ಮೈಸೂರು

ಯೋಜನೇತರ ವೆಚ್ಚಕ್ಕೆ 47.57 ಕೋಟಿ

Published On :

ಕ.ಪ್ರ.ವಾರ್ತೆ   ಟಿ.ನರಸೀಪುರ   ಮೇ 28
2013- 14ನೇ ಯೋಜನೆಗಳಿಗೆ ಸಾಲಿಗೆ 11.74 ಕೋಟಿ ಆಯವ್ಯಯವನ್ನು ತಾಪಂ ಅಧ್ಯಕ್ಷ ತುಂಬಲ ಅಂದಾನಿ ಮಂಗಳವಾರ ನಡೆದ ಸಭೆಯಲ್ಲಿ ಮಂಡಿಸಿದರು.
ತಾಪಂ 2012- 13ನೇ ಸಾಲಿನ ಕಾರ್ಯಕ್ರಮಗಳಿಗೆ 7.40 ಕೋಟಿ ರು.ಗಳನ್ನು ನಿಗದಿಪಡಿಸಲಾಗಿತ್ತು. ಪ್ರಸ್ತುತ ಸಾಲಿಗೆ 11.74 ಕೋಟಿ ಪ್ರಸ್ತಾಪಿಸಲಾಗಿದ್ದು, ಹೆಚ್ಚುವರಿ 5.66 ಕೋಟಿಗಳನ್ನು ಶೇ. 48.20 ರಷ್ಟು ನಿಗದಿಪಡಿಸಲಾಗಿದೆ.
ಕಳೆದ ಸಾಲಿಗೆ ಯೋಜನೇತರ ಬಾಬ್ತಿನಲ್ಲಿ 37.75 ಕೋಟಿ ಅನುದಾನ ನಿಗದಿಯಾಗಿದ್ದು, 2013- 14ನೇ ಸಾಲಿಗೆ 47.57 ಕೋಟಿ ಪ್ರಸ್ತಾಪಿಸಿದ್ದು, ಪ್ರಸ್ತುತ ಅನುದಾನ ಮೊತ್ತ 9.81 ಕೋಟಿಗಳನ್ನು ಶೇ. 20.63 ರಷ್ಟು ಪ್ರಸ್ತಾಪಿಸಿದೆ. ವೈದ್ಯಕೀಯ ಶಿಕ್ಷಣ ಮತ್ತು ಜನಾರೋಗ್ಯಕ್ಕೆ ಹಾಗೂ ಶೈಕ್ಷಣಿಕ ಪ್ರಗತಿಗೆ ಪ್ರಾಮುಖ್ಯತೆ ನೀಡಿ, ಅಧ್ಯಕ್ಷರು ಮಂಡಿಸಿದ ಆಯವ್ಯಯಕ್ಕೆ ಬಹುತೇಕ ಸದಸ್ಯರು ಸಹಮತ ವ್ಯಕ್ತಪಡಿಸಿ ಅನುಮೋದನೆ ನೀಡಿದರು.
ತಾಪಂ ಸದಸ್ಯ ಬಸವರಾಜು ಮಾತನಾಡಿ, ಸಭೆಯ ನಡವಳಿಯ ಸೂಚನಾ ಪತ್ರದಲ್ಲಿ ಆಯವ್ಯಯ ಮಂಡನೆ ಪ್ರಸ್ತಾಪಿಸದೇ ಅನುಮೋದನೆ ಕೇಳುತ್ತಿರುವುದು ಸರಿಯಲ್ಲ. ಇದುವರೆಗೂ ಯಾವೊಂದು ಉಪಸಮಿತಿಯ ಸಭೆ ಕರೆದಿಲ್ಲ. ಅಭಿವೃದ್ಧಿಪರ ಇರುವ ಬಜೆಟ್ ಬೆಂಬಲಿಸುತ್ತೇನೆ. ಮೊದಲು ಉಪಸಮಿತಿ ರಚನೆ ಮಾಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ತುಂಬಲ ಅಂದಾನಿ ಅವರು ಜೂ. 17ಕ್ಕೆ ಉಪ ಸಮಿತಿಗಳನ್ನು ರಚನೆ ಮಾಡುವ ನಿರ್ಧಾರ ಪ್ರಕಟಿಸಿದರು.
ಸದಸ್ಯ ಸೀಹಳ್ಳಿ ಗುರುಮೂರ್ತಿ ಮಾತನಾಡಿ, ವಿವಿಧ ಇಲಾಖೆಗಳಿಗೆ ಅನುದಾನ ಹಂಚಿಕೆ ಮಾಡಿದ ಹೆಚ್ಚುವರಿ ಅನುದಾನ ಪ್ರಸ್ತಾಪಿಸಿರುವ ಆಯವ್ಯಯವನ್ನು ಮಂಡಿಸಿರುವುದರಿಂದ, ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಲು ಸಹಕಾರಿಯಾಗಿದೆ. ಯಾವ್ಯಾವ ಇಲಾಖೆಗಳಿಗೆ ಏಷ್ಟೆಷ್ಟು ಅನುದಾನ ಮಂಜೂರು ಮಾಡಿರುವ ಬಗ್ಗೆ ಮತ್ತು ಖರ್ಚಾದ ಬಗ್ಗೆಯೂ ಸ್ಪಷ್ಟ ಮಾಹಿತಿ ಸದಸ್ಯರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಚುನಾಯಿತ ಪ್ರತಿನಿಧಿಗಳನ್ನು ನಿರಂತರವಾಗಿ ನಿರ್ಲಕ್ಷಿಸಿ, ಕೃಷಿ ಇಲಾಖೆಯ ಸವಲತ್ತುಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಿ, ವಿತರಣೆ ಮಾಡಿರುವ ಸಹಾಯಕ ಕೃಷಿ ನಿರ್ದೇಶಕ ಕೃಷ್ಣಯ್ಯ ಅವರನ್ನು ಅನೇಕ ಸದಸ್ಯರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ. ವೆಂಕಟೇಶ್ ಮಾತನಾಡಿ, ತಾಲೂಕಿನ ಯಾವುದೆ ಇಲಾಖೆಯ ಸವಲತ್ತು ಅಥವಾ ಯೋಜನೆಗಳನ್ನು ಫಲಾನುಭವಿಗಳಿಗೆ ನೀಡುವಾಗ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತರಬೇಕು.
ಇಂತಹ ಸೂಚನೆಗಳನ್ನು ಹಲವು ಬಾರಿ ನೀಡಿದ್ದರೂ ತಪ್ಪುಗಳು ಪುನರಾವರ್ತನೆಯಾಗುತ್ತಿವೆ. ಇದು ಹೀಗೆ ಮುಂದುವರಿದರೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.  
ಸಭೆಯಲ್ಲಿ ಉಪಾಧ್ಯಕ್ಷೆ ಸುಜಾತ ವೆಂಕಟೇಶ್, ಮಾಜಿ ಅಧ್ಯಕ್ಷರಾದ ನಸ್ರೀನ್‌ರೂಹಿ, ಗಾಯಿತ್ರಿ ಸ್ವಾಮಿಗೌಡ, ಸದಸ್ಯರು, ಗ್ರಾಪಂ ಅಧ್ಯಕ್ಷ ಎಚ್. ಅಣ್ಣಯ್ಯಸ್ವಾಮಿ, ಜಿಪಂ ಎಇಇ ಎಸ್.ಆರ್. ಪುರುಷೋತ್ತಮ್, ತೋಟಗಾರಿಕೆ ಎಡಿ ಟಿ.ಎಸ್. ರಮೇಶ್, ಬಿಸಿಯೂಟ ಎಡಿ ಮಲ್ಲಿಕಾರ್ಜುನಯ್ಯ, ಬಿಸಿಎಂ ವಿಸ್ತರಣಾಧಿಕಾರಿ ವಿಶ್ವೇಶ್ವರಯ್ಯ, ಸಮಾಜ ಕಲ್ಯಾಣಾಧಿಕಾರಿ ಬಿ.ಎನ್. ಪ್ರಕಾಶ್, ಪಪಂ ಮುಖ್ಯಾಧಿಕಾರಿ ವಿ.ಟಿ. ವಿಲ್ಸನ್, ಸಹಾಯಕ ಲೆಕ್ಕಾಧಿಕಾರಿ ಕೃಷ್ಣಚಾರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.