ಆದಿಚುಂಚನಗಿರಿ ಸಂಸ್ಥೆಗೆ ಉತ್ತಮ ಫಲಿತಾಂಶ
ಕ.ಪ್ರ.ವಾರ್ತೆ ಎಚ್.ಡಿ. ಕೋಟೆ ಮೇ 16
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಪರೀಕ್ಷೆಯಲ್ಲಿ ಹುಣಸೂರು- ಬೇಗೂರು ರಸ್ತೆಯಲ್ಲಿರುವ ಆದಿಚುಂಚನಗಿರಿ ವಿದ್ಯಾಸಂಸ್ಥೆಯು ಉತ್ತಮ ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳನ್ನು ಕಾಲೇಜು ಪ್ರಾಂಶುಪಾಲ ಎಸ್.ಪಿ. ಪ್ರಕಾಶ್ ಹಾಗೂ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ನಂದಿನಿ ಅಭಿನಂದಿಸಿದ್ದಾರೆ.
ಸಂಸ್ಥೆಯಲ್ಲಿ 2007- 08ನೇ ಸಾಲಿನಲ್ಲಿ ಪ್ರಥಮವಾಗಿ ಎಸ್ಸೆಸ್ಸೆಲ್ಸಿ ತರಗತಿಯು ಆರಂಭವಾಗಿದ್ದು, ಅಂದಿನಿಂದ ಈ ಸಾಲಿನವರೆಗೂ ಶಾಲೆಯಲ್ಲಿ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಮುಖ್ಯೋಪಾಧ್ಯಾಯಿನಿ ನಂದಿನಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
2010-11, 2011-12, 2012-13ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಶೇ. 100 ಫಲಿತಾಂಶ ತಂದುಕೊಟ್ಟಿರುವುದಾಗಿ ತಿಳಿಸಿದರು. 2012- 13ನೇ ಸಾಲಿನಲ್ಲಿ ಒಟ್ಟು 51 ಮಂದಿ ಪರೀಕ್ಷೆ ಬರೆದಿದ್ದು, ಅದರಲ್ಲಿ ಎಚ್.ಆರ್. ಶಶಾಂಕ್ 590 ಹಾಗೂ ಕಿರಣ್ 541 ಅಂಕಗಳೊಂದಿಗೆ ಅತ್ಯನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರೆ. ಉಳಿದಂತೆ 37 ಮಂದಿ ಪ್ರಥಮ ದರ್ಜೆಯಲ್ಲಿಯೂ, 11 ಮಂದಿ ದ್ವಿತೀಯ ದರ್ಜೆಯಲ್ಲಿಯೂ ಹಾಗೂ ಒಬ್ಬ ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿರುವುದಾಗಿ ತಿಳಿಸಿದರು.
ಕಾಲೇಜು ವಿಭಾಗದ ಪ್ರಾಂಶುಪಾಲರಾದ ಪ್ರಕಾಶ್ ಮಾತನಾಡಿ, ಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ 1997ರಲ್ಲಿ ಪ್ರಥಮವಾಗಿ ಕಲಾ ವಿಭಾಗ ಆರಂಭಿಸಲಾಗಿದ್ದು, ಪ್ರತಿವರ್ಷವೂ ಕಾಲೇಜಿನ ವಿದ್ಯಾರ್ಥಿಗಳು ಉತ್ತಮವಾದ ಸಾಧನೆ ಮಾಡುತ್ತಾ ಬಂದಿರುವುದಾಗಿ ತಿಳಿಸಿದರು.
ತಾಲೂಕಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ವಿದ್ಯಾವಂತರನ್ನಾಗಿ ಮಾಡುವ ಸಲುವಾಗಿ ದಿ. ಬಾಲಗಂಗಾಗಧರನಾಥ ಸ್ವಾಮೀಜಿ ತಾಲೂಕು ಕೇಂದ್ರದಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದ್ದು, ಅವರ ಮಾರ್ಗದರ್ಶದಲ್ಲಿ ಸಂಸ್ಥೆಯು ಉತ್ತಮವಾದ ದಾರಿಯಲ್ಲಿ ಸಾಗುತ್ತಿದ್ದು, ಈ ಸಾಲಿನ ದ್ದಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಸಾಲಿನಲ್ಲಿ ಶೇ. 92 ಫಲಿತಾಂಶ ಲಭ್ಯವಾಗಿದ್ದು, ರವಿ ಎಂಬಾತ ಕಲಾ ವಿಭಾಗದಲ್ಲಿ 600ಕ್ಕೆ 526 ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ. ಈ ಸಾಲಿನಲ್ಲಿ ಒಟ್ಟು 182 ಮಂದಿ ಪರೀಕ್ಷೆಗೆ ಕುಳಿತಿದ್ದು, ಅದರಲ್ಲಿ 151 ಮಂದಿ ತೇರ್ಗಡೆಯಾಗಿರುವುದರ ಜೊತೆಗೆ ಮಂಜುನಾಥ್ ಕೆ. ಗೌಡ 457 ಅಂಕದೊಂದಿಗೆ ಶೇ. 76 ವಿಜ್ಞಾನ ವಿಭಾಗದಲ್ಲಿ ತೇರ್ಗಡೆಯಾಗಿರುವುದಾಗಿ ತಿಳಿಸಿದ್ದಾರೆ. ತಮ್ಮ ಸಂಸ್ಥೆಯು ಉತ್ತಮ ಫಲಿಂತಾಂಶ ದೊರಕಲು ಸಂಸ್ಥೆಯ ಜೊತೆಗೆ ಸಹಕರಿಸಿದ ಪೋಷಕರು, ಶಿಕ್ಷಕ, ಉಪನ್ಯಾಸಕ ವೃಂದದವರಿಗೆ ಮಠದ ಸ್ವಾಮೀಜಿ ಅಭಿನಂದಿಸಿದ್ದಾರೆ.
ಎನ್ಎಸ್ಎಸ್ ಶಿಬಿರ ಪ್ರಾರಂಭ
ಕ.ಪ್ರ.ವಾರ್ತೆ ಮೈಸೂರು ಮೇ 16
ಶಾರದಾ ವಿಲಾಸ ಔಷಧ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಟಿ. ನರಸೀಪುರ ತಾಲೂಕು ವ್ಯಾಸರಾಜಪುರ ಗ್ರಾಮದಲ್ಲಿ ಮೇ 16 ರಿಂದ 22 ರವರೆಗೆ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ನಡೆಯಲಿದೆ.
17 ರಂದು ಬೆಳಗ್ಗೆ 9 ಕ್ಕೆ ಸೋಸಲೆ ಗ್ರಾಪಂ ಅಧ್ಯಕ್ಷ ಅಣ್ಣಯ್ಯಸ್ವಾಮಿ ಶಿಬಿರ ಉದ್ಘಾಟಿಸುವರು. ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ ಅಧ್ಯಕ್ಷತೆ ವಹಿಸುವರು. ಗೌರವ ಕಾರ್ಯದರ್ಶಿ ಎಸ್. ರವಿಶಂಕರ್, ವ್ಯಾಸರಾಜಪುರದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಧ್ಯಾಯಿನಿ ಶೋಭಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಶಾರದ ವಿಲಾಸ ಔಷಧ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ. ಜೋಷಿ ಹನುಮಂತಚಾರ್ ಪ್ರಾಸ್ತಾವಿಕ ನುಡಿಗಳಾಡುವರು.
18ರಂದು ಬೆಳಗ್ಗೆ 10 ಕ್ಕೆ ಕೆ.ಆರ್. ಆಸ್ಪತ್ರೆ ರಕ್ತನಿಧಿ ವಿಭಾಗದಿಂದ ರಕ್ತದಾನ ಶಿಬಿರ ಹಾಗೂ ವಾಸನ್ ಕಣ್ಣಿನ ಆಸ್ಪತ್ರೆಯಿಂದ ಕಣ್ಣಿನ ಉಚಿತ ತಪಾಸಣಾ ಶಿಬಿರ ಏರ್ಪಡಿಸಿದ್ದು, ಈ ಕಾರ್ಯಕ್ರಮವನ್ನು ವ್ಯಾಸರಾಜಪುರ ಪ್ರಾಥಮಿಕ ಕೇಂದ್ರದ ಡಾ. ಮಂಜುಪ್ರಸಾದ್ ಉದ್ಘಾಟಿಸುವರು.
19 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರಗೆ ವೈದ್ಯಕೀಯ ಉಚಿತ ತಪಾಸಣಾ ಶಿಬಿರ ನಡೆಯಲಿದೆ. ಮಧ್ಯಾಹ್ನ 3ಕ್ಕೆ ನಡೆಯಲಿರುವ ಸಮಾರೋಪದಲ್ಲಿ ಶಾರದಾ ವಿಲಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ, ಗೌರವ ಕಾರ್ಯದರ್ಶಿ ಎಸ್. ರವಿಶಂಕರ್, ಕೆ.ಆರ್.ಆಸ್ಪತ್ರೆಯ ಡಾ. ಧರ್ಮೇಂದ್ರ, ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ನಾಗರಾಜ್ ಮತ್ತಿತರರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. 20, 21 ಹಾಗೂ 22 ರಂದು ಕಾಲೇಜಿನ ವಿದ್ಯಾರ್ಥಿಗಳು ವ್ಯಾಸರಾಜಪುರದ ನಿವಾಸಿಗಳಿಗೆ ಅಪೌಷ್ಟಿಕತೆ ಆರೋಗ್ಯ ತಪಾಸಣಾ ಶಿಬಿರ ನಡೆಸಿಕೊಡುವರು ಎಂದು ಪ್ರಾಂಶುಪಾಲ ಡಾ.ಕೆ. ಜೋಷಿ ಹುನುಮಂತಚಾರ್ ತಿಳಿಸಿದ್ದಾರೆ.
ಮಂಜುನಾಥ್ಗೆ ಸಚಿವ ಸ್ಥಾನಕ್ಕೆ ಆಗ್ರಹ
ಹುಣಸೂರು: ಕ್ಷೇತ್ರದಲ್ಲಿ ಸತತವಾಗಿ ಅತ್ಯಧಿಕ ಮತಗಳಿಂದ ಎರಡು ಬಾರಿ ಶಾಸಕರಾಗಿ, ಜನಮನ್ನಡೆ ಗಳಿಸಿರುವ ಶಾಸಕ ಎಚ್.ಪಿ. ಮಂಜುನಾಥ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಕುರುಬ, ಅಲ್ಪಸಂಖ್ಯಾತ, ಹಿಂದುಳಿದ, ದಲಿತ, ಒಕ್ಕಲಿಗ ಸಮಾಜಗಳ ಮುಖಂಡರು ಪ್ರತ್ಯೇಕ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಉತ್ತಮ ಸರಳ, ಸಜ್ಜನಿಕೆ ವ್ಯಕ್ತಿಯುಳ್ಳ ಶಾಸಕ ಮಂಜುನಾಥ್ ರಾಜ್ಯದಲ್ಲೆ ಅಲ್ಪ ಸಂಖ್ಯೆಯುಳ್ಳ ಜಾತಿಯಿಂದ ಬಂದರೂ, ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದು ಸರ್ಕಾರದ ಅನುದಾನ ಕಾಯದೆ ವೈಯಕ್ತಿಕ ಹಣ ನೀಡಿ ಜನರ ಸೇವೆ ಮಾಡಿರುವ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಮತ್ತು ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.
ಹುಣಸೂರು ಉಪವಿಭಾಗದ ಸುತ್ತಮುತ್ತ ಕ್ಷೇತ್ರಗಳಲ್ಲಿ ಜೆಡಿಎಸ್ ಭದ್ರಕೋಟೆ ಇರುವುದರಿಂದ ಹುಣಸೂರು ಕ್ಷೇತ್ರ ಮತ್ತು ಜಲ್ಲೆಯ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಕನಕ ಯುವ ಸೇನೆ ಗೌರವಾಧ್ಯಕ್ಷ ಧರ್ಮಾಪುರ ರಮೇಶ್, ತಾಪಂ ಮಾಜಿ ಸದಸ್ಯ ಹಾಗೂ ಮುಸ್ಲಿಂ ಸಂಘಟನೆ ಮುಖಂಡ ರತ್ನಪುರಿ ಅಜ್ಗಾರಪಾಷಾ, ತಾಪಂ ಮಾಜಿ ಸದಸ್ಯ ಕೆ. ದೇವರಾಜು, ದಲಿತ ಸಮುದಾಯದ ಮುಖಂಡ ಬಿಳಿಕೆರೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಸ್ವಾಳು ರಮೇಶ್, ಪುರಸಭೆ ಸದಸ್ಯ ಶಿವರಾಜು, ಮುಖಂಡರಾದ ಶ್ರೀನಿವಾಸ್, ಕಿಟ್ಟಪ್ಪ, ಎ.ಪಿ. ಸ್ವಾಮಿ ಪ್ರತ್ಯೇಕ ಹೇಳಿಕೆಯಲ್ಲಿ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

