ನಂಜನಗೂಡಿನಲ್ಲಿ ಯಾರಿಗೆ ಜೇನು?
ಮೈಸೂರು: ನಂಜನಗೂಡು ವಿಧಾನಸಭಾ ಕ್ಷೇತ್ರ ಮೊದಲ ಚುನಾವಣೆಯಿಂದಲೂ ಅಸ್ತಿತ್ವದಲ್ಲಿದೆ. ಮೊದಲ ಚುನಾವಣೆಯಲ್ಲಿ ದ್ವಿಸದಸ್ಯ ಕ್ಷೇತ್ರವಾಗಿತ್ತು. ಬಿಳಿಗೆರೆ ಕ್ಷೇತ್ರ ರಚನೆಯ ನಂತರ ಏಕಸದಸ್ಯ ಸಾಮಾನ್ಯ ಕ್ಷೇತ್ರವಾಯಿತು. ಕ್ಷೇತ್ರ ಪುನರ್ ವಿಂಗಡಣೆಯ ಪರಿಣಾಮ 2008 ರಿಂದ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದೆ.
ಈ ಕ್ಷೇತ್ರದಲ್ಲಿ ವೀರಶೈವರು ಹಾಗೂ ಪರಿಶಿಷ್ಟರ ಪ್ರಾಬಲ್ಯ. ಕ್ಷೇತ್ರವನ್ನು ಲಿಂಗಾಯಿತೇತರರಾದ ರಾಚಯ್ಯ, ಮಹದೇವಯ್ಯ, ಶ್ರೀಕಂಠಯ್ಯ, ಡಿ.ಟಿ. ಜಯಕುಮಾರ್ ಕೂಡ ಪ್ರತಿನಿಧಿಸಿದ್ದಾರೆ. ಕಳೆದ ಚುನಾವಣೆವರೆಗೆ ಸಾಂಪ್ರದಾಯಿಕ ಎದುರಾಳಿಗಳಾದ ಎಂ. ಮಹದೇವ್ ಹಾಗೂ ಡಿ.ಟಿ. ಜಯಕುಮಾರ್ ಅವರು ಸರದಿಯ ಮೇಲೆ ಗೆಲ್ಲುತ್ತಿದ್ದರು.
1972 ಮತ್ತು 1978 ರಲ್ಲಿ ಗೆದ್ದಿದ್ದ ಕೆ.ಬಿ. ಶಿವಯ್ಯ ಅವರು ಡಿ. ದೇವರಾಜ ಅರಸು ಸಂಪುಟದಲ್ಲಿ ರೇಷ್ಮೆ ಖಾತೆಯ ಸಚಿವರಾಗಿದ್ದರು.
1972ರಿಂದ 1983 ರವರೆಗೆ ಸತತವಾಗಿ ಲಿಂಗಾಯಿತರು ಗೆದ್ದಿದ್ದ ಈ ಕ್ಷೇತ್ರದಲ್ಲಿ 1985ರಲ್ಲಿ ನಾಯಕ ಸಮಾಜದ ಡಿ.ಟಿ. ಜಯಕುಮಾರ್ ಆಯ್ಕೆಯಾದರು. 1985ರಲ್ಲಿ ಎಂ. ಮಹದೇವ್ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿ, ಹೆಜ್ಜಿಗೆ ಲಿಂಗಣ್ಣ ಅವರಿಗೆ ನೀಡಲಾಗಿತ್ತು.
1989ರಲ್ಲಿ ಮತ್ತೆ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿದ ಎಂ. ಮಹದೇವ್ ಎರಡನೇ ಬಾರಿಗೆ ಗೆದ್ದರು. 1994ರಲ್ಲಿ ಜನತಾದಳದ ಡಿ.ಟಿ. ಜಯಕುಮಾರ್ 2ನೇ ಬಾರಿಗೆ ಗೆದ್ದು, ಸಚಿವರಾದರು. 1999 ರಲ್ಲಿ ಕಾಂಗ್ರೆಸ್ನ ಎಂ. ಮಹದೇವ್ 3ನೇ ಬಾರಿಗೆ ಗೆದ್ದು, ಎಸ್.ಎಂ. ಕೃಷ್ಣ ಸಂಪುಟದಲ್ಲಿ ಸಚಿವರಾಗಿ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ನಿರ್ವಹಿಸಿದರು. 2004 ರಲ್ಲಿ ಡಿ.ಟಿ. ಜಯಕುಮಾರ್ 3ನೇ ಬಾರಿಗೆ ಗೆದ್ದು, ಮತ್ತೆ ಸಚಿವರಾದರು. ಉಡುಪಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು.
ನಂಜನಗೂಡು ತಾಲೂಕು ಈ ಹಿಂದೆ ಟಿ. ನರಸೀಪುರ ಹಾಗೂ ಸಂತೇಮರಹಳ್ಳಿ ಕ್ಷೇತ್ರಗಳಲ್ಲಿ ಹರಿದು ಹಂಚಿ ಹೋಗಿತ್ತು. ಈಗಲೂ ಕೂಡ ನಂಜನಗೂಡು ಹಾಗೂ ವರುಣ ಕ್ಷೇತ್ರಗಳಲ್ಲಿ ಹಂಚಿ ಹೋಗಿದೆ. ಕಳೆದ ಬಾರಿ ಪ.ಜಾತಿಯ ಮೀಸಲು ಕ್ಷೇತ್ರವಾಗಿ ಪರಿವರ್ತನೆಯಾದ ನಂತರ ಎಂ. ಮಹದೇವ್ ಅವರು ಪಕ್ಕದ ಚಾಮರಾಜನಗರಕ್ಕೆ ವಲಸೆ ಹೋಗಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತರು. ಈಗ ಜೆಡಿಎಸ್ನಲ್ಲಿದ್ದಾರೆ. ಡಿ.ಟಿ. ಜಯಕುಮಾರ್ ಕೂಡ ಪಕ್ಕದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ವಲಸೆ ಹೋಗಿ, ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತರು. ಚುನಾವಣೆಯ ನಂತರ ಅನಾರೋಗ್ಯದಿಂದ ನಿಧನರಾದರು.
ಕಾಂಗ್ರೆಸ್ ಅಭ್ಯರ್ಥಿ: ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು 1980, 1984, 1989, 1991 ಹಾಗೂ 1999- ಹೀಗೆ ಐದು ಬಾರಿ ಪ್ರತಿನಿಧಿಸಿದ್ದ, 1996 ಹಾಗೂ 1998ರಲ್ಲಿ ಸೋತಿದ್ದ, ಕೇಂದ್ರದಲ್ಲಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರೂ ಕೂಡ ಆಗಿದ್ದ ಮೈಸೂರು ಭಾಗದ ಹಿರಿಯ ರಾಜಕಾರಣಿ ವಿ. ಶ್ರೀನಿವಾಸಪ್ರಸಾದ್ ಅವರು ರಾಜ್ಯ ರಾಜಕಾರಣಕ್ಕೆ ಮರಳಿ, ಕಾಂಗ್ರೆಸ್ ಅಭ್ಯರ್ಥಿಯಾಗಿ, ಬಿಜೆಪಿಯ ಎಸ್. ಮಹದೇವಯ್ಯ ಅವರ ಎದುರು ಅಲ್ಪಮತಗಳಿಂದ ಜಯಗಳಿಸಿದ್ದರು. ಈ ಬಾರಿ ಕೂಡ ಅವರೇ ಕಾಂಗ್ರೆಸ್ ಅಭ್ಯರ್ಥಿ. ಎಸ್. ಮಹದೇವಯ್ಯ ಈ ಬಾರಿ ಕೆಜೆಪಿಯಿಂದ ಕಣಕ್ಕಿಳಿಯುತ್ತಿದ್ದಾರೆ. ಜೆಡಿಎಸ್ನಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಕಳಲೆ ಕೇಶವಮೂರ್ತಿ ಹುರಿಯಾಳು. ಬಿಜೆಪಿಯಿಂದ ಜಿಪಂ ಮಾಜಿ ಉಪಾಧ್ಯಕ್ಷ ಡಾ. ಶಿವರಾಂ ಸ್ಪರ್ಧಿಸುತ್ತಿದ್ದಾರೆ.
ಬಿಜೆಪಿ ಪರಿಸ್ಥಿತಿ: ಈ ಬಾರಿ ಬಿಜೆಪಿ ಇಬ್ಭಾಗವಾಗಿರುವುದರಿಂದ ಶ್ರೀನಿವಾಸಪ್ರಸಾದ್ ಅವರಿಗೆ ಕಳೆದ ಬಾರಿಯಷ್ಟು ತ್ರಾಸವಾಗದು. ಆದರೆ, ಕಳೆದ ಬಾರಿ ಬಿಜೆಪಿ ಪರ ಇದ್ದ ಮಾಜಿ ಸಚಿವ ಹಾಗೂ ಈ ಕ್ಷೇತ್ರದ ಮಾಜಿ ಪ್ರತಿನಿಧಿ ಎಂ. ಮಹದೇವ್ ಅವರು ಕೇಶವಮೂರ್ತಿ ಅವರ ಪರ ಬಿರುಸಿನ ಪ್ರಚಾರ ನಡೆಸುತ್ತಿರುವುದರಿಂದ ಯಾರು ಯಾವ ಸ್ಥಾನಗಳಿಗೆ ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
- ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

