ಮೈಸೂರು

'ಟೈಟಲ್‌ಡೀಡ್ ಪಡೆಯಲು ನಿಯಮಾವಳಿ'

Published On :

ಕ.ಪ್ರ.ವಾರ್ತೆ ಮೈಸೂರು ಮಾ.26
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ನಿಯಮದನ್ವಯ ನಿವೇಶನದಾರರಿಗೆ ಟೈಟಲ್ ಡೀಡ್ ಪಡೆಯಲು ಅನುಕೂಲವಾಗುವಂತೆ ಸರ್ಕಾರ 1991ರ ನಿಯಮ 20ಕ್ಕೆ ತಿದ್ದುಪಡಿ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಹೇಳಿದರು.
1991ರ ವಸತಿ ನಿವೇಶನ ಹಂಚಿಕೆ ನಿಯಮದ ಪ್ರಕಾರ 10 ವರ್ಷ ಲೀಸ್ ಕಮ್ ಸೇಲ್ ಪ್ರಕಾರ ನಿವೇಶನದಲ್ಲಿ ಮನೆ ನಿರ್ಮಿಸಿದ ಮೇಲೆ ಟೈಟಲ್ ಡೀಡ್ ಕೊಡಲು ಮಾತ್ರ ಅವಕಾಶ ಇತ್ತು. 2001ರಲ್ಲಿ ಸರ್ಕಾರ ಹತ್ತು ವರ್ಷ ಲೀಸ್ ಕಮ್ ಸೇಲ್ ರದ್ದುಪಡಿಸಿ, ಟೈಟಲ್ ಡೀಡ್ ನೀಡಬಹುದು ಎಂದು ಆದೇಶಿಸಿತ್ತು.
2005ರ ನಂತರ 1991ರ ನಿಯಮದಂತೆ ಮುಂದುವರಿಸಲು ಆದೇಶಿಸಿತು. ಈ ಐದು ವರ್ಷಗಳಲ್ಲಿ ಶೇ. 80ರಷ್ಟು ಮಂದಿ ಮಾತ್ರ ಟೈಟಲ್ ಡೀಡ್ ಪಡೆದಿದ್ದಾರೆ. ಉಳಿಕೆ ನಿವೇಶನದಾರರು ಟೈಟಲ್ ಡೀಡ್ ಪಡೆದಿಲ್ಲ. ಅಲ್ಲದೆ, ಮೂಲ ಸೌಲಭ್ಯ ಇಲ್ಲದ ಕಡೆಗಳಲ್ಲಿ ಅವಧಿ ಮುಗಿದರೂ ಮನೆ ನಿರ್ಮಿಸದವರು ಮತ್ತು ನೋಂದಣಿ ಮಾಡಿಸಿಕೊಳ್ಳದವರು ಈಗ ಸರ್ಕಾರ ವಿಧಿಸಿರುವ ಷರತ್ತಿನ ಅನ್ವಯ ಟೈಟಲ್ ಡೀಡ್ ಪಡೆಯಬಹುದು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ವ್ಯಾಪ್ತಿಗೆ ಎಂಡಿಎಯಿಂದ 1991ರಿಂದ 2003 ರವರೆಗೆ ವಿತರಿಸಿರುವ ಸುಮಾರು 34,861 ನಿವೇಶನಗಳ ಪೈಕಿ ಶೇ. 20ರಷ್ಟು ಒಳಪಟ್ಟಿದೆ ಎಂದು  ಅವರು ವಿವರಿಸಿದರು.
ಎಂಡಿಎ ಅಧ್ಯಕ್ಷ ಎಲ್. ನಾಗೇಂದ್ರ, ಬಿಜೆಪಿ ನಗರಾಧ್ಯಕ್ಷ ಶಿವಕುಮಾರ್ ಇದ್ದರು.
ನೀರು ಮಿತ ಬಳಕೆಗೆ ಮನವಿ: ಕೃಷ್ಣರಾಜ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವುದರಿಂದ ನೀರನ್ನು ಮಿತವಾಗಿ ಬಳಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಮನವಿ ಮಾಡಿದ್ದಾರೆ.
ರಂಗಾಯಣ ವಿವಾದ: ರಂಗಾಯಣ ನಿರ್ದೇಶಕ ಬಿ.ವಿ. ರಾಜಾರಾಂ ಅವರ ವಜಾಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ವಜಾ ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಮನವಿ ಮಾಡಿದ್ದೇನೆ ಎಂದು ರಾಮದಾಸ್ ತಿಳಿಸಿದರು.
ಜಿಲ್ಲೆಯಲ್ಲಿ ಬಿಜೆಪಿಗೆ 5 ಸ್ಥಾನ ನಿರೀಕ್ಷೆ: ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಪಕ್ಷದ ಚುನಾವಣಾ ಉಸ್ತುವಾರಿಯನ್ನು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರಿಗೆ ನೀಡಲಾಗಿದೆ.
ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಸಿದ್ಧಗೊಳಿಸಲಾಗುತ್ತಿದ್ದು, ಒಂದೆರಡು ದಿನಗಳಲ್ಲಿ ಕೇಂದ್ರದ ವರಿಷ್ಠರ ಅನುಮತಿ ಪಡೆದು ಬಿಡುಗಡೆ ಮಾಡಲಾಗುವುದು. ಜಿಲ್ಲೆಯಲ್ಲಿ ಒಟ್ಟು 5 ಸ್ಥಾನ ಗಳಿಸುವ ವಿಶ್ವಾಸ ನಮಗಿದೆ ಎಂದು ರಾಮದಾಸ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.