ಮೈಸೂರು

ಸಿದ್ದರಾಮಯ್ಯ ಭಾವಚಿತ್ರಕ್ಕೆ ಅಪಮಾನ: ಖಂಡನೆ

Published On :

ಕ.ಪ್ರ.ವಾರ್ತೆ ಹುಣಸೂರು ಮೇ 16
ದಲಿತಪರ ಸಂಘಟನೆಗಳ ಒಕ್ಕೂಟಗಳು ಚಾಮರಾಜನಗರದಲ್ಲಿ ಕರೆಯಲಾಗಿದ್ದ ಬಂದ್ ವೇಳೆಯಲ್ಲಿ ಸಂಘಟನೆಯ ಮುಖಂಡರು ರಾಜ್ಯದ ಮುಖ್ಯಮಂತ್ರಿಗಳ ಭಾವಚಿತ್ರವಿರುವ ಫ್ಲೆಕ್ಸ್‌ಗೆ ಚಪ್ಪಲಿಯಿಂದ ಹೊಡೆದಿರುವುದನ್ನು ಕುರುಬ ಸಮಾಜದ ಮುಖಂಡರು ಖಂಡಿಸಿದ್ದಾರೆ.
ದಲಿತ ಸಂಘಟನೆಗಳು ತಮ್ಮ ಸಮಾಜದ ನಾಯಕರ ಪರವಾಗಿ ನ್ಯಾಯಯುತ ಹೋರಾಟ ಮಾಡುವುದು ಸ್ವಾಗತಾರ್ಹ. ಆದರೆ,  ಸಿದ್ದರಾಮಯ್ಯ ಅವರಿಗೆ ಸಿಎಂ ಪಟ್ಟ ಸಿಕ್ಕಿರುವುದು ಸಾಮಾಜಿಕ ಪ್ರಜಾಪ್ರಭುತ್ವದ ನ್ಯಾಯದಡಿಯಲ್ಲಿ ಲಭಿಸಿದ್ದು, ಇದನ್ನು ಅರಿಯದ ಕೆಲ ಕಿಡಿಗೇಡಿಗಳು ಮುಖ್ಯಮಂತ್ರಿಗಳ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸುವ ಅಗತ್ಯತೆ ಏನಿದೆ ಎಂದು ಪುರಸಭೆ ಸದಸ್ಯ ಶಿವರಾಜು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಈ ಹೋರಾಟದ ಹಿಂದೆ ಪ್ರತಿಪಕ್ಷಗಳ ಕೈವಾಡವಿದ್ದು, ಈ ಘಟನೆಗೆ ಸಂಬಂಧಪಟ್ಟವರ ವಿರುದ್ಧ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ತಾವು ಸಹ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಶ್ರೀನಿವಾಸ್, ಕಿಟ್ಟಪ್ಪ, ಎ.ಪಿ. ಸ್ವಾಮಿ ಇದ್ದರು.
ಕನಕಸೇನೆ: ಮುಖ್ಯಮಂತ್ರಿ ಭಾವಚಿತ್ರಕ್ಕೆ ಮಾಡಿರುವ ಅವಮಾನದ ಬಗ್ಗೆ ತಾಲೂಕು ಕನಕಸೇನೆ ಗೌರವಾಧ್ಯಕ್ಷ ಧರ್ಮಾಪರಮೇಶ್ ಮತ್ತು ನೇರಳಕುಪ್ಪೆ ಗ್ರಾಪಂ ಮಾಜಿ ಉಪಾಧ್ಯಕ್ಷೆ ಸುಂದರಮ್ಮ, ಮಹದೇವ್ ಖಂಡಿಸಿದ್ದಾರೆ.

ಕಾಂಗ್ರೆಸ್ ಬೆಂಬಲಿಸಲು ವೀರಶೈವರಿಗೆ ಮನವಿ
ಕ.ಪ್ರ.ವಾರ್ತೆ ರಾವಂದೂರು  ಮೇ 16
ಮಾಧ್ಯಮಗಳ ಸಮೀಕ್ಷೆ ಏನೇ ಇದ್ದರೂ, ಅವುಗಳ ನಿರೀಕ್ಷೆ ಮೀರಿ ಕಾಂಗ್ರೆಸ್ ಪಕ್ಷ ಈ ಬಾರಿ ರಾಜ್ಯದಲ್ಲಿ ಬಹುಮತ ಪಡೆದಿರುವುದು ಮತದಾರರು ಪಕ್ಷದ ಮೇಲೆ ಇಟ್ಟಿರುವ ಅಭಿಮಾನ ತೋರಿಸುತ್ತದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಚ್.ಎಸ್. ಮಹದೇವಪ್ರಸಾದ್ ಹೇಳಿದರು.
ತಾಲೂಕಿನ ರಾವಂದೂರಿನಲ್ಲಿ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ವೀರಶೈವ ಸಮುದಾಯದ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷವು ನುಡಿದಂತೆ ನಡೆಯುವ ಪಕ್ಷವಾಗಿದ್ದು, ನೂತನ ಮುಖ್ಯಮಂತ್ರಿ ಸಿದ್ಧರಾಮಯ್ಯ, ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರುವುದರ ಮುಖಾಂತರ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆಂದು ತಿಳಿಸಿದರು.
ವೀರಶೈವ ಸಮುದಾಯ ಬರೀ ಬಿಜೆಪಿ ಅಥವಾ ಕೆಜೆಪಿ ಸ್ವತ್ತಲ್ಲ. ಬದಲಾಗಿ ಜಾತ್ಯತೀತ ಮನೋಭಾವ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಕೂಡಾ ಈ ಬಾರಿ ನಡೆದ ಚುನಾವಣೆಯಲ್ಲಿ ಬೆಂಬಲಿಸಿದ್ದಾರೆ. ಹಾಗೆಯೇ ತಾಲೂಕಿನ ವೀರಶೈವರು ಕೂಡಾ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದರ ಮುಖಾಂತರ ಕಾಂಗ್ರೆಸ್ ಅಭ್ಯರ್ಥಿ ಕೆ. ವೆಂಕಟೇಶ್ ಅವರನ್ನು ಕೈಹಿಡಿಯುವಂತೆ ಮನವಿ ಮಾಡಿದರು.
ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಪರಮೇಶ್ ಮಾತನಾಡಿ, ತಾಲೂಕಿನ ಎಲ್ಲ ವೀರಶೈವ ಬಾಂಧವರು ಕಾಂಗ್ರೆಸ್‌ನ್ನು ಬೆಂಬಲಿಸಿ ತಾಲೂಕಿನ ಅಭಿವೃದ್ಧಿ ಕೆಲಸಗಳಿಗೆ ಶಾಸಕ ಕೆ. ವೆಂಕಟೇಶ್ ಅವರ ಕೈ ಬಲಪಡಿಸುವಂತೆ ಮನವಿ ಮಾಡಿದರು.
ಗ್ರಾಪಂ ಸದಸ್ಯೆ ತಾರಾದೇವಿ ಮತ್ತಿತರರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಜಿಪಂ ಮಾಜಿ ಸದಸ್ಯ ಆರ್.ಎಸ್. ಚಿಕ್ಕವೀರಪ್ಪ, ಎಪಿಎಂಸಿ ಅಧ್ಯಕ್ಷೆ ಕೆ. ಹೊಲದಪ್ಪ, ತಾಪಂ ಸದಸ್ಯೆ ಬಿ.ವಿ. ಅನಿತಾ, ಪಪಂ ಸದಸ್ಯೆ ಅನಿತಾಶೇಖರ್, ಮುಖಂಡರಾದ ಆರ್.ವಿ. ವಿಶ್ವನಾಥ್, ಆರ್.ಎಸ್. ಮಹೇಶ್, ಕೆ.ಜೆ. ವೆಂಕಟೇಶ್, ಆರ್.ವಿ. ವಿಜಯಕುಮಾರ್, ಪಿ.ಎಂ. ಶಾಂತಪ್ಪ, ಆರ್.ವಿ. ರಾಜಶೇಖರ್, ಆರ್.ಡಿ. ಸತೀಶ್, ಚಂದ್ರಶೇಖರ್ ಆವರ್ತಿ ಇದ್ದರು.
ಲಾಬಿ ಮಾಡುವುದಿಲ್ಲ: ನಾನು ಸಚಿವ ಸ್ಥಾನಕ್ಕೆ ಯಾವುದೇ ಲಾಬಿ ಮಾಡುತ್ತಿಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನೀಡಿದ ಹುದ್ದೆಯನ್ನು ನಿಷ್ಠೆಯಿಂದ ಕಾರ್ಯ ನಿರ್ವಹಿಸುವುದಾಗಿ ಮಹದೇವ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು. ತಮ್ಮ ಕ್ಷೇತ್ರದಲ್ಲೂ ಕೂಡಾ ಮತದಾರರು ತಮ್ಮನ್ನು ಜಾತ್ಯತೀತ ಮನೋಭಾವದಿಂದ ಗೆಲ್ಲಿಸಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.