ಎಂಡಿಎ ಬಡಾವಣೆ ಬವಣೆಗೆ ಸ್ಪಂದಿಸುವರೆ?
ಮೈಸೂರು: ಮೈಸೂರಿನ ವಿಜಯನಗರ 4ನೇ ಹಂತ 2ನೇ ಘಟ್ಟದ ಸಮಸ್ಯೆ ಕಿಂಚಿತ್ತೂ ಬಗೆಹರಿದಂತಿಲ್ಲ. ಒಳಚರಂಡಿ, ಕುಡಿಯುವ ನೀರು, ವಿದ್ಯುತ್, ರಸ್ತೆ, ಬಸ್ ಸೌಲಭ್ಯ ಸೇರಿದಂತೆ ಹಲವು ಅವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿದ್ದರೂ ಎಂಡಿಎ, ಸೆಸ್ಕ್ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ನಮಗೆ ಸಂಬಂಧವೇ ಇಲ್ಲವೇನೊ ಎಂಬಂತೆ ವರ್ತಿಸುತ್ತಿದ್ದಾರೆ.
ಎಂಡಿಎ ಬಡಾವಣೆಯ ಬವಣೆ ಶಾಶ್ವತವೇನೊ ಎಂಬ ಭಾವನೆ ಅಲ್ಲಿನ ಸ್ಥಳೀಯ ನಿವಾಸಿಗಳಲ್ಲಿ ಇದೆ. ಹಲವು ವರ್ಷಗಳಿಂದ ಅಲ್ಲಿ ವಾಸವಿರುವ ಅನೇಕ ನಿವಾಸಿಗಳು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಈ ಪೈಕಿ ಎಂ.ಟಿ. ರಾಮಚಂದ್ರ ಸಹ ಒಬ್ಬರು. ವಿಜಯನಗರ 4ನೇ ಹಂತದ ನಿವಾಸಿಗಳ ಮಾಹಿತಿಗಾಗಿ ಸ್ವರೂಪ್ ಹೆಸರಿನ ಕಿರುಹೊತ್ತಿಗೆ ಹೊರತಂದಿದ್ದಾರೆ. ಯಾವ ಯಾವ ಸಮಸ್ಯೆಗಳಿಗೆ ಯಾರನ್ನು ಸಂಪರ್ಕಿಸಬೇಕು, ಅವರ ದೂರವಾಣಿ ಸಂಖ್ಯೆ ಎಷ್ಟು, ಬಸ್ ನಂಬರ್, ರೈಲು ಹೊರಡುವ ಸಮಯ ಹೀಗೆ ಎಂಬ ಎಲ್ಲಾ ಮಾಹಿತಿ ಒಳಗೊಂಡ ಸ್ವರೂಪ್ನ್ನು ಉಚಿತವಾಗಿ ವಿತರಿಸಿದ್ದರು.
ಅಲ್ಲದೆ, ಬಸ್ ಸಮಸ್ಯೆ, ವಿದ್ಯುತ್ ಸಮಸ್ಯೆ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಇಂದಿಗೂ ರಾಮಚಂದ್ರ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕನ್ನಡಪ್ರಭ ಎಂಡಿಎ ಬಡಾವಣೆ ಬದುಕು - ಬವಣೆ ಹೆಸರಿನಲ್ಲಿ ಇತ್ತೀಚೆಗೆ ನಡೆಸಿದ ಸುದ್ದಿ ಸರಣಿಯೂ ಅಲ್ಲಿನ ಸ್ಥಳೀಯ ನಿವಾಸಿಗಳ ಹೋರಾಟಕ್ಕೆ ಬೆಂಬಲ ಸಿಕ್ಕಂತಾಯಿತು.
ಸಂಚಾರ ಅವ್ಯವಸ್ಥೆ: ಆದರೂ ಜಿಡ್ಡುಗಟ್ಟಿದ ಆಡಳಿತ ಯಂತ್ರ ಇದುವರೆಗೂ ಅಲ್ಲಿನ ಸ್ಥಳೀಯ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ. ಬಸ್ ಡಿಪೋ ಉದ್ಘಾಟನೆಗೊಂಡರೆ ಸಾಕಷ್ಟು ಬಸ್ ಸೌಲಭ್ಯ ಲಭಿಸುತ್ತದೆ ಎಂಬ ನಂಬಿಕೆಯೊಂದಿಗೆ ಈಗಲೂ ಅಲ್ಲಿನ ನಿವಾಸಿಗಳು ಇದ್ದಾರೆ. ಆದರೆ, ಬರುವ ಬಸ್ಗಳೇ ಸರಿಯಾದ ಸಮಯಕ್ಕೆ ಬಂದರೆ ಸಾಕು ಎಂದು ನಿಟ್ಟುಸಿರು ಬಿಡುವಂತಾಗಿದೆ.
ಓವರ್ಹೆಡ್ ಟ್ಯಾಂಕ್: ಇಲ್ಲಿ ಬೃಹತ್ ನೀರಿನ ಟ್ಯಾಂಕ್ ನಿರ್ಮಾಣವಾಗಿದ್ದರೂ ನೇರವಾಗಿ ನೀರು ಸರಬರಾಜು ಮಾಡಲು ಸಾಧ್ಯವಿಲ್ಲ. ಈ ಬಡಾವಣೆಗೆ ನಾಲ್ಕು ಓವರ್ಹೆಡ್ ಟ್ಯಾಂಕ್ ನಿರ್ಮಿಸಬೇಕಿದೆ. ಈ ಟ್ಯಾಂಕ್ಗಳ ನಿರ್ಮಾಣಕ್ಕೆ ಟೆಂಡರ್ ಕರೆದರೂ ಯಾರೂ ಬರುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಇಲ್ಲಿ ಬೆಳೆದಿರುವ ಗಿಡ- ಗಂಟಿ ತೆರವುಗೊಳಿಸಿಲ್ಲ. ನಿರ್ಮಾಣಗೊಂಡಿರುವ ರಸ್ತೆಯ ಮೇಲೆಯೆ ಮತ್ತೊಂದು ಸುತ್ತು ಡಾಂಬರ್ ಹಾಕಿಸುವುದರಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಸಿಗ್ನಲ್ ಲೈಟ್: ಇನ್ನು ಬಡಾವಣೆಗೆ ಸಂಬಂಧಿಸಿದಂತೆ ಮುಖ್ಯವಾಗಿ ಬಡಾವಣೆ ಗುರುತಿಸಲು ರಿಂಗ್ ರಸ್ತೆಯಲ್ಲಿ ದೊಡ್ಡದಾಗಿ 3 ಕಡೆ ನಾಮಫಲಕ ಹಾಕಬೇಕು. ರಿಂಗ್ ರಸ್ತೆ ದಾಟಲು 3 ಕಡೆ ಸಿಗ್ನಲ್ ಲೈಟ್ ಅಳವಡಿಸಬೇಕು, ಹೊಸ ನೀರಿನ ಟ್ಯಾಂಕ್ ಉದ್ಘಾಟಿಸಿ, ನದಿ ನೀರು ಸರಬರಾಜಾಗುವಂತೆ ನೋಡಿಕೊಳ್ಳಬೇಕು. ಬಸ್ ನಿಲ್ದಾಣ ನಿರ್ಮಿಸಿ ಬರುವ ಬಸ್ಗಳು ಬಡಾವಣೆಯ 80 ಅಡಿ ರಸ್ತೆಗಳಲ್ಲಿ ಸುತ್ತು ಹಾಕಬೇಕು. ಪೊಲೀಸರು ಗಸ್ತು ತಿರಗಬೇಕು. ಕಸ ವಿಲೇವಾರಿ ಮಾಡಬೇಕು, ಬೀದಿ ದೀಪ ಅಳವಡಿಸಿ ಅವುಗಳನ್ನು ನಿರ್ವಹಿಸಬೇಕು. ಅಂತೆಯೇ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಬೇಕು.
ಬೀದಿನಾಯಿಗಳ ನಿಯಂತ್ರಣ, ಆಸ್ಪತ್ರೆ ವ್ಯವಸ್ಥೆ, ಸರ್ಕಾರಿ ಶಾಲೆ, ವಸತಿ ಶಾಲೆ, ಕಾಲೇಜು, ಅಂಗನವಾಡಿ ಕೇಂದ್ರ ತೆರೆಯಬೇಕು. ಅಂಚೆ ಕಚೇರಿ, ದೂರವಾಣಿ ಸಂಪರ್ಕ ಲಭ್ಯವಾಗಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಸ್ಥಳೀಯರ ಈ ಎಲ್ಲಾ ಸಮಸ್ಯೆಗಳಿಗೆ ಎಂಡಿಎ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಡಿ.ಎನ್. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

