ಜ್ಞಾನವೃದ್ಧಿಗೆ ಚರ್ಚಾ ಸ್ಪರ್ಧೆ ಉಪಯುಕ್ತ
ಕ.ಪ್ರ.ವಾರ್ತೆ ಮೈಸೂರು ಅ. 19
ವಿದ್ಯಾರ್ಥಿಗಳ ಜ್ಞಾನವೃದ್ಧಿಗೆ ಚರ್ಚಾ ಸ್ಪರ್ಧೆ ಉಪಯುಕ್ತ ಎಂದು ಹಿರಿಯ ವಕೀಲ ಎಲ್. ಗೋವಿಂದರಾಜು ಹೇಳಿದರು.
ರೋಟರಿ ಮೈಸೂರು ಮಿಡ್ಟೌನ್ ಹಾಗೂ ಎಸ್ಡಿಎಂ ನಿರ್ವಹಣಾ ಅಭಿವೃದ್ಧಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಎಸ್ಡಿಎಂ ಐಎಂಡಿ ಕಾಲೇಜಿನಲ್ಲಿ ಶನಿವಾರ ಪ್ರೊ. ವೈ. ಭಗವಾನ್ ಸ್ಮರಣಾರ್ಥ ಏರ್ಪಡಿಸಿದ್ದ ರಾಜ್ಯ ಮಟ್ಟದ ಅಂತರ ಕಾಲೇಜು ಇಂಗ್ಲಿಷ್ ಚರ್ಚಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಚರ್ಚಾ ಸ್ಪರ್ಧೆಗೆ ಈ ಹಿಂದಿನ ಕಾಲದಲ್ಲಿ ಸಾಹಿತ್ಯವನ್ನು ಓದಿ ತಯಾರಿ ನಡೆಸುತ್ತಿದ್ದರು. ಅಲ್ಲದೆ ಆ ಚರ್ಚಾ ಸ್ಪರ್ಧೆಯ ಪೈಪೋಟಿ ಎದುರಿಸಲು ಬೇಕಾದ ಜ್ಞಾನ ಪಡೆಯಲು ಪ್ರತ್ಯೇಕ ಸಮಯ ಮೀಸಲಿರಿಸಿ ಅಧ್ಯಯನಶೀಲರಾಗುತ್ತಿದ್ದರು. ಆದರೆ ಇಂದು ವಿದ್ಯಾರ್ಥಿಗಳಲ್ಲಿ ಅಂತಹ ಮನೋಭಾವ ಕಾಣುತ್ತಿಲ್ಲ ಎಂದರು.
ಮೊದಲು ಇಂತಹ ಕಾರ್ಯಕ್ರಮಗಳಲ್ಲಿ ಒಂದು ವಿಷಯ ಕುರಿತಾಗಿ ಪರ ಮತ್ತು ವಿರೋಧ ಚಿರ್ಚೆ ಮಾತ್ರ ನಡೆಯುತ್ತಿತ್ತು. ಈಗ ಕಾಲ ಬದಲಾದಂತೆ, ಹಕ್ಕು- ಹಕ್ಕು, ಸತ್ಯ- ಸತ್ಯ ಹಾಗೂ ಪ್ರಜಾಪ್ರಭುತ್ವ- ಪ್ರಜಾಪ್ರಭುತ್ವ ಎಂಬಿತ್ಯಾದಿ ವಿಷಯಗಳ ಕುರಿತು ಚರ್ಚೆ ಮಾಡಬಹುದಾಗಿದೆ. ಎಲ್ಲಾ ಕಾಲೇಜುಗಳು ಇದಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಅವರು ತಿಳಿಸಿದರು.
ಇಂದು ಕಂಪ್ಯೂಟರ್ ಸೇರಿದಂತೆ ಅನೇಕ ಆಧುನಿಕ ತಂತ್ರಜ್ಞಾನಗಳು ಲಭ್ಯವಿರುವ ಕಾರಣ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ಬಹು ಸುಲಭವಾಗಿ ದೊರಕಲಿದೆ. ಇದರ ನೆರವು ಪಡೆದು ಯಾವುದೇ ವಿಷಯಕ್ಕಾಗಿ ಚರ್ಚೆ ಮಾಡಲು ಸಿದ್ದರಾಗಬಹುದು. ಇಂತಹ ಚರ್ಚಾ ಸ್ಪರ್ಧೆ ಹೆಚ್ಚಿನ ಯುವಕರು ಮುಂದಾಗಬೇಕು. ಇದರಿಂದ ಜ್ಞಾನ ವಿಕಾಸದ ಜತೆಗೆ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಎಸ್ಡಿಎಂ ಐಎಂಡಿ ನಿರ್ದೇಶಕ ಎನ್.ಆರ್. ಪರಶುರಾಮನ್, ಇದೇ ಮೊದಲ ಬಾರಿಗೆ ನಮ್ಮ ಸಂಸ್ಥೆಯಲ್ಲಿ ಇಂತಹ ದೊಡ್ಡಮಟ್ಟದ ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿದೆ. ಇನ್ನೂ ಮುಂದೆಯು ಸಹ ರೋಟರಿ ಮೈಸೂರು ಮಿಡ್ಟೌನ್ ಜತೆ ಸೇರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ರೋಟರಿ ಮೈಸೂರು ಮಿಡ್ಟೌನ್ ಅಧ್ಯಕ್ಷ ಎಸ್. ಭಾನುಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಡಾ. ಕೆ.ಎ. ಪ್ರಹ್ಲಾದ್, ಯುವಸೇವಾ ವಿಭಾಗದ ನಿರ್ದೇಶಕ ಪಿ. ಸಂಜಯ್, ಎಸ್ಡಿಎಂ ಐಎಂಡಿ ಉಪ ನಿರ್ದೇಶಕಿ ಡಾ. ಎಚ್. ಗಾಯತ್ರಿ ಹಾಗೂ ವೈ. ಭಗವಾನ್ ಅವರ ಪುತ್ರಿ ಚಂದ್ರಿಕಾ ಇದ್ದರು.
ರಾಜ್ಯದ ನಾನಾ ಕಾಲೇಜುಗಳಿಂದ ಎಂಜಿನಿಯರಿಂಗ್, ಕಾನೂನು, ಔಷಧ ವಿಜ್ಞಾನ, ವಾಣಿಜ್ಯ ಹಾಗೂ ನಿರ್ವಹಣಾ ಅಧ್ಯಯನ ಮಾಡುತ್ತಿರುವ 60 ವಿದ್ಯಾರ್ಥಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

