ರಂಗಾಯಣದಲ್ಲಿ ರಾಜಕೀಯ ಬೇಡ
ಕ.ಪ್ರ.ವಾರ್ತೆ ಮೈಸೂರು ಅ. 2
ರಂಗಾಯಣದ ಆಡಳಿತದಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಮೂಗು ತೂರಿಸುವ ಕೆಲಸ ಆಗಬಾರದು ಎಂದು ರಂಗಾಯಣ ನಿರ್ದೇಶಕ ಎಚ್.ಜನಾರ್ದನ್ (ಜನ್ನಿ) ಹೇಳಿದರು.
ರಂಗಾಯಣ ನಿರ್ದೇಶಕರಾಗಿ ಬುಧವಾರ ಉಪ ನಿರ್ದೇಶಕ ಎಸ್.ಐ. ಬಾವಿಕಟ್ಟಿ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ರಂಗಾಯಣದ ಆಡಳಿತದಲ್ಲಿ ಯಾರೊಬ್ಬರೂ ಮೂಗು ತೂರಿಸಬಾರದು. ಅದು ಅಧಿಕಾರಿಗಳಿರಲಿ, ರಾಜಕಾರಣಿಗಳಿರಲಿ. ಹಿಂದೆ ಆಗಿರುವ ತಪ್ಪುಗಳು ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಹಾಗೆ ಮೂಗು ತೂರಿಸಿದರೆ ಕಲಾವಿದರ ಸೃಜನಶೀಲತೆಗೆ ತೊಂದರೆ ಉಂಟಾಗುತ್ತದೆ ಎಂದರು.
ರಂಗಾಯಣದ ಆಡಳಿತದಲ್ಲಿ ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಸಹಿ ಹಾಕುವ ಹಕ್ಕು ಉಪ ನಿರ್ದೇಶಕರಿಗೆ ಮಾತ್ರ ನೀಡಲಾಗಿದೆ. ಈ ಹಿಂದಿನ ರಂಗ ಸಮಾಜ ಈ ತೀರ್ಮಾನ ಕೈಗೊಂಡಿತ್ತು. ಆದರೆ ಈಗಿನ ರಂಗ ಸಮಾಜದಲ್ಲಿ ಈ ಬಗ್ಗೆ ಚರ್ಚೆ ನಡೆದಂತಿಲ್ಲ. ನಾನು ಸಹಿ ಮಾಡಿದರೇನು, ಬಿಟ್ಟರೇನು ನನ್ನ ಒಪ್ಪಿಗೆ ಇಲ್ಲದೆ ಉಪ ನಿರ್ದೇಶಕರು ಸಹಿ ಹಾಕುವಂತಿಲ್ಲ. ಉಪ ನಿರ್ದೇಶಕರದ್ದು ಜವಾಬ್ದಾರಿಯಾದರೆ, ನಿರ್ದೇಶಕರದ್ದು ಹೊಣೆಗಾರಿಕೆ. ಜವಾಬ್ದಾರಿಗಿಂತ ಹೊಣೆಗಾರಿಕೆ ದೊಡ್ಡದು ಎಂದರು.
ಕರ್ನಾಟಕಕ್ಕೆ ಸೀಮಿತವಲ್ಲ: ಮೈಸೂರಿನ ರಂಗಾಯಣವು ಕೇವಲ ಮೈಸೂರಿಗೆ ಮಾತ್ರ ಸೀಮಿತವಲ್ಲ. ಇದು ಕರ್ನಾಟಕ ರಂಗಾಯಣ. ಆದ್ದರಿಂದ ವರ್ಷಪೂರ್ತಿ ನಾಟಕ ಪ್ರದರ್ಶನವನ್ನು ರಾಜ್ಯದ ವಿವಿಧ ಭಾಗಗಳಿಗೆ ತೆರಳಿ ಪ್ರದರ್ಶನ ನೀಡುವ ಉದ್ದೇಶ ಇದೆ. ಅವಕಾಶಗಳು ಇರುವ ಕಡೆಗಿಂತ ಆಯ್ಕೆಯ ಮಿತಿ ಇರುವ ಕಡೆ ನಾಟಕ ಪ್ರದರ್ಶನ ನೀಡುವ ಉದ್ದೇಶ ನನ್ನದು ಮತ್ತು ಅದು ಕಲಾವಿದರ ಜವಾಬ್ದಾರಿ ಕೂಡ. ಕಾರಂತರ ಕನಸು ನನಸಾಗಬೇಕಿದ್ದರೆ ಅದು ನಡೆಯಬೇಕು ಎಂದು ಅವರು ಹೇಳಿದರು.
ಬ್ರೆಜಿಲ್ನ ಎಲಿಸಾ ಅವರು ನಾಟಕ ನಿರ್ದೇಶಿಸಲು ಬಂದಾಗ ಅವರನ್ನು ಹಿಂದಕ್ಕೆ ಕಳುಹಿಸಲಾಯಿತು. ಅಧಿಕಾರಿಗಳ ಗೊಂದಲದಿಂದ ಹೀಗೆ ಆಗುತ್ತದೆ ಎಂದ ಅವರು, ಧಾರವಾಡ ಮತ್ತು ಶಿವಮೊಗ್ಗ ರಂಗಾಯಣದಲ್ಲಿಯೂ ಮೂರ್ನಾಲ್ಕು ನಾಟಕ ಪ್ರದರ್ಶಿಸುವ ಉದ್ದೇಶ ಇದೆ ಎಂದರು.
ರಂಗಾಯಣ ಆವರಣದಲ್ಲಿ ಕಾರಂತರ ವಸ್ತು ಸಂಗ್ರಹಾಲಯ ಕಾಮಗಾರಿಯನ್ನು ಸದ್ಯದಲ್ಲಿಯೆ ಆರಂಭಿಸಲಾಗುವುದು. ಅದಕ್ಕಾಗಿ ಅಗತ್ಯವಿರುವ ಅನುದಾನವನ್ನು ಸರ್ಕಾರ ನೀಡಲು ಸಿದ್ಧವಿದೆ. ಆ ಒಂದು ಸಂಗ್ರಹಾಲಯವು ಅಧ್ಯಯನಶೀಲತೆಗೆ ಮತ್ತು ಸಂಶೋಧನೆಗೆ ಪೂರಕವಾಗಿರಬೇಕು ಎಂದು ಆಶಿಸಿದರು.
ಅಧಿಕಾರ ಸ್ವೀಕರಿಸಲು ರಂಗಾಯಣಕ್ಕೆ ಆಗಮಿಸಿದ ಜನಾರ್ಧನ ಅವರನ್ನು ರಂಗಾಯಣ ಕಲಾವಿದರು ಆತ್ಮೀಯವಾಗಿ ಬರಮಾಡಿಕೊಂಡರು. ಬಾವಿಕಟ್ಟಿ ಅವರು ಹೂಗುಚ್ಚ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿ, ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

