ಮೈಸೂರು

'ರಂಗಾಯಣ ಮುಚ್ಚುವ ಹುನ್ನಾರ'

Published On :

ಕನ್ನಡಪ್ರಭ ವಾರ್ತೆ ಮೈಸೂರು ಮಾ.23
ನಿರ್ದೇಶಕ ಸ್ಥಾನದಿಂದ ಡಾ.ಬಿ.ವಿ. ರಾಜಾರಾಂ ಅವರನ್ನು ವಜಾಗೊಳಿಸುವ ಮೂಲಕ ರಂಗಾಯಣ ಮುಚ್ಚುವ ಹುನ್ನಾರ ನಡೆಯುತ್ತಿದೆ ಎಂದು ರಂಗಾಸಕ್ತರು ಅನುಮಾನ ವ್ಯಕ್ತಪಡಿಸಿದ್ದಾರೆ.
ರಂಗಾಯಣದಲ್ಲಿ ಆದ ಕ್ಷಿಪ್ರ ಬೆಳವಣಿಗೆ ಖಂಡಿಸಿ ಕಲಾಮಂದಿರ ಆವರಣದಲ್ಲಿರುವ ಕಿಂದರಿಜೋಗಿ ಪ್ರತಿಮೆಯ ಕಣ್ಣಿಗೆ ಶನಿವಾರ ಸಂಜೆ ಕಪ್ಪು ಪಟ್ಟಿ ಕಟ್ಟಿ ಪ್ರತಿಭಟಿಸಿದ ರಂಗಾಸಕ್ತರು, ಸರ್ಕಾರದ ತಪ್ಪು ನಿರ್ಧಾರ ಹಾಗೂ ರಂಗಾಯಣ ಉಪ ನಿರ್ದೇಶಕರ ಅನುಚಿತ ವರ್ತನೆ ವಿರುದ್ಧ ಕಿಡಿಕಾರಿದರು.
ರಂಗಾಸಕ್ತರ ಹೋರಾಟ ಬೆಂಬಲಿಸಿದ ಶಾಸಕ ಎಚ್.ಎಸ್. ಶಂಕರಲಿಂಗೇಗೌಡ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ರಂಗಾಯಣ ನಿರ್ದೇಶಕರ ಮೇಲೆ ಗದಾಪ್ರಹಾರ ನಡೆಸುತ್ತಿದೆ. ಈ ಘಟನೆಯ ಹಿಂದೆ ದುಷ್ಟ ಶಕ್ತಿಗಳ ಕೈವಾಡವಿದೆ. ರಂಗ ಕಲಾವಿದರಿಗೆ ಅವಮಾನ ಮಾಡಲಾಗುತ್ತಿದೆ. 25 ವರ್ಷದ ಇತಿಹಾಸವುಳ್ಳ ರಂಗಾಯಣವನ್ನು ನಾವು ಉಳಿಸಿಕೊಳ್ಳಬೇಕಿದೆ. ಈ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಅವರು ಹೇಳಿದರು.
ಕಲಾವಿದರ ಮನೆಗೆ ನೋಟಿಸ್: ಕಳೆದ ಮೂರು ದಿನಗಳ ಹಿಂದೆ ರಂಗಾಯಣದ 12 ಮಂದಿ ಕಲಾವಿದರನ್ನು ವರ್ಗಾವಣೆ ಮಾಡಿದ್ದ ಉಪ ನಿರ್ದೇಶಕಿ ನಿರ್ಮಲ ಮಠಪತಿ ಅವರು, ವರ್ಗಾವಣೆ ನೋಟಿಸ್‌ಗಳನ್ನು ಸಂಬಂಧಪಟ್ಟ ಕಲಾವಿದರ ಮನೆಯ ಗೋಡೆಗೆ ಅಂಟಿಸುವ ಹೀನ ಕೆಲಸ ಮಾಡಿದ್ದಾರೆ ಎಂದು ಮುದ್ದುಕೃಷ್ಣ ದೂರಿದರು.
ಚಿಂತಕ ಪ. ಮಲ್ಲೇಶ್, ರಂಗಕರ್ಮಿಗಳಾದ ಪ್ರೊ. ಎಚ್.ಎಸ್. ಉಮೇಶ್, ರಾಜಶೇಖರ ಕದಂಬ, ಉದಯಕುಮಾರ್, ಶಿವಾಜಿರಾವ್ ಜಾಧವ್, ಬೆಳಕೆರೆ ಮಂಜುನಾಥ್, ಕೃಷ್ಣಪ್ರಸಾದ್, ಪ್ರೊ. ವಿ.ಎನ್. ಲಕ್ಷ್ಮೀನಾರಾಯಣ್, ಬಾದಲ್ ನಂಜುಂಡಸ್ವಾಮಿ, ರಾಮಚಂದ್ರ ಗಂಗಾ, ಜಯರಾಮ್ ಪಾಟೀಲ್ ಮೊದಲಾದವರು ಇದ್ದರು.
ಪ್ರಭಾರ ನಿರ್ದೇಶಕರು ಅಧಿಕಾರ ಸ್ವೀಕಾರ: ಮೈಸೂರು: ರಂಗಾಯಣ ನಿರ್ದೇಶಕರ ಸ್ಥಾನದಿಂದ ಡಾ.ಬಿ.ವಿ. ರಾಜಾರಾಂ ವಜಾಗೊಳಿಸಿದ್ದ ಸರ್ಕಾರ ಅದೇ ಸ್ಥಾನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರಾದ ಕೆ.ಆರ್. ರಾಮಕೃಷ್ಣ ಅವರನ್ನು ಪ್ರಭಾರ ನಿರ್ದೇಶಕರನ್ನಾಗಿ ನೇಮಿಸಿದೆ.
ಈ ಹಿನ್ನೆಲೆಯಲ್ಲಿ ಕೆ.ಆರ್. ರಾಮಕೃಷ್ಣ ಅವರು ಶನಿವಾರ ಬೆಳಗ್ಗೆ ಅಧಿಕಾರ ವಹಿಸಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.