ಮೈಸೂರು

ಖಾದಿ ಉತ್ಸವ ಆರಂಭ

Published On :

ಕ.ಪ್ರ.ವಾರ್ತೆ ಮೈಸೂರು ಅ. 20
'ಉಷ್ಣಕಾಲೇಶೀತಂ ಶೀತಕಾಲೇಉಷ್ಣಂ ಇದುವೆ ಖಾದಿ ವಸ್ತ್ರಂ...'
- ಈ ವಾಕ್ಯವೇ ತಿಳಿಸುವಂತೆ ಖಾದಿಯ ಮಹತ್ವವನ್ನು ಪ್ರತಿಯೊಬ್ಬರೂ ಅರಿತಾಗ ಮಹಾತ್ಮ ಗಾಂಧೀಜಿಯವರ ಕನಸು ನನಸಾಗಿ ಗ್ರಾಮೋದ್ಯೋಗ ಬೆಳವಣಿಗೆ ಹೊಂದುತ್ತದೆ. ಗಾಂಧೀಜಿಯವರ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಖಾದಿ ಉತ್ಸವ ಆಯೋಜಿಸಿದೆ.
ಈ ಉತ್ಸವದಲ್ಲಿ ನಾಡಿನ ಇತರೆ ಭಾಗದಿಂದ 20ಕ್ಕೂ ಹೆಚ್ಚು ಖಾದಿ ಗ್ರಾಮೋದ್ಯೋಗ ಸಂಸ್ಥೆಗಳು ಮಳಿಗೆಗಳನ್ನು ಸ್ಥಾಪಿಸಿ ಕೈಮಗ್ಗದಿಂದ ನೇಯ್ದ ಬಟ್ಟೆಗಳನ್ನು ಪ್ರದರ್ಶಿಸುತ್ತಿವೆ. ಅರಳೆ ಖಾದಿ, ಪಾಲಿ ಖಾದಿ, ಉಲ್ಲನ್ ಖಾದಿ, ರೇಷ್ಮೆ ಖಾದಿ ಬಟ್ಟೆಗಳು ಗಮನ ಸೆಳೆಯುತ್ತಿವೆ. ಕುರ್ತಾ, ಸಿಲ್ಕ್ ಬಟ್ಟೆಗಳು, ಪ್ರಿಂಟೆಂಡ್ ಸಿಲ್ಕ್ ಬಟ್ಟೆಗಳು, ಕೈಮಗ್ಗದ ಸೀರೆಗಳು, ಟವಲ್, ಜಕಾರ್ಡ್ ಸಿಲ್ಕ್ ಬಟ್ಟೆಗಳು ಪ್ರದರ್ಶನಲ್ಲಿವೆ.
ಮಂಡ್ಯ ಜಿಲ್ಲೆ ಹೊಳಲು ಗ್ರಾಮದ ಗೊಂಬೆಗಳಿದ್ದು, ಮರದಿಂದ ತಯಾರಿಸಿದ ಕಿಟಿ ಕಿಟಿ ಆಟಿಕೆ, ರಿಂಗ್ ಸೆಟ್ಸ್, ದಾರದ ಬುಗುರಿ, ವುಡ್ ಇನ್‌ಲೇದಿಂದ ಮಾಡಿರುವ ಪೆನ್ನುಗಳು, ರೋಸ್ ವುಡ್ ವರ್ಕ್ಸ್, ಕೃತಕ ಹೂವುಗಳು, ಚರ್ಮದಿಂದ ತಯಾರಿಸಿದ ಚಪ್ಪಲಿಗಳು, ಪರ್ಸ್, ಗೋಡೆ ನೇತಾಕುಗಳನ್ನು ಪ್ರದರ್ಶಿಸಲಾಗಿದೆ. ಅಮೀನಗಡ ಕರದಂಟು, ಕಾಂಡಿಮೆಂಟ್ಸ್, ಮಸಾಲೆ ಪದಾರ್ಥಗಳು ವಿಶೇಷವಾಗಿವೆ.
1 ಗ್ರಾಂ ಚಿನ್ನದ ಆಭರಣ: ಒಂದು ಗ್ರಾಂ ಚಿನ್ನವನ್ನು ಬಳಸಿ ತಯಾರಿಸಿದ ಆಭರಣಗಳು ನೋಡುಗರ ಗಮನ ಸೆಳೆಯುತ್ತಿವೆ. ನೆಕ್ಲೆಸ್, ಸರ, ಮಣಿಕಟ್ಟು, ಮೋಹನ ಮಾಲ ಸರ, ಓಲೆ, ಕ್ರಿಸ್ಟಲ್ ಮಣಿಗಳು, ಮಲೆಷಿಯನ್ ಬೀಡ್ಸ್, ಬಳೆಗಳನ್ನು ಕುಸುರಿ ಕೆಲಸದಿಂದ ತಯಾರಿಸಲಾಗಿದ್ದು, ವಿವಿಧ ವಿನ್ಯಾಸಗಳಿಂದ ಕೂಡಿವೆ.
ಗಾಂಧಿ ಕನಸು ಇನ್ನೂ ಈಡೇರಿಲ್ಲ: ಈ ಉತ್ಸವಕ್ಕೆ ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರು ಭಾನುವಾರ ಸಂಜೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರು ವಿದೇಶಿ ವಸ್ತುಗಳನ್ನು ತಿರಸ್ಕರಿಸಿ ಸ್ವದೇಶಿ ವಸ್ತುಗಳನ್ನು ಬಳಸುವಂತೆ ಅಸಹಕಾರ ಚಳವಳಿಯ ಮೂಲಕ ಕರೆ ಕೊಟ್ಟರು. ಸ್ವಾತಂತ್ರ್ಯ ಪೂರ್ವದಲ್ಲಿ ಅವರು ಕಂಡಿದ್ದ ಕನಸು ಇಂದಿಗೂ ಈಡೇರಿಲ್ಲ. ಗುಡಿ ಕೈಗಾರಿಕೆಗಳು ಬೆಳವಣಿಗೆ ಹೊಂದಿಲ್ಲ. ಭಾರತ ಶೇ.70ರಷ್ಟು ಹಳ್ಳಿಗಳಿಂದ ಕೂಡಿದ್ದು, ಅಲ್ಲಿನ ಜನಕ್ಕೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಹಳ್ಳಿಗಳು ಉದ್ಧಾರವಾದರೆ ದೇಶ ಉದ್ಧಾರವಾದಂತೆ ಎಂಬುದು ಗಾಂಧಿ ಆಶಯವಾಗಿತ್ತು. ಅದರಂತೆ ಸಂಸತ್ತಿಗೆ ಇರುವಷ್ಟು ಮಹತ್ವ ಗ್ರಾಪಂಗಳಿಗೂ ಇದೆ. ಅಧಿಕಾರ ವಿಕೇಂದ್ರಿಕರಣ ಮಾಡಿ ಜನ ಸಾಮಾನ್ಯರಿಗೆ ಅಧಿಕಾರ ನೀಡಲಾಗಿದೆ. ಗುಡಿ ಕೈಗಾರಿಕೆಗಳ ಮೂಲಕ 1 ಲಕ್ಷ ಜನರಿಗೆ ಉದ್ಯೋಗ ನೀಡಲು ತೀರ್ಮಾನಿಸಲಾಗಿದೆ. ಅದನ್ನು ಆರಂಭಿಸಲು ಸಬ್ಸಿಡಿ, ಸಾಲ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸರ್ಕಾರದ ಸವಲತ್ತನ್ನು ಬಳಸಿಕೊಂಡು ಸ್ವ ಉದ್ಯೋಗ ಕಂಡುಕೊಳ್ಳಬೇಕು. ಆರ್ಥಿಕವಾಗಿ ಸಬಲರಾಗುವಂತೆ ಅವರು ಕರೆ ನೀಡಿದರು. ಶಾಸಕ ವಾಸು ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವು, ತಾಪಂ ಪ್ರಭಾರ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಕೆ.ಎನ್. ಶಿವಲಿಂಗಯ್ಯ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಂ. ಶಿವಶಂಕರ್, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಸಿಇಒ ರಾಧಾಕೃಷ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.