ಮೈಸೂರು

ಕಾಂಪೌಂಡ್ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

Published On :

ಕ.ಪ್ರ.ವಾರ್ತೆ ನಂಜನಗೂಡು ಜೂ. 30
ಇಲ್ಲಿನ ಎಂಜಿಎಸ್ ರಸ್ತೆಯಲ್ಲಿರುವ ಈದ್ಗಾ ಮಸೀದಿ ಕಾಂಪೌಂಡ್ ನಿರ್ಮಾಣಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಮುಸ್ಲಿಂ ಮುಖಂಡರು ಶನಿವಾರ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದರು.
ನಿಸಾರ್ ಅಹಮದ್ ನೇತೃತ್ವದಲ್ಲಿ ಪುರಸಭೆ ಮುಂದೆ ಧರಣಿ ನಡೆಯಿತು. ನಿಸಾರ್ ಮಾತನಾಡಿ, ಪ್ರಾರ್ಥನೆಗೆ ಅನುಕೂಲವಾಗುವಂತೆ ಕಾಂಪೌಂಡ್ ನಿರ್ಮಾಣ ಮಾಡಲು ಪುರಸಭೆಗೆ ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳು ಅವಕಾಶ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.  ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಡಿ.ರಮೇಶ್ ಮಾತನಾಡಿ, ನಿವೇಶನದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಅನುಮತಿ ನೀಡಲು ಅಸಾಧ್ಯ. ವಿವಾದ ಕುರಿತಂತೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದು, ವ್ಯಾಜ್ಯ ಇತ್ಯರ್ಥ ಆಗುವವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಅಸಾಧ್ಯ ಎಂದು ಹಿಂಬರಹ ನೀಡಿದರು. ಪ್ರತಿಭಟನಾಕಾರರು ಇದಕ್ಕೆ ತೃಪ್ತರಾಗದೆ ಸೋಮವಾರದಿಂದ ಕಾಂಪೌಂಡ್ ನಿರ್ಮಾಣಕ್ಕೆ ಅನುಮತಿ ನೀಡದಿದ್ದರೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದರು. ತ್ಯಾಗರಾಜ ಕಾಲೋನಿಯ ನಿವಾಸಿಗಳಾದ ಸುಬ್ಬಣ್ಣ, ಮಣಿಕಂಠ, ರವಿ, ಮಹೇಶ್ ಕಾಂಪೌಂಡ್ ನಿರ್ಮಾಣಕ್ಕೆ ನ್ಯಾಯಾಲಯ ತಡೆಯಾಜ್ಞೆ ತಂದಿದ್ದನ್ನು ಸ್ಮರಿಸಬಹುದು. ಇನ್‌ಸ್ಪೆಕ್ಟರ್ ಸಿ.ಜೆ. ರಘು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

22ರಂದು ಸರ್ಕಾರಿ ನೌಕರರ ಸಂಘ ಚುನಾವಣೆ
ಕೆ.ಆರ್. ನಗರ:
ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನಗಳಿಗೆ ಜು. 22ರಂದು ಚುನಾವಣೆ ನಡೆಯಲಿದೆ. ಒಟ್ಟು 35 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 28 ವಿವಿಧ ಇಲಾಖೆಗಳ ನೌಕರರು ಸ್ಫರ್ಧಿಸಬಹುದಾಗಿದೆ. 2 ಸಾವಿರ ಮಂದಿ ನೌಕರರು ಮತದಾನದ ಹಕ್ಕನ್ನು ಹೊಂದಿ ಚುನಾವಣೆ ನಿಗದಿಯಾಗಿರುವುದರಿಂದ ಆಕಾಂಕ್ಷಿಗಳಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಜು. 11 ರಿಂದ 15 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, 16 ರಂದು ಪರಿಶೀಲನೆ ನಡೆಯಲಿದೆ. ಅಂದೇ ವಾಪಸ್ಸಾತಿಗೆ ಕಡೆಯ ದಿನವಾಗಿದ್ದು, ಜು. 22ರ ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು, ಸಂಜೆ ಫಲಿತಾಂಶ ಪ್ರಕಟವಾಗಲಿದೆ.  ತಾಲೂಕು ದಂಡಾಧಿಕಾರಿಗಳು ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ತಾಲೂಕು ಕಚೇರಿಯಲ್ಲಿ ಮತದಾನ ಕೇಂದ್ರ ತೆರೆಯಲಾಗುತ್ತದೆ. ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿರುವುದರಿಂದ ಚುನಾವಣಾ ಚಟುವಟಿಕೆಗಳು ಗರಿಗೆದರಿದ್ದು, ಸ್ಫರ್ಧಾಕಾಂಕ್ಷಿಗಳು ಈಗಾಗಲೇ ನೌಕರರನ್ನು ಭೇಟಿ ಮಾಡಿ ಬೆಂಬಲ ಕೋರುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ತುರುಸಿನ ಪೈಪೋಟಿ ನಡೆಯುವ ಸಾಧ್ಯತೆಗಳಿವೆ.
ಚುನಾವಣೆ ಆಸಕ್ತರು ಗುಂಪು ರಚಿಸಿಕೊಂಡು ಸ್ಪರ್ಧಿಸಲಿದ್ದು, ಹಾಲಿ ಅಧ್ಯಕ್ಷ ಡಿಂಡಿಮ ಶಂಕರ್ ಮತ್ತು ಕಳೆದ ಬಾರಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಹೊಸೂರು ಎ. ಕುಚೇಲ ಅವರ ತಂಡಗಳು ಈಗಾಗಲೇ ಸಕ್ರಿಯರಾಗಿದ್ದು, ಸ್ಫರ್ಧಿಸುವ ಆಕಾಂಕ್ಷಿಗಳು ಮತ್ತು ಗೆಲ್ಲುವ ಅಭ್ಯರ್ಥಿಗಳಿಗಾಗಿ ತಲಾಶ್ ನಡೆಸುತ್ತಿದ್ದಾರೆ. ಈ ಬಾರಿ ಸಕಾರಿ ನೌಕರರ ಸಂಘದ ಚುನಾವಣೆ ರಂಗೇರಲಿದ್ದು, ಈ ಎರಡು ಗುಂಪುಗಳ ಜತೆಗೆ ಮತ್ತೆರಡು ಗುಂಪುಗಳು ಅಖಾಡಕ್ಕಿಳಿಯಲಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಹಿಂದಿನ ಚುನಾವಣೆಗಳಿಗಿಂತ ಈ ಚುನಾವಣೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಡುವ ಲಕ್ಷಣಗಳು ಕಂಡು ಬರುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.