ಮೈಸೂರು

ವಸ್ತುಪ್ರದರ್ಶನದಲ್ಲಿ ಜೈಲು ಹಕ್ಕಿಗಳ ಹಾಡು

Published On :

ಕ.ಪ್ರ.ವಾರ್ತೆ ಮೈಸೂರು ಅ. 20
ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಭಾನುವಾರ ಸಂಜೆ ಮೈಸೂರು ಕೇಂದ್ರ ಕಾರಾಗೃಹದ ಪರಿವರ್ತನ ಮೆಲೋಡಿಸ್ ಆರ್ಕೇಸ್ಟ್ರಾ ತಂಡದವರು ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮವು ಪ್ರೇಕ್ಷಕರ ಮನಗೆದ್ದಿತು.
ಜೈಲಿನ ನಾಲ್ಕು ಗೋಡೆ ಮಧ್ಯೆ ಹಾಡುತ್ತಿದ್ದ ಕೈದಿಗಳು ಅಧಿಕಾರಿಗಳ ಸಹಾಯದಿಂದ ಜೈಲಿನಲ್ಲಿ ನಡೆಯುತ್ತಿದ್ದ ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ, ಗೌರಿ- ಗಣೇಶ ಹಬ್ಬದ ವೇಳೆ ಹಾಡುತ್ತಿದ್ದರು. ಇದಕ್ಕಾಗಿ ಜೈಲು ವತಿಯಿಂದ ಸಂಗೀತ ಪರಿಕರಗಳನ್ನು ಸಹ ಕೊಡಿಸಲಾಗಿತ್ತು. ಗಾಯಕ ಮಹೇಶ್ ವಿಜಯ 'ವಿನಾಯಕನೆ ಗಜಮುಖನೇ...' ಭಕ್ತಿಗೀತೆ ಹಾಡಿನೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಿಕ ವೆಂಕಟೇಶ್ ಮತ್ತು ರೋಸಿ ಧ್ವನಿಯಲ್ಲಿ ಶಬ್ದವೇದಿ ಚಿತ್ರದ 'ಓಹೋ ಪ್ರೇಮ ಕಾಶ್ಮೀರ...' ಗಮನ ಸೆಳೆಯಿತು. ಆಪ್ತರಕ್ಷಕ ಚಿತ್ರದ 'ಚಾಮುಂಡಿ ತಾಯಿ ಆಣೆ...' ಹಾಡನ್ನು ಚಿಕ್ಕೂಸು ಹಾಡಿದರು.
ಮೈನಾ ಚಿತ್ರದ 'ಮೊದಲ ಮಳೆಯಂತೆ...', ಗೋವಿಂದಾಯ ನಮಃ ಚಿತ್ರದ 'ಪ್ಯಾರ್ಗೆ ಆಗ್ಬಿಟೈತೆ...', ಆಪ್ತಮಿತ್ರದ 'ಕಾಲವನ್ನು ತಡೆಯೋರು ಯಾರು ಇಲ್ಲ...', ಮದರಂಗಿಯ 'ಡಾರ್ಲಿಂಗ್ ಡಾರ್ಲಿಂಗ್...' ಹಾಡುಗಳಿಗೆ ಜೈಲು ಹಕ್ಕಿಗಳು ಧ್ವನಿಯಾದರು. ಇನ್ನೂ ಮೊದಲಾದ ಹಾಡುಗಳಿಗೆ ಮಹೇಶ್, ವೆಂಕಟೇಶ್, ಚಂದ್ರ, ಯೋಗೇಶ್, ಸುರೇಶ್, ಶರತ್, ಮೋಹನ ಅವರೊಂದಿಗೆ ರೋಸಿ ಧ್ವನಿಗೂಡಿಸಿದರು. ಪಿ.ಎಸ್. ಮೂರ್ತಿ ಸಂಗೀತ ಸಹಾಯ ಮಾಡಿದರು. ಚಿಕ್ಕೂಸಯ್ಯ, ಎಚ್.ಕೆ. ಪುಟ್ಟು ತಬಲ, ರಂಗಸ್ವಾಮಿ ರಿದಂ ಸಾಥ್ ನೀಡಿದರು.
ಸಾಂಸ್ಕೃತಿಕ ಉಪ ಸಮಿತಿ ಉಪಾಧ್ಯಕ್ಷ ಎಂ.ಕೆ. ಅಶೋಕ್, ಜೈಲು ಅಧೀಕ್ಷಕ ಜಯಸಿಂಹ ಇದ್ದರು.

ಎಟಿಎಂನಲ್ಲಿ ಕಳವಿಗೆ ಯತ್ನ
ಮೈಸೂರು: ಕುವೆಂಪುನಗರದ ಅನಿಕೇತನ ರಸ್ತೆಯಲ್ಲಿರುವ ಇಂಡಿಯನ್ ಓವರ್‌ಸಿಸ್ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ವ್ಯಕ್ತಿಯೊಬ್ಬ ಹಣ ಕಳವಿಗೆ ಯತ್ನಿಸಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಹಣ ಡ್ರಾ ಮಾಡುವ ನೆಪದಲ್ಲಿ ಬೆಳಗ್ಗೆ 8.30ಕ್ಕೆ ಎಟಿಎಂಗೆ ಬಂದ ವ್ಯಕ್ತಿಯೊಬ್ಬ ಎಟಿಎಂ ಯಂತ್ರವನ್ನು ಜಖಂಗೊಳಿಸಲು ಮುಂದಾದ. ಈ ವೇಳೆ ಸೈರನ್ ಕೂಗಿಕೊಂಡಿದ್ದು, ಕೂಡಲೇ ಆ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ.ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ಠಾಣೆಗಳಲ್ಲಿ ಸಾರ್ವಜನಿಕ ಸಭೆ
ಮೈಸೂರು: ನಗರದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಭಾನುವಾರ ಸಾರ್ವಜನಿಕ ಕುಂದುಕೊರತೆ ಸಭೆ ನಡೆಯಿತು.ದೇವರಾಜ, ಲಷ್ಕರ್, ನಜರ್‌ಬಾದ್, ಉದಯಗಿರಿ, ನರಸಿಂಹರಾಜ, ಮಂಡಿ, ವಿವಿ ಪುರಂ, ಮೇಟಗಳ್ಳಿ, ಜಯಲಕ್ಷ್ಮಿಪುರಂ, ವಿಜಯನಗರ, ಕೃಷ್ಣರಾಜ, ಲಕ್ಷ್ಮಿಪುರಂ, ಅಶೋಕಪುರಂ, ವಿದ್ಯಾರಣ್ಯಪುರಂ, ಸರಸ್ವತಿಪುರಂ ಮತ್ತು ಕುವೆಂಪುನಗರ ಠಾಣೆಗಳಲ್ಲಿ ಸಭೆ ನಡೆಯಿತು. ಆಯಾ ಠಾಣೆಗಳ ಇನ್ಸ್‌ಪೆಕ್ಟರ್, ಎಸ್‌ಐ ಮತ್ತು ಸಿಬ್ಬಂದಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಕೆಲವೊಂದಕ್ಕೆ ಸ್ಥಳದಲ್ಲೇ ಪರಿಹಾರ ನೀಡಿದ್ದಾರೆ. ಉಳಿದ ದೂರುಗಳನ್ನು ಪರಿಹರಿಸುವ ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.