ಪ್ರಬಲ ಅಭ್ಯರ್ಥಿಗೆ ಬಿಜೆಪಿ ತಲಾಶ್
ಮೈಸೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿರ್ಗಮನದಿಂದಾಗಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಬಿಜೆಪಿ ಹಳೆಯ ಸ್ಥಿತಿಗೆ ಮರಳಿದೆ.
ಕೆಲವು ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್ ಹಾಗೂ ಜನತಾ ಪರಿವಾರಗಳ ನಡುವೆಯೇ ಜಿದ್ದಾಜಿದ್ದಿ. ಹೀಗಿದ್ದರೂ ಅಯೋಧ್ಯೆಯ ಶ್ರೀರಾಮಮಂದಿರ ಪ್ರಕರಣದಿಂದಾಗಿ 1994ರಲ್ಲಿ ಮೈಸೂರು ನಗರದ ಮೂರು ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದಿತ್ತು. ಕೃಷ್ಣರಾಜದಿಂದ ಎ. ರಾಮದಾಸ್, ಚಾಮರಾಜದಿಂದ ಎಚ್.ಎಸ್. ಶಂಕರಲಿಂಗೇಗೌಡ, ನರಸಿಂಹರಾಜದಿಂದ ಇ. ಮಾರುತಿರಾವ್ ಪವಾರ್ ಆಯ್ಕೆಯಾಗಿದ್ದರು. ಇದಲ್ಲದೆ ಹುಣಸೂರಿನಿಂದ ಬಿಜೆಪಿಯ ಸಿ.ಎಚ್. ವಿಜಯಶಂಕರ್ ಆಯ್ಕೆಯಾಗಿದ್ದರು.
1999ರ ಚುನಾವಣೆಯಲ್ಲಿ ಬಿಜೆಪಿ ಕೃಷ್ಣರಾಜ ಹಾಗೂ ಚಾಮರಾಜ ಕ್ಷೇತ್ರ ಉಳಿಸಿಕೊಂಡರೆ ನರಸಿಂಹರಾಜ ಕ್ಷೇತ್ರವನ್ನು ಕಳೆದುಕೊಂಡಿತ್ತು. ಆದರೆ, ಆ ಪಕ್ಷದ ನಾಲ್ವರು ಅಭ್ಯರ್ಥಿಗಳು ಗ್ರಾಮೀಣ ಪ್ರದೇಶದಿಂದ ಆಯ್ಕೆಯಾಗಿದ್ದರು. ಅವರೆಂದರೆ ಹುಣಸೂರಿನಿಂದ ವಿ. ಪಾಪಣ್ಣ, ಪಿರಿಯಾಪಟ್ಟಣದಿಂದ ಎಚ್.ಸಿ. ಬಸವರಾಜು, ಟಿ. ನರಸೀಪುರದಿಂದ ಡಾ.ಎನ್.ಎಲ್. ಭಾರತೀಶಂಕರ್, ಚಾಮರಾಜನಗರದಿಂದ ಸಿ. ಗುರುಸ್ವಾಮಿ.
2004ರ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರ ಉಳಿಸಿಕೊಂಡರೆ ಉಳಿದೆಲ್ಲಾ ಕ್ಷೇತ್ರಗಳನ್ನು ಕಳೆದುಕೊಂಡಿತ್ತು. ಬನ್ನೂರಿನಿಂದ ಜೆ. ಸುನೀತಾ ವೀರಪ್ಪಗೌಡ ಬಿಜೆಪಿ ಟಿಕೆಟ್ ಮೇಲೆ ಆಯ್ಕೆಯಾಗಿ ನಂತರ ಜೆಡಿಎಸ್ ಜೊತೆ ಗುರುತಿಸಿಕೊಂಡರು.
2008ರ ಚುನಾವಣೆಯಲ್ಲಿ ಬಿಜೆಪಿ ಚಾಮರಾಜ ಕ್ಷೇತ್ರ ಉಳಿಸಿಕೊಂಡರೆ ಕೃಷ್ಣರಾಜ ಕ್ಷೇತ್ರದಿಂದ ಮತ್ತೆ ಗೆದ್ದಿತು. ಆದರೆ, 2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕೊಳ್ಳೇಗಾಲದಿಂದ ಬಿಜೆಪಿಯ ಜಿ.ಎನ್. ನಂಜುಂಡಸ್ವಾಮಿ ಗೆದ್ದರು.
ಬಿಜೆಪಿ ಸ್ಥಿತಿ: ಯಡಿಯೂರಪ್ಪ ಮುಖ್ಯಮಂತ್ರಿಗಳಾದ ನಂತರ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಬಿಜೆಪಿ ಚಿಗುರಿಕೊಂಡಿತ್ತು. ಆದರೆ, ಅವರ ನಿರ್ಗಮನದ ನಂತರ ಬಿಜೆಪಿ ಹಳೆಯ ಸ್ಥಿತಿಗೆ ಮರಳಿದೆ. ಚಾಮರಾಜ ಕ್ಷೇತ್ರದಿಂದ ನಾಲ್ಕು ಬಾರಿ ಪಕ್ಷಕ್ಕೆ ಗೆಲವು ತಂದುಕೊಟ್ಟಿದ್ದ ಶಂಕರಲಿಂಗೇಗೌಡರು ಜೆಡಿಎಸ್ಗೆ ಹೋಗಿದ್ದಾರೆ.
ಪ್ರಬಲ ಅಭ್ಯರ್ಥಿಗಳು: ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್, ಚಾಮರಾಜದಲ್ಲಿ ಎಂಡಿಎ ಅಧ್ಯಕ್ಷ ಎಲ್. ನಾಗೇಂದ್ರ, ಎಚ್.ಡಿ. ಕೋಟೆಯಿಂದ ಜಿಲ್ಲಾಧ್ಯಕ್ಷ ಸಿದ್ದರಾಜು, ನಂಜನಗೂಡಿನಿಂದ ಜಿಪಂ ಮಾಜಿ ಉಪಾಧ್ಯಕ್ಷ ಡಾ. ಶಿವರಾಂ, ಟಿ. ನರಸೀಪುರದಿಂದ ಮಾಜಿ ಶಾಸಕ ಸಿ. ರಮೇಶ್ ಪ್ರಬಲ ಅಭ್ಯರ್ಥಿಗಳೆನಿಸಿದ್ದಾರೆ. ನರಸಿಂಹರಾಜ ಕ್ಷೇತ್ರದಲ್ಲಿ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ, ಮಾಜಿ ಶಾಸಕ ಇ. ಮಾರುತಿರಾವ್ ಪವಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಪಿ. ಮಂಜುನಾಥ್ ಅವರ ನಡುವೆ ಪೈಪೋಟಿ ಇದೆ.
ಆದರೆ, ಉಳಿದ ಕ್ಷೇತ್ರಗಳಲ್ಲಿ ಗಟ್ಟಿಯಾದ ಹೆಸರಿಲ್ಲ. ಚಾಮುಂಡೇಶ್ವರಿಯಿಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೇಮಂತ್ಕುಮಾರ್ ಗೌಡ, ಎಸ್.ಆರ್. ಗೋಪಾಲರಾವ್, ವರುಣದಿಂದ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ. ನಂಜುಂಡಸ್ವಾಮಿ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎಸ್.ಡಿ. ಮಹೇಂದ್ರ, ವಿಧಾನಸಭಾ ಕ್ಷೇತ್ರದ ಪಕ್ಷದ ಅಧ್ಯಕ್ಷ ದೇವನೂರು ಪ್ರತಾಪ್, ವಿಜಯಕುಮಾರ್, ಕೆ.ಆರ್. ನಗರದಿಂದ ಮಿರ್ಲೆ ಶ್ರೀನಿವಾಸಗೌಡ, ಎಪಿಎಂಸಿ ಅಧ್ಯಕ್ಷ ರಮೇಶ್, ಪಿರಿಯಾಪಟ್ಟಣದಿಂದ ಬಿ.ಎಸ್. ರಾಮಚಂದ್ರ, ಆರ್,ಟಿ. ಸತೀಶ್, ವಿ.ಜಿ. ಅಪ್ಪಾಜಿಗೌಡ, ಹುಣಸೂರಿನಿಂದ ಅಣ್ಣಯ್ಯ ನಾಯಕ್, ಜಿ.ಎಸ್. ರಮೇಶ್ಕುಮಾರ್, ಕೆ.ಟಿ. ಗೋಪಾಲ್ ಮೊದಲಾದವರ ಹೆಸರುಗಳಿವೆ.
ಭಿನ್ನವಾಗಿಲ್ಲ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಹನೂರು ಹಾಗೂ ಚಾಮರಾಜನಗರದಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ಕೊಳ್ಳೇಗಾಲದಲ್ಲಿ ಮಾತ್ರ ಹಾಲಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಇದ್ದಾರೆ. ಕೊಳ್ಳೇಗಾಲ ವಿಧಾನಸಭಾ ಚುನಾವಣೆಯಲ್ಲಿ ಕಳೆದ ಬಾರಿ ಜೆಡಿಎಸ್ನಿಂದ ಸ್ಪರ್ಧಿಸಿದ್ದ, ಚಾಮರಾಜನಗರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ, ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಬಿಜೆಪಿಯಲ್ಲೇ ಇದ್ದಾರೆ. ಆದರೆ, ಅವರು ಕೊಳ್ಳೇಗಾಲವೋ, ನಂಜನಗೂಡೋ, ಲೋಕಸಭೆಯೋ ಎಂಬ ಗೊಂದಲದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

