ಮೈಸೂರು

'ಚುಟುಕು ಕವನ ಹನಿ ನೀರಾವರಿ ಇದ್ದಂತೆ'

Published On :

ಕ.ಪ್ರ. ವಾರ್ತೆ  ಹುಣಸೂರು, ಮಾ.25
ಚುಟುಕು ಕವನ ಹನಿ ನೀರಾವರಿ ವ್ಯವಸಾಯವಿದ್ದಂತೆ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ. ನೀಲಗಿರಿ ತಳವಾರ್ ಅಭಿಪ್ರಾಯಪಟ್ಟರು.
ಸ್ಪಂದನ ಸಾಂಸ್ಕೃತಿಕ ಪರಿಷತ್, ರೋಟರಿ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆಯ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಸ್ಮರಣಾರ್ಥ ಆಯೋಜಿಸಿದ್ದ ರಾಜ್ಯ ಮಟ್ಟದ ಚುಟುಕು ಕವಿಮೇಳ, ಸೇವಾ ಚೇತನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಚುಟುಕು ಕಾವ್ಯ ಸವಾಲಿನ ಸ್ವರೂಪವಾದುದು. ಕವಿಯ ಸೃಜನಶೀಲತೆ, ಕಾವ್ಯ ಕೌಶಲ್ಯ ಪ್ರದರ್ಶಿಸಲು ಚುಟುಕು ಕಾವ್ಯ ಉತ್ತಮ ವೇದಿಕೆಯಾಗುತ್ತದೆ. ಕವಿತೆಯು ಚಿಕ್ಕದು, ದೊಡ್ಡದು ಎನ್ನವುದು ಕೇವಲ ದೃಷ್ಟಿಭೇದವೇ ಹೊರತು ಸೃಷ್ಟಿಭೇದವಲ್ಲ. ಚುಟುಕು ಸಾಹಿತ್ಯ ಕ್ಷೇತ್ರ ಜೀವಚೈತನ್ಯದ ಮಾದರಿ, ಮುತ್ತಿನ ಹಾರದಂತಹ ರೂಪ ಹೊಂದಿರುತ್ತದೆ. ಚುಟುಕು ಸಾಹಿತ್ಯದ ಕೆಲವೇ ವಾಕ್ಯಗಳು ಆಕಾರದಲ್ಲಿ ವಾಮನನಂತಿದ್ದರೂ ಅರ್ಥದಲ್ಲಿ ತ್ರಿವಿಕ್ರಮನಂತೆ. ಇಷ್ಟಕ್ಕೂ ಕನ್ನಡ ಸಾಹಿತ್ಯಲೋಕ ಅತ್ಯಂತ ವಿಶಾಲ ಹಾಗೂ ವೈವಿಧ್ಯತೆಯಿಂದ ಕೂಡಿದ ಪ್ರಾಕಾರವಾಗಿದೆ. ಇಲ್ಲಿ ಮಹಾಕಾವ್ಯದಂತಹ ರೂಪಗಳನ್ನೂ ಕಾಣಬಹುದು ಮತ್ತು ಚುಟುಕುದಂತಹ ಸೂಕ್ಷ್ಮ ಪ್ರಭಾವಗಳನ್ನೂ ಒಳಗೊಳ್ಳಬಲ್ಲ ಶಕ್ತಿ, ಸಾಮರ್ಥ್ಯ ಕನ್ನಡ ಸಾಹಿತ್ಯಕ್ಕಿದೆ ಎಂದು ಹೇಳಿದರು.
ತಹಸೀಲ್ದಾರ್ ಬಿ.ಸಿ. ಶಿವಾನಂದಮೂರ್ತಿ ಹಾಗೂ ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಮೀನಾಕ್ಷಿ ಅವರನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.
ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾವಲುಪಡೆಯ ರಾಜ್ಯಾಧ್ಯಕ್ಷ ಎಂ. ಮೋಹನ್ ಕುಮಾರ್‌ಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಕೆ. ರಾಮು, ರೋಟರಿ ಅಧ್ಯಕ್ಷ ಆರ್. ಆನಂದ್, ತಾ. ಕೃಷಿಕ ಸಮಾಜದ ಉಪಾಧ್ಯಕ್ಷ ರಾಜೇಗೌಡ ಹಿಂಡುಗುಡ್ಲು, ಪುರಸಭಾ ಸದಸ್ಯೆ ಸುನೀತಾ ಜಯರಾಮೇಗೌಡ, ಮಂಡ್ಯದ ಯುವ ಬರಹಗಾರರ ಬಳಗದ ಸಂಚಾಲಕ ಮಂಗಲ ಎಂ.ಇ. ಶಿವಣ್ಣ, ಪರಿಷತ್ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಇದ್ದರು.
ರಾಜ್ಯದ ವಿವಿಧ ಭಾಗಗಳಿಂದ ಯುವಕವಿಗಳು ಸ್ವರಚಿತ ಚುಟುಕು ಕವನಗಳನ್ನು ವಾಚಿಸಿದರು. ಎಲ್ಲ ಕವಿಗಳಿಗೂ ನೆನಪಿನ ಕಾಣಿಕೆ ಮತ್ತು ಪ್ರಶಸ್ತಿಪತ್ರ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.