ಮತದಾರರ ಆಶಯಕ್ಕೆ ತಕ್ಕಂತೆ ಕೆಲಸ: ಸಾ.ರಾ.ಮಹೇಶ್
ಕ.ಪ್ರ.ವಾರ್ತೆ ಕೆ.ಆರ್. ನಗರ ಮೇ 16
ಕ್ಷೇತ್ರದ ಮತದಾರರು ನನ್ನ 5 ವರ್ಷಗಳ ಸೇವೆ ಪರಿಗಣಿಸಿ ಮತ್ತೆ ಎರಡನೆಯ ಬಾರಿಗೆ ಪುನರಾಯ್ಕೆ ಮಾಡಿದ್ದು, ಇದರಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಮುಂದೆ ಮತದಾರರ ಆಶಯಕ್ಕೆ ತಕ್ಕಂತೆ ಕೆಲಸ ಮಾಡುವುದರ ಜತೆಗೆ, ತಾಲೂಕಿನ ಸಮಗ್ರ ಅಭಿವೃದ್ಧಿಗೆ ದುಡಿಯುತ್ತೇನೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಚುನಾವಣೆ ಘೋಷಣೆಯಾದ ದಿನದಿಂದಲೇ ಹೇಳಿದಂತೆ ತಾಲೂಕಿನಲ್ಲಿ ಧರ್ಮ ಮತ್ತು ಕುತಂತ್ರ ರಾಜಕಾರಣದ ವಿರುದ್ಧ ಚುನಾವಣೆ ನಡೆದು ಅಂತಿಮವಾಗಿ ಜನರು ಧರ್ಮಕ್ಕೆ ಜಯ ಕಲ್ಪಿಸಿದರು. ಇದು ಐತಿಹಾಸಿಕ ವಿಜಯ ಎಂದು ಸುದ್ದಿಗೋಷ್ಠಿಯಲ್ಲಿ ಶಾಸಕರು ಬಣ್ಣಿಸಿದರು.
ನನ್ನ ವಿರುದ್ಧ ಸಕ್ಕರೆ ಮಾರಿ ಅಕ್ಕಿ ನೀಡಿರುವುದು, ಲಂಚ ಪಡೆದಿರುವುದು ಸೇರಿದಂತೆ ಎಂಟು ಗಂಭೀರ ಆರೋಪಗಳನ್ನು ಸಂಸದರು ಮಾಡಿದ್ದಾರೆ. ಶೀಘ್ರದಲ್ಲಿಯೇ ಮತದಾರರ ಮತ್ತು ಕಾರ್ಯಕರ್ತರ ಅಭಿನಂದನಾ ಸಭೆಯನ್ನು ಪಟ್ಟಣದ ಬಯಲು ರಂಗ ಮಂದಿರದಲ್ಲಿ ಕರೆಯಲಿದ್ದು, ಅಲ್ಲಿ ಸಂಸದರ ಆರೋಪಗಳಿಗೆ ಬಹಿರಂಗವಾಗಿ ಉತ್ತರಿಸಲಿದ್ದೇನೆ ಎಂದ ಅವರು, ನಾನು ಭ್ರಷ್ಟನೋ, ಪ್ರಾಮಾಣಿಕನೋ ಎಂಬದನ್ನು ತಾಲೂಕಿನ ಮತದಾರ ಪ್ರಭುಗಳು ಮೇ 8 ರಂದೇ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
ಸಂಸದರು ಮಾಡಿರುವ 8 ಆರೋಪಗಳಲ್ಲಿ ಒಂದನ್ನು ಕಪ್ಪಡಿ ಕ್ಷೇತ್ರಕ್ಕೆ ಬಂದು ಅವರಿಗೆ ಆತ್ಮಸಾಕ್ಷಿ ಇದ್ದರೆ ಪ್ರಮಾಣ ಮಾಡಿ ಸಾಬೀತುಪಡಿಸಲಿ. ಅಂದೇ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ. ನನ್ನ ವಿರುದ್ಧದ ಆರೋಪ ಸಾಬೀತು ಮಾಡಲು ವಿಫಲವಾದಲ್ಲಿ ಎಚ್. ವಿಶ್ವನಾಥ್ ರಾಜಕೀಯ ಸನ್ಯಾಸ ಸ್ವೀಕರಿಸಬೇಕು. ಇದಕ್ಕೆ ಅವರು ಸಿದ್ಧರಿದ್ದಾರೆಯೇ ಎಂದು ಸವಾಲು ಹಾಕಿದರು.
ಸಂಸದ ಎಚ್. ವಿಶ್ವನಾಥ್ ಅವರ ಬಗ್ಗೆ ನನಗೆ ಅಪಾರ ಗೌರವವಿತ್ತು. ಆದರೆ, ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಚಾರ ಮಾಡುವಾಗ ಅವರು ಆಡಿದ ಮಾತುಗಳು ಮತ್ತು ನಡೆದುಕೊಂಡ ರೀತಿಯಿಂದ ಇದ್ದ ಗೌರವವೂ ದೂರವಾಗಿದೆ. ಓರ್ವ ಸಂಸದರಿಗಿರಬೇಕಾದ ಕನಿಷ್ಠ ತಿಳಿವಳಿಕೆ ಹಾಗೂ ನಡತೆ ಅವರಲ್ಲಿಲ್ಲ. ಗ್ರಾಪಂ ಸದಸ್ಯರಂತೆ ವರ್ತಿಸುವ ಸಂಸದರ ವರ್ತನೆ ನಾಚಿಕೆಗೇಡಿನದು ಎಂದು ಟೀಕಿಸಿದರು.
ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದ ನಂತರ ವಿರೋಧಿಗಳ ಟೀಕೆ ಅಪಪ್ರಚಾರಕ್ಕೆ ಕಿವಿಗೊಡದೆ ನನ್ನ ಪಾಡಿಗೆ ಕ್ಷೇತ್ರದ ಅಭಿವೃದ್ಧಿಪಡಿಸಿ ಮತದಾರರ ಸಂಕಷ್ಟಗಳಿಗೆ ಸ್ಪಂದಿಸಿದ್ದೇನೆ. ಇದಕ್ಕೆ ಜನರು ನನಗೆ ಉತ್ತಮ ಸರ್ಟಿಫಿಕೆಟ್ ನೀಡಿದ್ದಾರೆ. ಇನ್ನೊಬ್ಬರ ಟೀಕೆ, ಆರೋಪಗಳಿಗೆ ನಾನು ಗಮನ ಹರಿಸುವುದಿಲ್ಲ. ನನ್ನ ಆದ್ಯತೆ ಅಭಿವೃದ್ಧಿಯೆಡೆಗೆ ಮಾತ್ರ ಎಂದು ಹೇಳಿದರು.
ಬಿಪಿಎಲ್ ಪಡಿತರದಾರರಿಗೆ ಪ್ರತಿ ಕೆಜಿಗೆ ಒಂದು ರು.ನಂತೆ ಕಾರ್ಡ್ಗೆ 30 ಕೆಜಿ ಅಕ್ಕಿ ನೀಡುವ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಮಾಜದ ಕಟ್ಟ ಕಡೆಯ ವ್ಯಕ್ತಿಯಿಂದ ಶ್ರೀಮಂತನವರೆಗೂ ಆಹಾರ, ಆರೋಗ್ಯ, ಶಿಕ್ಷಣ ಉಚಿತವಾಗಿ ದೊರೆಯಬೇಕು. ಆಗ ಮಾತ್ರ ಸಮಾನತೆಯ ಸಮಾಜ ನಿರ್ಮಿಸಿ ಸವಲತ್ತನ್ನು ಸಮರ್ಪಕವಾಗಿ ನೀಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಮೇ 28ರಂದು ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೆ. ಮಹದೇವ್ ಜಯಭೇರಿ ಬಾರಿಸಲಿದ್ದು, ಪಕ್ಷದ ವತಿಯಿಂದ ವ್ಯವಸ್ಥಿತವಾಗಿ ಪ್ರಚಾರ ಮಾಡಲು ಪಕ್ಷ ಯೋಜನೆ ರೂಪಿಸಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಇತರ ಮುಖಂಡರು ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪಕ್ಷದ ತಾಲೂಕು ಅಧ್ಯಕ್ಷ ಚಂದ್ರಶೇಖರ್, ನಗರಾಧ್ಯಕ್ಷ ಡಿ.ಸಿ. ಮಂಜುನಾಥ್, ವಕ್ತಾರ ಕೆ.ಎಲ್. ರಮೇಶ್, ಸಿ.ಜೆ. ಆನಂದ, ಪುರಸಭಾ ಸದಸ್ಯ ಕೆ.ಎಲ್. ಜಗದೀಶ್, ತಾಪಂ ಸದಸ್ಯ ಹಾಡ್ಯ ಮಹದೇವಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

