ಮೈಸೂರು

ಬರ ಪರಿಹಾರ ನೀಡಲು ಕುರುಬೂರು ಒತ್ತಾಯ

Published On :

ಕ.ಪ್ರ.ವಾರ್ತೆ ಮೈಸೂರು ಮಾ.26
ಕಳೆದ ಒಂದೂವರೆ ವರ್ಷದಲ್ಲಿ ಬರದ ಛಾಯೆಯಿಂದ ತತ್ತರಿಸಿ ಹೋಗಿರುವ ರೈತ ಕೃಷಿ ಮಾಡಿ ಕೈ ಸುಟ್ಟುಕೊಂಡಿದ್ದಾನೆ. ಕಾವೇರಿ ಕೊಳ್ಳದ ಭೂಭಾಗದಲ್ಲಿ ಹೆಚ್ಚು ನಷ್ಟವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ತಮಿಳುನಾಡು ಮಾದರಿಯಲ್ಲಿ ರೈತರಿಗೆ ಪ್ರತಿ ಎಕರೆಗೆ 15 ಸಾವಿರ ಪರಿಹಾರ ನೀಡುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ಮಂಗಳವಾರ ಮೈಸೂರಿನಲ್ಲಿ ನಡೆದ ಕಬ್ಬು ಬೆಳೆಗಾರರ ಸಂಘದ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಮಾತನಾಡಿ, ರೈತನ ಸ್ಥಿತಿ ಚಿಂತಾಜನಕವಾಗಿದೆ. ಅಸಮರ್ಪಕ ವಿದ್ಯುತ್ ಪೂರೈಕೆ, ಬಾವಿಗಳಲ್ಲಿ ಜಲ ಬತ್ತಿ ಹೋಗಿರುವುದು, ಬೆಳೆದ ಬೆಳೆ ಕೈಗೆ ಬಾರದಿರುವ ಸಮಸ್ಯೆಗಳಿಂದ ರೈತ ಕಂಗಾಲಾಗಿದ್ದಾನೆ. ಆದರೆ, ವಿವಿಧ ಪಕ್ಷಗಳ ಮುಖಂಡರು ಚುನಾವಣೆಗೆ ಸಿದ್ಧವಾಗುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ನಮ್ಮನ್ನು ಆಳಿದ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿ ರೈತರಿಗೆ ಮೋಸ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಷ್ಟ್ರೀಯ ಸಮಾವೇಶ: ಮೇ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಕಬ್ಬು ಬೆಳೆಗಾರರ ರಾಷ್ಟ್ರೀಯ ಸಮಾವೇಶ ಏರ್ಪಡಿಸಲು ಉದ್ದೇಶಿಸಿದ್ದು, ರಾಷ್ಟ್ರದ ಕಬ್ಬು ಬೆಳೆಯುವ ರಾಜ್ಯಗಳಿಂದ ರೈತ ಪ್ರತಿನಿಧಿಗಳು ಭಾಗವಹಿಸುವರು. ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಹಣ ಬಿಡುಗಡೆ ಮಾಡಲು ಒತ್ತಾಯಿಸಲಾಗುವುದು. ಹಾಗೆ ಕಬ್ಬು ದರ ನಿಗದಿ ಮಂಡಳಿ ರಚನೆಗೆ ವಿಧೇಯಕ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದ್ದು, ಮಂಡಳಿಯಲ್ಲಿ ರೈತ ಪ್ರತಿನಿಧಿಗಳನ್ನು ಸೇರಿಸಿಕೊಳ್ಳುವಂತೆ ಶಾಂತಕುಮಾರ್ ಆಗ್ರಹಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಪಟೇಲ್, ಖಜಾಂಚಿ ಎಂ.ಬಿ. ಚೇತನ್, ಪದಾಧಿಕಾರಿಗಳಾದ ನಿಜಗುಣ ಕೆಲಗೇರಿ, ಪ್ಯಾಟಿ ಜಮ್ಮಣ್ಣ, ವೀರಣ್ಣ ಭದ್ರಾವತಿ, ವಿಠ್ಠಲ ಬಿ. ಗಣಚಾರಿ, ದೇವಕುಮಾರ್ ಶಿವಮೊಗ್ಗ, ಭಾಗ್ಯರಾಜ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.