಅರಣ್ಯ ರೋಧನ ಮುಂದುವರಿದಿದ್ದು, ಕೂಡಲೇ ನೂತನ ಸರ್ಕಾರದ ಅರಣ್ಯ ಸಚಿವರು ಗಮನ ಹರಿಸಿ ಜಿಲ್ಲಾ ಸಮಿತಿಗಳಿಗೆ ಜೀವ ತುಂಬಬೇಕಿದೆ.
ಇತ್ಯರ್ಥವಾಗದೆ ಉಳಿದಿರುವ ಅರ್ಜಿಗಳ ಸಂಖ್ಯೆ
ಮೈಸೂರು.............................................................................215
ಚಿಕ್ಕಮಗಳೂರು....................................................................300
ಉತ್ತರ ಕನ್ನಡ......................................................................3000
ಚಾಮರಾಜನಗರ..................................................................200
ಕೊಡಗು..............................................................................300
ಕಿರು ಅರಣ್ಯ ಉತ್ಪನ್ನ ಸಂಗ್ರಹಿಸಲು ಸಾಮೂದಾಯಿಕ ಹಕ್ಕು ಪತ್ರ ನೀಡಲು ಮೂರು ವರ್ಷಗಳಿಂದ ಅವಿರತ ಹೋರಾಡುತ್ತಿದ್ದೇವೆ. ಒಂದು ವೇಳೆ ಆದಿವಾಸಿಗಳು ಉತ್ಪನ್ನ ಸಂಗ್ರಹಿಸಿದರೆ ಕಾನೂನು ಬಾಹಿರವಾಗಿ ಕೇಸು ದಾಖಲಿಸಲಾಗುತ್ತಿದೆ. ಆದ್ದರಿಂದ ಈಗಿನ ಸರ್ಕಾರದ ಅರಣ್ಯ ಸಚಿವರು ಈ ಬಗ್ಗೆ ಗಮನ ಹರಿಸಿ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಬೇಕು.
- ಎಂ. ಕೃಷ್ಣಯ್ಯ, ಅಧ್ಯಕ್ಷರು, ಕರ್ನಾಟಕ ರಾಜ್ಯ ಗಿರಿಜನ ಸಹಕಾರ ಮಹಾಮಂಡಳ
ಗುಂಡೂರಾವ್ ಪ್ರತಿಮೆ ಸ್ಥಾಪಿಸಿ
ಮೈಸೂರು: ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರ ಪ್ರತಿಮೆ ಸ್ಥಾಪಿಸುವಂತೆ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಅಲ್ಲಾ ಭಕ್ಷ್ ಆಗ್ರಹಿಸಿದ್ದಾರೆ. ಕರ್ನಾಟಕದ ಬೆಳವಣಿಗೆಗೆ ದೂರದೃಷ್ಟಿ ಹೊಂದಿದ್ದ ಗುಂಡೂರಾವ್ ಅವರು ಅನೇಕ ಅಭಿವೃದ್ಧಿ ಕಾರ್ಯಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅಂತೆಯೇ ಮೈಸೂರಿನ ಅಭಿವೃದ್ಧಿಗೆ ಪೂರಕವಾದ ಬೃಹತ್ ಕಲಾಮಂದಿರದ ಕೊಡುಗೆ ನೀಡಿದ್ದಾರೆ. ಆದರೆ ಅಲ್ಲಿನ ನಾಮಫಲಕದಲ್ಲಿ ಅದನ್ನು ಉದ್ಘಾಟಿಸಿದ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಹೆಸರಿದೆ ಹೊರತು ಅದನ್ನು ಮಂಜೂರು ಮಾಡಿದ ರೂವಾರಿ ಹಾಗೂ ಶಂಕುಸ್ಥಾಪಕ ಆರ್. ಗುಂಡೂರಾವ್ ಅವರ ಹೆಸರಿನ ನಾಮಫಲಕ ಇಲ್ಲದಿರುವುದು ವಿಷಾದನೀಯ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

