ಸಂಸದ ವಿಶ್ವನಾಥ್ ಕುತಂತ್ರ ಫಲಿಸಲ್ಲ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ ಮಾ.25
ಸಂಸದ ಎಚ್. ವಿಶ್ವನಾಥ್ ಅವರು ಏನೇ ಕುತಂತ್ರ ಮಾಡಿದರೂ, ಕ್ಷೇತ್ರದ ಮತದಾರರು ತಮ್ಮ ಕೈಬಿಡುವುದಿಲ್ಲ ಎಂದು ಶಾಸಕ ಸಾ.ರಾ. ಮಹೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ನಡೆದ ವಿಧಾನಸಭಾ ಚುನಾವಣೆಯ ಜೆಡಿಎಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈ ಬಾರಿ ನಡೆಯುವ ವಿಧಾನಸಭಾ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವೆ ನಡೆಯಲಿದ್ದು, ಅಂತಿಮವಾಗಿ ಮತದಾರರು ಧರ್ಮಕ್ಕೆ ಜಯದ ಮುದ್ರೆ ಒತ್ತುವುದಾಗಿ ಹೇಳಿದರು. ಅಲ್ಲದೆ, ಪಕ್ಷದ ಬೆಳವಣಿಗೆಯ ಬಗ್ಗೆ ನೊಂದು ಕಣ್ಣೀರು ಹಾಕಿದರು.
2004ರಲ್ಲಿ 1,800 ಮತಗಳನ್ನು ಪಡೆಯುತ್ತಿದ್ದ ಬಿಜೆಪಿಯಿಂದ ಸ್ಪರ್ಧಿಸಿ 24 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು, ಬಿಜೆಪಿಯಿಂದ ಜಯಗಳಿಸುವುದು ಅಸಾಧ್ಯ ಎಂದು ತಿಳಿದಿದ್ದರೂ ಕೂಡ, ತಾಲೂಕಿನಲ್ಲಿ ನಿರಂತರವಾಗಿ ಸಮಾಜ ಸೇವೆ ಮಾಡುತ್ತಾ ಬಂದ ಕಾರಣ, ಜೆಡಿಎಸ್ ಮುಖಂಡರು ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ಪಕ್ಷಕ್ಕೆ ಕರೆತಂದರು. ನಂತರ ಕ್ಷೇತ್ರದ ಮತದಾರರು 70 ಸಾವಿರಕ್ಕೂ ಹೆಚ್ಚು ಮತ ನೀಡುವ ಮೂಲಕ 2008ರ ಚುನಾವಣೆಯಲ್ಲಿ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿ, ತಮ್ಮ ಸೇವೆಗೆ ಅವಕಾಶ ಕಲ್ಪಿಸಿದರು ಎಂದು ಸ್ಮರಿಸಿದರು.
ನಿಮ್ಮ ತಂದೆ ಮಾಜಿ ಸಚಿವ ಎಸ್. ನಂಜಪ್ಪ ಜೆಡಿಎಸ್ನಿಂದ 5 ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬಹುದು. ಆದರೆ, ಜನಪರ ಕೆಲಸ ಮಾಡುತ್ತಿರುವ ನಾನು ಎರಡು ಬಾರಿ ಸ್ಪರ್ಧಿಸಲು ಅವಕಾಶ ನೀಡಲು ಸಾಧ್ಯವಿಲ್ಲವೇ ಎಂದು ಬಸಂತ್ ಅವರನ್ನು ಪ್ರಶ್ನಿಸಿದ ಶಾಸಕರು, ಈ ಮೊದಲು ಕಾಂಗ್ರೆಸ್ನೊಂದಿಗೆ ಸಂಪರ್ಕ ಇಟ್ಟುಕೊಂಡು ತಮ್ಮ ನಾಯಕರನ್ನು ನವನಗರ ಅರ್ಬನ್ ಬ್ಯಾಂಕ್ನ ಉಪಾಧ್ಯಕ್ಷರನ್ನಾಗಿ ಮಾಡಿದಿರಿ, ನಂತರ ಕಳೆದ ವಾರ ನಡೆದ ಪುರಸಭಾ ಚುನಾವಣೆಯಲ್ಲೂ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡಿ ಪಕ್ಷ ದ್ರೋಹ ಮಾಡಿದ್ದೀರಾ, ಈ ರೀತಿಯ ಕೆಲಸ ಮಾಡಲು ನಾಚಿಕೆಯಾಗುವುದಿಲ್ಲವೆ ಎಂದು ಟೀಕಿಸಿದರು.
ಸಂಸದ ಎಚ್. ವಿಶ್ವನಾಥ್ ಮಾಡುತ್ತಿರುವ ಕುತಂತ್ರ ರಾಜಕಾರಣಕ್ಕೆ ಈ ಹಿಂದೆ ಮಂಚನಹಳ್ಳಿ ಮಹದೇವ್ ಬಲಿಯಾಗಿದ್ದರು. ಈಗ ಬಸಂತ್ ಸರದಿ ಪ್ರಾರಂಭವಾಗಿದೆ. ನಾನು ಶಾಸಕನಾದ ನಂತರ ಯಾವುದೆ ಅಧಿಕಾರಿಯಿಂದ ಒಂದು ರು. ಲಂಚ ಪಡೆದಿಲ್ಲ. ಅದೇ ರೀತಿ ಪಕ್ಷದ ಕಾರ್ಯಕರ್ತರಿಗೂ ತಿನ್ನಲೂ ಬಿಟ್ಟಿಲ್ಲ. ಆದ್ದರಿಂದ ಕಾರ್ಯಕರ್ತರಿಗೆ ನನ್ನ ಮೇಲೆ ಅಸಮಾಧಾನ ಇದೆ ಎಂಬುದನ್ನು ಒಪ್ಪಿಕೊಂಡರು.
ನನ್ನನ್ನು ಸೋಲಿಸುವ ಏಕೈಕ ಗುರಿ ಹೊಂದಿರುವ ಸಂಸದರು, ಬೇರೆ ಅಭ್ಯರ್ಥಿಯನ್ನು ಹಾಕುವ ಬದಲು ತಾವೇ ಅಭ್ಯರ್ಥಿಯಾಗಲಿ. ಇಬ್ಬರು ನಾಮಪತ್ರ ಸಲ್ಲಿಸಿ ಯಾವುದೇ ಪ್ರಚಾರ ನಡೆಸದೆ ಕ್ಷೇತ್ರ ಬಿಟ್ಟು ಹೊರಗೆ ತೆರಳೋಣ. ಜನತೆ ಯಾರಿಗೆ ಆಶೀರ್ವಾದ ಮಾಡುತ್ತಾರೆಂಬುದನ್ನು ಕಾದು ನೋಡೋಣ ಎಂದು ಸವಾಲು ಹಾಕಿದರು.
ನಾನು ಶಾಸಕನಾದ ನಂತರ ಕ್ಷೇತ್ರದಲ್ಲಿ ಜಾತ್ಯತೀತವಾಗಿ ಜನರ ಸೇವೆ ಮಾಡುತ್ತಾ ಬಂದಿದ್ದು, ಶಕ್ತಿ ಮೀರಿ ಅಭಿವೃದ್ಧಿ ಕೆಲಸ ಮಾಡಿರುತ್ತೇನೆ. ಜೆಡಿಎಸ್ನಲ್ಲಿ ಅತ್ಯಂತ ಪ್ರಾಮಾಣಿಕ ಕಾರ್ಯಕರ್ತರು ಇರುವುದರಿಂದ ನನ್ನ ಗೆಲುವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ಸದಸ್ಯೆ ಕಲ್ಪನಾ ಧನಂಜಯ, ತಾಪಂ ಅಧ್ಯಕ್ಷೆ ಕವಿತಾ ರವಿ, ಸದಸ್ಯರಾದ ನಾಗಣ್ಣ, ಹೇಮಾವತಿ ಅಶೋಕ್, ಸಾದಿಕ್ಖಾನ್, ರಾಮಪ್ಪ, ಮಹದೇವಸ್ವಾಮಿ, ತಾ. ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ನಗರಾಧ್ಯಕ್ಷ ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್, ಡಿ.ಸಿ. ಮಂಜುನಾಥ್, ಪುರಸಭಾ ಮಾಜಿ ಅಧ್ಯಕ್ಷ ವೈ.ಆರ್. ಪ್ರಕಾಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

